ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಈ ವರ್ಷ ಪೂರ್ಣಗೊಳ್ಳುವುದೇ ಎಂಬ ರೈತಾಪಿ ಸಮುದಾಯದ ಆಸೆಗಳಿಗೆ ಸಿಎಂ ಸಿದ್ದರಾಮ್ಯಯ ಮತ್ತೆ ತಣ್ಣೀರೆರೆಚಿದ್ದಾರೆ. ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ನೀಡಿರುವ ಬಿಡಿಗಾಸು ಗಮನಿಸದರೆ ಭದ್ರಾ ಯೋಜನೆಯ ಸ್ಮಾರಕವನ್ನಾಗಿಸಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ.

ಈ ಬಾರಿಯ ಬಜೆಟ್‌ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ 22,432 ಕೋಟಿ ರು. ಅನುದಾನ ಹಂಚಿಕೆ ಮಾಡಲಾಗಿದೆ. ರಾಜ್ಯದ ನಾಲ್ಕು ನೀರಾವರಿ ನಿಗಮಗಳಿಗೆ ಈ ಅನುದಾನ ಹಂಚಿಕೆ ಮಾಡಬೇಕಾಗಿದೆ. ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆಗಳು ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ಬರಲಿದ್ದು ಕೇವಲ 3,282 ಕೋಟಿ ರು. ಹಂಚಿಕೆ ಮಾಡಲಾಗಿದೆ. ಆದರೆ ಈ ಮೊತ್ತ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗೆ ವಿನಿಯೋಗವಾಗುವುದಿಲ್ಲ.

ನಿಗಮವು ಮಾಡಿದ ಸಾಲದ ಅಸಲು ತೀರಿಸಲು 1,127 ಕೋಟಿ ರು. ಹಾಗೂ ಬಡ್ಡಿ 48 ಕೋಟಿ ಹಾಗೂ ಭೂ ಸ್ವಾಧೀನಕ್ಕೆ 550 ಕೋಟಿ ರು. ವ್ಯಯವಾಗುತ್ತದೆ. ಸಂಬಳ ಹಾಗೂ ಇತರೆ ಬಾಬತ್ತುಗಳ ತೆಗೆದರೆ ಕಾಮಗಾರಿಗೆ ಕೇವಲ 1,364 ಕೋಟಿ ರು. ಉಳಿಯುತ್ತದೆ. ಈ ಮೊತ್ತವು ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆಗೆ ಹಂಚಿಕೆಯಾಗುತ್ತದೆ. ಭದ್ರಾ ಮೇಲ್ದಂಡೆಯಲ್ಲಿ ಫೆಬ್ರವರಿ ಅಂತ್ಯಕ್ಕೆ 1896 ಕೋಟಿ ರು. ಬಾಕಿ ಬಿಲ್ಲುಗಳಿವೆ. ಬಾಕಿ ಬಿಲ್ಲುಗಳ ತೀರಿಸಲು ಅನುದಾನ ಸಾಕಾಗುವುದಿಲ್ಲ, ಇನ್ನು ಹೊಸ ಕಾಮಗಾರಿ ಕೈಗೆತ್ತಿಕೊಳ್ಳುವುದು ದೂರ ಉಳಿದಂತೆಯೇ ಸರಿ.


ಈ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆಯ 135 ಕಿ.ಮೀ ಉದ್ದದ ಕಾಮಗಾರಿ ಪೂರ್ಣಗೊಳಿಸಿ 157 ಕೆರೆಗಳ ತುಂಬಿಸಲಾಗುವುದು ಎಂಬ ಭರವಸೆ ನೀಡಲಾಗಿದೆ. ಈ ವಿಷಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲೆಯ ಶಾಸಕರು ಮೂರು ತಿಂಗಳ ಹಿಂದೆ ಕಾಮಗಾರಿ ಪರಿಶೀಲಿಸಿ 300 ಕೋಟಿ ರು. ತುರ್ತು ಆಗತ್ಯತೆ ಬಗ್ಗೆ ಮಾತಾಡಿದ್ದರು. ಈ ಸಂಬಂಧ ಸಿಎಂ ಬಳಿ ಮಾತನಾಡಿ, ಅನುದಾನ ಬಿಡುಗಡೆ ಮಾಡಿಸಿಕೊಂಡು ಗಣರಾಜ್ಯೋತ್ಸವದ ವೇಳೆಗೆ 157 ಕೆರೆ ತುಂಬಿಸಿ ಗೋನೋರು ಕೆರೆಗೆ ಭದ್ರೆ ಹರಿಸಲಾಗುವುದೆಂದು ಹೇಳಿದ್ದರು. ಅಚ್ಚರಿ ಎಂದರೆ ನಾಲ್ಕು ತಿಂಗಳುಗಳಾಗುತ್ತಾ ಬಂದರೂ 300 ಕೋಟಿ ರು. ಅನುದಾನ ನೀಡಲು ಸಿ.ಎಂ ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿರಲಿಲ್ಲ. ಅದನ್ನೇ ವಾರ್ಷಿಕ ಬಜೆಟ್‌ಗೆ ಸೇರ್ಪಡೆ ಮಾಡಿರುವುದನ್ನು ಗಮನಿಸಿದರೆ ಈ ಬಾರಿಯ ಅನುದಾನ 300 ಕೋಟಿಗೆ ಸೀಮಿತವಾದಂತೆ ಕಾಣಿಸುತ್ತದೆ.

ಬಜೆಟ್ ಘೋಷಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರಸ್ತಾಪಗಳು:

ಚಳ್ಳಕೆರೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಐ ಸೇರಿದಂತೆ ಹೊಸ ಹದಿನೈದು ಕೋರ್ಸುಗಳ ಆರಂಭ.

ಕೆಎಂಇಆರ್‌ಸಿ ಅನುದಾನದಡಿ ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆರೋಗ್ಯ ಸೇವೆ ವಿಸ್ತರಣೆ.

ಹೊಸದುರ್ಗ ಮತ್ತು ಚಳ್ಳಕೆರೆ ಯಲ್ಲಿ ಪ್ರಸ್ತುತ ವರ್ಷ ಹೊಸ ಶ್ರಮಿಕ ವಸತಿ ಶಾಲೆ ಪ್ರಾರಂಭ.

ಚಿತ್ರದುರ್ಗದಲ್ಲಿರುವ ಕಾರ್ಮಿಕ ರಾಜ್ಯ ವಿಮಾ (ESI) ಚಿಕಿತ್ಸಾಲಯವನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದಾಗಿ ತಾರಾಲಯವನ್ನು (Planetarium) ಸ್ಥಾಪಿಸಲಾಗುವುದು. ಇದಕ್ಕಾಗಿ ಒಟ್ಟು 24 ಕೋಟಿ ರು ಮೀಸಲು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಹೊಸದಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು.

ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ‘ಪ್ರಗತಿ ಪಥ’ ಯೋಜನೆಯಡಿ ಮತ್ತು ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚಿನ ಒತ್ತು.