ಕಾರ್ಯಾಗಾರದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಜಯದೇವಪ್ಪ ಕನ್ನಡಪ್ರಭ ವಾರ್ತೆ, ಕಡೂರು ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ತಡೆಯುವ ಸರಳ ವಿಧಾನಗಳನ್ನು ಅಳವಡಿಸಿಕೊಂಡಲ್ಲಿ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಜಯದೇವಪ್ಪ ಹೇಳಿದರು. ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಅಭಿವೃದ್ಧಿ ಯೋಜನೆಯಡಿ ತೆಂಗು ಬೆಳೆಗೆ ತಗುಲಿರುವ ಕಪ್ಪುತಲೆ ಹುಳು ನಿಯಂತ್ರಣದ ಕುರಿತು ನಡೆದ ಕಾರ್ಯಾಗಾರದಲ್ಲಿ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಿದರು. ತೆಂಗಿನ ಮರಗಳಲ್ಲಿ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಎಲ್ಲ ರೋಗಗಳಿಗೂ ಸೂಕ್ತ ಚಿಕಿತ್ಸೆಯಿದೆ. ತೆಂಗು ಬೆಳೆಗಾರರು ಇಲಾಖೆಯ ಅಧಿಕಾರಿ ಗಳನ್ನು ಸಂಪರ್ಕಿಸಿದರೆ ಸೂಕ್ತ ಮಾಹಿತಿ ದೊರೆಯುತ್ತದೆ. ರೋಗಗಳು ಕಾಣಿಸಿಕೊಂಡ ಮಾತ್ರಕ್ಕೆ ಬೆಳೆಗಾರರು ನಿರಾಶರಾಗಬೇಕಿಲ್ಲ ಎಂದು ಹೇಳಿದರು. ಸಂಪನ್ಮೂಲ ವಿಜ್ಞಾನಿ ಡಾ.ಎಸ್.ಕೆ.ಜಗದೀಶ್ ಮಾತನಾಡಿ, ತೆಂಗಿನ ಮರಗಳಲ್ಲಿ ಅಣಬೆ ರೋಗ, ಕಾಂಡ ಸೋರುವ ರೋಗ, ಸುಳಿಕೊಳೆ ರೋಗ, ಎಲೆ ಚುಕ್ಕೆ ರೋಗ ಹೀಗೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಇವುಗಳ ಜತೆಗೆ ಕೀಟಗಳಿಂದ ಕೂಡ ತೆಂಗಿನ ಮರಗಳು ಹಾನಿಗೆ ಒಳಗಾಗುತ್ತಿವೆ. ಇವುಗಳಲ್ಲಿ ಕಪ್ಪು ತಲೆ ಹುಳುವಿನ ರೋಗ ಪ್ರಮುಖವಾಗಿದೆ. ಈ ಕೀಟ ಎಲೆಯ ಕೆಳ ಭಾಗದಲ್ಲಿ ನೂಲಿನ ಗೂಡನ್ನು ನೇಯ್ದು ಎಲೆಗಳ ಪತ್ರ ಹರಿತ್ತನ್ನು ತಿನ್ನುವುದರಿಂದ ಗರಿಗಳ ಮೇಲೆ ಒಣಹುಲ್ಲಿನ ಬಣ್ಣದ ಮಚ್ಚೆಗಳು ಕಾಣುತ್ತವೆ. ಇದರಿಂದಾಗಿ ಹಾನಿಗೊಳಗಾದ ಗರಿ ಜಾಗ ಸುಟ್ಟಂತೆ ಕಾಣಿಸುತ್ತದೆ.ಇಂತಹ ಎಲೆಗಳನ್ನು ಕಡಿದು ಸುಟ್ಟು ಹಾಕುವುದು ಹಾಗೂ ಕಪ್ಪುತಲೆ ಹುಳುಗಳನ್ನು ತಿನ್ನುವ ಪರತಂತ್ರ ಜೀವಿಗಳನ್ನು ತಂದು ಮರಗಳಿಗೆ ಬಿಡುವುದರಿಂದ ರೋಗವನ್ನು ಹತೋಟಿಗೆ ತರಬಹುದು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವೆ ಮರುಳಪ್ಪ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಪಿ.ಎನ್.ಓಂಕಾರಮೂರ್ತಿ, ಗ್ರಾ.ಪಂ ಸದಸ್ಯರಾದ ಪಿ.ಎಂ.ಪಾಪಣ್ಣ, ಪಿ.ಆರ್.ರಂಗನಾಥ್, ಪಿ.ಎಸ್.ಸಂತೋಷ್, ರೂಪ ಶ್ರೀನಿವಾಸ್, ಸಹಾಯಕ ತೋಟಗಾರಿಕೆ ಇಲಾಖೆಯ ಅದಿಕಾರಿಗಳು ಮತ್ತಿತರರಿದ್ದರು. 19ಕೆಕೆಡಿಯು2. ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆಗೆ ತಗುಲಿರುವ ಕಪ್ಪುತಲೆ ಹುಳು ನಿಯಂತ್ರಣ ಕುರಿತು ನಡೆದ ಕಾರ್ಯಗಾರದಲ್ಲಿ ಸಹಾಯಕ ತೋಟಗಾರಿಕಾ ಇಲಾಖೆಯ ಜಯದೇವಪ್ಪ ನೀಡಿ ಮಾತನಾಡಿದರು.