ರೈಲ್ವೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳ ಜತೆ ಚರ್ಚೆ

KannadaprabhaNewsNetwork |  
Published : Jul 01, 2025, 12:47 AM IST
30ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ಸಂಸದ ಎಂ.ಮಲ್ಲೇಶಬಾಬು ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು ಆಯೋಜಿಸಿ ಸನ್ಮಾನಿಸಿದರು. | Kannada Prabha

ಸಾರಾಂಶ

ಸುಮಾರು ೨೫ ವರ್ಷಗಳಿಂದ ಕಾಮಸಮುದ್ರ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಿಂದ ನೂರಾರು ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿತ್ತು, ೨೫ ವರ್ಷಗಳ ಬೇಡಿಕೆಯನ್ನು ಸಂಸದ ಮಲ್ಲೇಶ್‌ಬಾಬು ಅವರು ರೈಲ್ವೆ ಸಚಿವರ ಬಳಿ ಚರ್ಚಿಸಿ ಅಲ್ಲಿ ಮೇಲ್ವೇತುವೆ ನಿರ್ಮಾಮಾಡಲು ಮಾಡಿದ ಮನವಿಗೆ ಸ್ಪಂದಿಸಿದ್ದರಿಂದ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಹುದುಕುಳ ಗ್ರಾಮದ ಬಳಿ ನಿರ್ಮಾಣವಾಗಿರುವ ರೈಲ್ವೆ ಸ್ಟೇಷನ್ ಪೂರ್ಣವಾಗಿದ್ದರೂ ಉದ್ಘಾಟಿಸದೆ ಕಡೆಗಣಿಸಿರುವುದರಿಂದ ಕಟ್ಟಡ ಉದ್ಘಾಟನೆಗೆ ಮೊದಲೇ ಶಿಥಿಲಾವಸ್ಥೆಗೆ ತಲುಪಿರುವುದು ಸೇರಿದಂತೆ ಇತರೇ ರೈಲ್ವೆ ಕಾಮಗಾರಿಗಳ ಬಗ್ಗೆ ಪೂರ್ಣಗೊಳಿಸಲು ಇಷ್ಟರಲ್ಲೆ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಂಸದ ಎಂ.ಮಲ್ಲೇಶಬಾಬು ಭರವಸೆ ನೀಡಿದರು.ಪಟ್ಟಣದ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಂಸದರ ೫೧ನೇ ಜನ್ಮದಿನ ಆಚರಣೆಯಲ್ಲಿ ಭಾಗವಹಿಸಿ ಬೃಹತ್ ಕೇಕ್ ಕತ್ತರಿಸಿದ ಬಳಿಕ ಮಾತನಾಡಿದ ಅವರು ಬಹುಷ ಹುದುಕುಳ ರೈಲ್ವೆ ಸ್ಟೇಷನ್‌ಲ್ಲಿ ಪ್ರಯಾಣಿಕರ ಪ್ರಮಾಣ ಅಷ್ಟಾಗಿ ಇರದ ಕಾರಣ ವಿಳಂಬ ಮಾಡಿರಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣವನ್ನು ಉದ್ಘಾಟಿಸಲು ಶ್ರಮಿಸುವುದಾಗಿ ತಿಳಿಸಿದರು.

ಇನ್ನು 3 ತಿಂಗಳಲ್ಲಿ ಕಾಮಗಾರಿ

ಸಂಸದರಾಗಿ ನೀವು ವರ್ಷ ಪೂರೈಸಿದ ಹಿನ್ನೆಲೆ ಕ್ಷೇತ್ರಕ್ಕೆ ಹಾಗೂ ಜಿಲ್ಲೆ ಏನು ಕೊಡುಗೆ ನೀಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಾರು ೨೫ ವರ್ಷಗಳಿಂದ ಕಾಮಸಮುದ್ರ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಿಂದ ನೂರಾರು ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿತ್ತು, ೨೫ ವರ್ಷಗಳ ಬೇಡಿಕೆಯನ್ನು ನಾನು ಸಂಸದನಾದ ಮೇಲೆ ರೈಲ್ವೆ ಸಚಿವರ ಬಳಿ ಚರ್ಚಿಸಿ ಅಲ್ಲಿ ಮೇಲ್ವೇತುವೆ ನಿರ್ಮಾಣ ಮಾಡಲು ಮಾಡಿದ ಮನವಿಗೆ ಸ್ಪಂದಿಸಿರುವ ಸಚಿವರು ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿದ್ದು ಇನ್ನು ೩ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ.ಇದಲ್ಲದೆ ಕಾಮಸಮುದ್ರ,ಬೂದಿಕೊಟೆ ಹೋಬಳಿಯ ೧೧ ಗ್ರಾಮಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗಿದೆ, ಬಿಸಾನತ್ತಂ ರೈಲ್ವೆ ನಿಲ್ದಾಣದ ರಸ್ತೆ ದುರಸ್ತಿಗೆ ೧೫ ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ, ಕೋಲಾರದ ಬೈಪಾಸ್ ರಸ್ತೆಯನ್ನು ನಾಲ್ಕು ಪಥದಿಂದ ಆರು ಪಥದ ರಸ್ತೆಗೆ ಮಂಜೂರು ಮಾಡಲಾಗಿದೆ ಮಾಲೂರು ಬಿಟ್ಟು ಉಳಿದ ಎಲ್ಲಾ ತಾಲೂಕುಗಳಲ್ಲಿ ಸಂಸದರ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ ಒಟ್ಟಾರೆಯಾಗಿ ಸಂಸದರ ವರ್ಷದ ೫ ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಸಲಾಗಿದೆ ಎಂದು ವಿವರಿಸಿದರು.

ಕ್ಷೇತ್ರದಲ್ಲಿ ಜೆಡಿಎಸ್‌ ಬಲಿಷ್ಟವಾಗಿದೆ

ಇದಲ್ಲದೆ ಎಸ್‌ಎನ್ ರೆಸಾರ್ಟ್ ಬಳಿ ಹಾಗೂ ಕೋಲಾರದ ಸಾನಿಟೋರಿಯಂ ಬಳಿ ಮೇಲ್ಸೇತುವೆ ನಿರ್ಮಾಣಕ್ಕೂ ಪ್ರಸ್ತಾಪ ಮಾಡಿದ್ದೂ ಅದೂ ಸಹ ಟೆಂಡರ್ ಹಂತದಲ್ಲಿದೆ ಎಂದರು. ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಯಾರೋ ಒಬ್ಬರು ಪಕ್ಷಾಂತರ ಮಾಡಿದಾಕ್ಷಣ ಎಲ್ಲರೂ ಪಕ್ಷಾಂತರ ಮಾಡಿದ್ದಾರೆಂದು ಹೇಳುವುದು ತಪ್ಪು. ಕ್ಷೇತ್ರದಲ್ಲಿ ಪಕ್ಷ ಬಲಿಷ್ಟವಾಗಿದೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಪಕ್ಷದ ಮುಖಂಡರಾದ ಹನುಮಂತು, ವಡಗೂರು ರಾಮು, ಮುನಿಯಪ್ಪ, ಬಾಲಕೃಷ್ಣ,ಬಾಲಚಂದ್ರ, ಪುರಸಭೆ ಸದಸ್ಯ ಸುನೀಲ್, ಕಪಾಲಿಶಂಕರ್, ಸತೀಶ್ ಗೌಡ, ಮಾಲೂರು ರಾಮೇಗೌಡ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ