ಕನ್ನಡಪ್ರಭ ವಾರ್ತೆ ಕಾರ್ಕಳ
ನಿರಂತರ ವ್ಯಾಯಾಮ, ನಿಯಮಿತ ಗುಣಮಟ್ಟದ ಆಹಾರ ಸೇವನೆಯಿಂದ ರೋಗರುಜಿನಗಳನ್ನು ದೂರ ಇಡಬಹುದು. ಭಾರತದಲ್ಲಿ ಅತಿ ಹೆಚ್ಚು ಮಧುಮೇಹಿಗಳಿದ್ದಾರೆ. ಜಂಕ್‌ಫುಡ್ ಸೇವನೆಯಿಂದ ದೇಹದಲ್ಲಿ ಬೊಜ್ಜು ನಿರ್ಮಾಣಗೊಂಡು, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳು ಭಾದಿಸುತ್ತವೆ ಎಂದು ಖ್ಯಾತ ಮೂತ್ರಪಿಂಡ ತಜ್ಞ ಡಾ.ಸುದರ್ಶನ್ ಬಲ್ಲಾಳ್ ಹೇಳಿದರು.ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಸಹಯೋಗದೊಂದಿಗೆ ರೋಟರಿ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.ರೋಗಿಗಳು ಎದುರಿಸುವ ಪ್ರಮುಖ ತೊಡಕು, ಮೂತ್ರಪಿಂಡ ಕಾಯಿಲೆಯನ್ನು ನಿರ್ವಹಿಸುವಲ್ಲಿ ಆಹಾರವು ಯಾವ ಪಾತ್ರವನ್ನು ವಹಿಸುತ್ತದೆ ಮತ್ತು ರೋಗಿಗಳು ಅನುಸರಿಸಬೇಕಾದ ಯಾವುದೇ ನಿರ್ದಿಷ್ಟ ಆಹಾರ ಮಾರ್ಗಸೂಚಿಗಳು, ಇತರ ಕಾಯಿಲೆಯ ಔಷಧಿಗಳು ಮೂತ್ರಪಿಂಡ ತೊಂದರೆಗೆ ಹೇಗೆ ಕಾರಣ, ಲಭ್ಯವಿರುವ ವಿವಿಧ ಚಿಕಿತ್ಸಾ ಆಯ್ಕೆ, ಮೂತ್ರಪಿಂಡ ಕಸಿ, ಕಿಡ್ನಿ ತೊಂದರೆಗೆ ಪರಿಹಾರ, ಕಿಡ್ನಿ ಕಸಿ ನಂತರ ಡಯಾಲಿಸಿಸ್‌ನ ಅವಶ್ಯಕತೆ, ಮೂತ್ರಪಿಂಡ ದಾನ, ದಾನ ನಂತರ ದಾನಿಗಳು ವಹಿಸಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಹೆ ಸಹ ಕುಲಾಧಿಪತಿ ಎಚ್.ಎಸ್. ಬಲ್ಲಾಳ್, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್, ಕೆಎಂಸಿ ಮಾರ್ಕೆಟಿಂಗ್ ವ್ಯವಸ್ಥಾಪಕ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.* ಕಾರ್ಕಳದಲ್ಲಿ ಶೀಘ್ರ ಬ್ಲಡ್ ಬ್ಯಾಂಕ್: ಡಾ. ವೆಂಕಟೇಶ್ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್ ಮಾತನಾಡಿ, ಕಾರ್ಕಳ ತಾಲೂಕಿನಲ್ಲಿ ಮುಂದಿನ ಆರು ತಿಂಗಳಲ್ಲಿ ಬ್ಲಡ್ ಬ್ಯಾಂಕ್ ನಿರ್ಮಾಣಗೊಳ್ಳಲಿದ್ದು, ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಕೆಲವೇ ತಿಂಗಳಲ್ಲಿ ಸಿಟಿ ಸ್ಕ್ಯಾನ್ ಯಂತ್ರವು ಸೇವೆಗೆ ಲಭ್ಯವಾಗಲಿದೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಒಂದೇ ಸೂರಿನಡಿ ಎಲ್ಲಾ ಸೇವೆಗಳು ಸ್ಥಳೀಯ ವಾಗಿ ದೊರೆಯಲಿವೆ ಎಂದರು.
ಮಣಿಪಾಲ ಆಸ್ಪತ್ರೆಯಲ್ಲಿ ರೋಬೋಟಿಕ್ ತಂತ್ರಜ್ಞಾನ ಅಳವಡಿಸುವ ಬಗ್ಗೆ ಕನ್ನಡಪ್ರಭ ಜೊತೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್, ಮುಂದಿನ ಮೂರು ತಿಂಗಳಲ್ಲಿ ರೋಬೋಟಿಕ್ ತಂತ್ರಜ್ಞಾನವು ಮಣಿಪಾಲ ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು. ಪೂರ್ವ ತಯಾರಿಗಳು ಪ್ರಗತಿಯಲ್ಲಿದೆ ಎಂದರು.