ಅಡಕೆ ಬೆಳೆಗಾರನ ಭವಿಷ್ಯವನ್ನೇ ಪಾತಾಳಕ್ಕೆ ತಳ್ಳಿದೆ ರೋಗಬಾಧೆ

KannadaprabhaNewsNetwork |  
Published : Dec 15, 2025, 02:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆಗೆ ಕಳೆದ ಆರೇಳು ದಶಕಗಳಿಂದ ಬಾಧಿಸುತ್ತಿರುವ ಹಳದಿ ಎಲೆ , ಕೊಳೆರೋಗ, ಎಲೆ ಚುಕ್ಕಿರೋಗ ಗಳಿಂದ ಬಹುತೇಕ ತೋಟಗಳೇ ನಾಶವಾಗಿ ಸಂಕಷ್ಟ ಎದುರಿಸಿದ್ದ ಬೆಳಗಾರ ಇತ್ತೀಚೆಗಿನ ಎಲೆ ಚುಕ್ಕಿ ರೋಗ ಬಾಧೆಯಿಂದ ಅಡಕೆ ಕೃಷಿಯೇ ವಿನಾಶದಂಚಿಗೆ ತಲುಪುವ ಭೀತಿಯೊಂದಿಗೆ ಬೆಳೆಗಾರನ ಭವಿಷ್ಯವನ್ನೇ ಪಾತಾಳಕ್ಕೆ ತಳ್ಳಿದೆ.

- ಇಳುವರಿ ಕುಸಿತ, ಬೆಲೆಯೂ ಕುಸಿತ ।ಎಲೆ ಚುಕ್ಕಿ, ಹಳದಿ ಎಲೆ, ಕೊಳೆ ರೋಗದಿಂದ ಅಡಕತ್ತರಿಯಲ್ಲಿ ರೈತರು ನೆಮ್ಮಾರ್ ಅಬೂಬಕರ್.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆಗೆ ಕಳೆದ ಆರೇಳು ದಶಕಗಳಿಂದ ಬಾಧಿಸುತ್ತಿರುವ ಹಳದಿ ಎಲೆ , ಕೊಳೆರೋಗ, ಎಲೆ ಚುಕ್ಕಿರೋಗ ಗಳಿಂದ ಬಹುತೇಕ ತೋಟಗಳೇ ನಾಶವಾಗಿ ಸಂಕಷ್ಟ ಎದುರಿಸಿದ್ದ ಬೆಳಗಾರ ಇತ್ತೀಚೆಗಿನ ಎಲೆ ಚುಕ್ಕಿ ರೋಗ ಬಾಧೆಯಿಂದ ಅಡಕೆ ಕೃಷಿಯೇ ವಿನಾಶದಂಚಿಗೆ ತಲುಪುವ ಭೀತಿಯೊಂದಿಗೆ ಬೆಳೆಗಾರನ ಭವಿಷ್ಯವನ್ನೇ ಪಾತಾಳಕ್ಕೆ ತಳ್ಳಿದೆ.

ಮಲೆನಾಡಿನ ವಾಣಿಜ್ಯ ಬೆಳೆಯಾದ ಅಡಕೆ ರೈತರ ಜೀವನಾಧಾರ. ಈ ನೆಲದ ವ್ಯಾಪಾರ,ವಾಣಿಜ್ಯ ಚಟುವಟಿಕೆಗಳು, ಆರ್ಥಿಕ ವ್ಯವಹಾರಗಳೆಲ್ಲ ಸಂಪೂರ್ಣ ಅಡಕೆ ಬೆಳೆಯನ್ನೆ ಅವಲಂಬಿಸಿತ್ತು. ಹಳದಿ ಎಲೆ, ಕೊಳೆ ರೋಗಗಳ ಹೊಡೆತಕ್ಕೆ ಕಂಗೆಟ್ಟಿದ್ದ ಬೆಳೆಗಾರರಿಗೆ ಎಲೆ ಚುಕ್ಕಿ ರೋಗ ದಿಕ್ಕೆ ತಪ್ಪುವಂತೆ ಹೊಡೆತ ನೀಡಿದೆ.

ಸುಮಾರು 60ರ ದಶಕದಲ್ಲಿ ಕಾಣಿಸಿಕೊಂಡ ಹಳದಿ ಎಲೆ ರೋಗದಿಂದ ತಮ್ಮ ಬೆಳೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದ ರೈತರು 2020ರಲ್ಲಿ ಅಲ್ಲಲ್ಲಿ ಕಾಣಿಸಿಕೊಂಡು ಇದೀಗ ವ್ಯಾಪಕವಾಗಿ ಎಲ್ಲಾ ಅಡಕೆ ಮರಗಳಿಗೂ ತಗುಲಿ ಇಡೀ ಬೆಳೆ ನೆಲಕಚ್ಚುವ ಹಂತಕ್ಕೆ ಬಂದು ನಿದ್ದೆಗೆಡಿಸಲಾರಂಬಿಸಿತ್ತು. ಮೊದಲೇ ಹಳದಿ ಎಲೆ ರೋಗ ನಿಯಂತ್ರಣ ಸಾಧಿಸಲಾಗದೆ ತೋಟಗಳನ್ನು ಕಳೆದುಕೊಂಡು ಹೈರಾಣಾಗಿದ್ದಲ್ಲದೆ ಕೆಲ ಸಣ್ಣ ರೈತರು ಬೀದಿಗೆ ಬಂದರು. ಮೂರ್ನಾಲ್ಕು ವರ್ಷಗಳಲ್ಲಿ ಬೆಳೆ ಯನ್ನೇ ಕಳೆದುಕೊಂಡದ್ದು ಇತ್ತು.

ತಲೆ ತಲಾಂತರದಿಂದ ಸಾಂಪ್ರಾದಾಯಿಕವಾಗಿ ಅಡಕೆ ಕೃಷಿಯನ್ನೇ ನಂಬಿಕೊಂಡು ಬಂದಿದ್ದ ರೈತರು, ಕೊಳೆ ರೋಗ,ತುಂಡೆ ರೋಗಗಳಿಗೆ ಅಷ್ಟೇನು ತಲೆ ಕೆಡಿಸಿಕೊಂಡಿರಲಿಲ್ಲ. ಪ್ರಸ್ತುತ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಬಹುತೇಕ ಮಲೆನಾಡಿನಾದ್ಯಂತ ಹಂತಹಂತವಾಗಿ ಹರಡುತ್ತಿರುವುದರಿಂದ ಬೆಳೆ ಕುಂಠಿತಗೊಂಡು, ಕ್ರಮೇಣ ಮರಗಳು ಧರೆಗುರುಳುತ್ತಾ ಬೆಳೆಗಾರರ ಬದುಕಿಗೆ ಕೊಡಲಿಯೇಟು ಬೀಳಲಾರಂಭಿಸಿರುವುದು ಆತಂಕಕಾರಿ ಬೆಳವಣಿಗೆ.

ತಾಲೂಕಿನ ಒಟ್ಟು 3720 ಹೆಕ್ಟೆರ್‌ನಲ್ಲಿ ಅಡಕೆ, ಸುಮಾರು 800 ಹೆಕ್ಟೆರ್‌ನಲ್ಲಿ ಕಾಳು ಮೆಣಸು ಬೆಳೆಯುತ್ತಿದ್ದು ಕಳೆದ ಆರೇಳು ದಶಕದಿಂದ ಕಂಟಕಪ್ರಾಯವಾಗಿ ಪರಿಣಮಿಸಿರುವ ಹಳದಿ ಎಲೆ ರೋಗ ನಿವಾರಣೆಗೆ ಅನೇಕ ಸಂಶೋಧನೆಗಳು ನಡೆದರೂ ಪರಿಹಾರ ಮಾತ್ರ ಶೂನ್ಯ. ಅಡಕೆ ಬೆಳೆ ಉಳಿವಿಗಾಗಿ ಶೃಂಗೇರಿಯಲ್ಲಿ ಅಡಕೆ ಸಂಶೋಧನಾ ಕೇಂದ್ರ ಆರಂಭಿಸಿದ ಸರ್ಕಾರ ವಿಜ್ಞಾನಿಗಳ ತಂಡವನ್ನೆ ನೇಮಕ ಮಾಡಿ ಸಂಶೋಧನೆಗಳನ್ನು ನಡೆಸಿತು. ಆದರೆ ಇಂದಿಗೂ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗಿಲ್ಲ. ಅತ್ತ ಸಂಶೋಧನೆಗಳು ನಡೆಯುತ್ತಿದ್ದರೂ ಇತ್ತ ತೋಟಗಳಲ್ಲಿ ಹಳ‍ದಿ ಎಲೆ ರೋಗಕ್ಕೆ ತುತ್ತಾದ ಮರಗಳಿಗೆ ಕಳೆದ 4-5 ವರ್ಷಗಳಿಂದ ಬೆಂಬಿಡದೇ ಕಾಡುತ್ತಿರುವ ರೋಗದಿಂದ ಮುಕ್ತಿ ಸಿಗದೆ, ಅಡಕೆ ಮರಗಳ ಹೆಡಲುಗಳಲ್ಲಿ ಕೀಟಗಳು ಸೇರಿಕೊಂಡು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ, ಕಾಯಿಗಳಲ್ಲಿ ಚುಕ್ಕಿಗಳು ಕಾಣಿಸಿಕೊಳ್ಳುತ್ತಾ ಕ್ರಮೇಣ ಮರಗಳೇ ಒಣಗಿ ಇಡೀ ತೋಟವೇ ನಾಶಗೊಳ್ಳುತ್ತಿವೆ. ಯಾವ ರೀತಿ ಔಷಧ ಪ್ರಯೋಗ ಮಾಡಿದರೂ ಪ್ರಯೋಜನವಾಗದೆ ಇಳುವರಿ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು ಬೆಳೆ ಬೆಳೆದ ರೈತ ಉತ್ತಮ ಫಸಲು ಇಲ್ಲದೆ, ರೋಗವೂ ನಿಯಂತ್ರಣಕ್ಕೆ ಬಾರದೆ ಅಡಕೆ ಕೃಷಿಯಿಂದಲೇ ವಿಮುಖವಾಗುವಂತೆ ಮಾಡಿದೆ.

ಅಡಕೆ ತೋಟಗಳಲ್ಲಿ ಪರ್ಯಾಯ ಬೆಳೆಗಳಾದ ಕಾಳು ಮೆಣಸು, ಕಾಫಿಗೂ ಕಳೆದ ಆರೇಳು ತಿಂಗಳಿಂದ ಸುರಿದ ಭಾರೀ ಮಳೆಯಿಂದ ಕೊಳೆರೋಗ ತಗುಲಿದ್ದು ಅವುಗಳೂ ಕೈಗೆ ಸಿಗದಂತಾಗಿದೆ. ತೋಟಗಳಲ್ಲಿ ರಾಶಿ ರಾಶಿ ಅಡಕೆ ಕಾಯಿ ಗಳು, ಕಾಫಿ, ಕಾಳುಮೆಣಸು ಉದುರಿ ಬೀಳುತ್ತಿವೆ. ಮಳೆಗಾಲದಲ್ಲಿ ಕೊಳೆ ರೋಗದಿಂದ, ಬೇಸಿಗೆಯಲ್ಲಿ ಮತ್ತದೇ ಎಲೆ ಚುಕ್ಕಿ, ಹಳದಿ ಎಲೆ ರೋಗ ಉಲ್ಬಣಿಸಿ ಇದರಿಂದ ರೈತ ತತ್ತರಿಸಿದ್ದಾನೆ.ಫಸಲು ಕೋತಾ: ಬೆಲೆಯೂ ಕುಸಿತ

ಮುಂಗಾರು ಮಳೆ ಆರಂಭಕ್ಕೂ ಮೊದಲು ನಾಲ್ಕೈದು ಬಾರಿ ಔಷಧಿ ಸಿಂಪಡಣೆ ಮಾಡಿದರೂ ರೈತರಿಗೆ ಯಾವುದೇ ಪ್ರಯೋಜನ ವಾಗಿಲ್ಲ. 15-20 ಕ್ವಿಂಟಲ್ ಅಡಕೆ ಬೆಳೆಯುತ್ತಿದ್ದ ರೈತ ಈಗ ಕೆಜಿ ಲೆಕ್ಕದಲ್ಲಿ ಅಡಕೆ ಬೆಳೆಯುವಂತಾಗಿದೆ. ಅಡಕೆ ತೋಟಗಳು ಖಾಲಿಯಾಗುತ್ತಿದ್ದು ಅಲ್ಲೊಂದು ಇಲ್ಲೊಂದು ಅಡಕೆ ಮರಗಳು ಕಾಣುತ್ತಿವೆ. ನಿರ್ವಹಣೆ ಸಾಧ್ಯವಾಗದೇ, ಬೆಲೆ ಕುಸಿತದಿಂದ ಅಡಕೆ ಕೃಷಿ ವಿನಾಶದ ಅಂಚಿಗೆ ತಲುಪುತ್ತಿದೆ.

ಆರಂಭದಲ್ಲಿ ಅಡಕೆಗೆ ತಗಲುವ ವಿವಿಧ ರೋಗ ಸಮಸ್ಯೆಗಳ ನಿವಾರಿಸಲು ಸರ್ಕಾರ ವಿಜ್ಞಾನಿಗಳ ನೇಮಕ, ಸಂಶೋಧನೆ , ತೋಟಗಳ ಪರಿಶೀಲನೆ ಯಂತಹ ಕ್ರಮವಹಿಸಿತ್ತಾದರೂ ಕ್ರಮೇಣ ರೈತರ ಸಮಸ್ಯೆಗಳು, ಬೆಲೆ ರೋಗಗಳ ಬಗ್ಗೆ ಮೌನವಹಿಸಿದೆ. ಈ ವರ್ಷ ಭಾರೀ ಮಳೆ, ನೆರೆ ಪ್ರವಾಹ ಉಂಟಾಗಿದ್ದರೂ ಪರಿಹಾರವೂ ಇಲ್ಲ. ಅತಿವೃಷ್ಠಿ ಪ್ರದೇಶವೆಂದು ಘೋಷಣೆಯೂ ಮಾಡಿಲ್ಲ. ಮಲೆನಾಡಿದಲ್ಲಿ ಅಡಕೆ ಬೆಳೆಗೆ ಬಿದ್ದಿರುವ ಹೊಡೆತದಿಂದ ವಾಣಿಜ್ಯ, ವ್ಯಾಪಾರ ವಹಿವಾಟುಗಳ ಮೇಲೆಯೇ ವ್ಯಾಪಕ ಪರಿಣಾಮ ಬೀರಿದೆ. ಸರ್ಕಾರ ಇನ್ನಾದರೂ ಇಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

-- ಕೋಟ್‌--

ರೈತರು ಮುನ್ನೆಚ್ಚರಿಕೆ ವಹಿಸಬೇಕು

ಭಾರೀ ಮಳೆ ಹಿನ್ನೆಲೆ ಅಡಕೆ, ಕಾಫಿ, ಕಾಳುಮೆಣಸು ಬೆಳೆಗಳಿಗೆ ವ್ಯಾಪಕವಾಗಿ ಕೊಳೆ ರೋಗ ಹರಡಿದೆ. ಬೋರ್ಡೋ ಸಿಂಪಡಣೆ ಯಿಂದ ಕೊಳೆರೋಗ, ಎಲೆ ಚುಕ್ಕಿ ರೋಗ ನಿಯಂತ್ರಿಸಬಹುದು. ಕಾಳು ಮೆಣಸು ಬಳ್ಳಿಗಳಿಗೂ ಸಿಂಪಡಿಸ ಬಹು ದಾಗಿದೆ. ಇಲಾಖೆ ರೈತರಿಗೆ ಅಗತ್ಯ ಮಾಹಿತಿ ನೀಡುತ್ತಿದೆ. ರೈತರು ಹತಾಶರಾಗದೇ ಆತ್ಮವಿಶ್ವಾಸದಿಂದ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು.

--ಶ್ರೀಕೃಷ್ಣ. ಸಹಾಯಕ ನಿರ್ದೇಶಕರು

ತೋಟಗಾರಿ ಇಲಾಖೆ

---- ಕೋಟ್‌--

ಸರ್ಕಾರ ಸಮಸ್ಯೆ ಗಂಭೀರವಾಗಿ ಪರಿಗಣಿಸಲಿ

ಅಡಕೆ,ಕಾಫಿ, ಕಾಳುಮೆಣಸು ರೋಗಗಳಿಗೆ ತಗುಲಿರುವ ರೋಗಗಳ ನಿಯಂತ್ರಣಕ್ಕೆ ಸರ್ಕಾರ ವೈಜ್ಞಾನಿಕ ಸಂಶೋಧನೆಗೆ ಮುಂದಾಗಬೇಕು. ವಿಜ್ಞಾನಿಗಳ ನೇಮಕ, ಸಂಶೋಧನೆ, ತ್ವರಿತ ಕ್ರಮಗಳ ಮೂಲಕ ಅಡಕೆ ಬೆಳೆ ಉಳಿಸಲು ಮುಂದಾಗಬೇಕು

-ಕೆ.ಎಂ.ರಾಮಣ್ಣ ಕರುವಾನೆ.

ಕೃಷಿಕ 14 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನಲ್ಲಿ ಹಳದಿ ಎಲೆ ರೋಗ,ಎಲೆ ಚುಕ್ಕಿ ರೋಗ ಪೀಡಿತ ಅಡಕೆ ತೋಟ.

14-ಶ್ರೀ ಚಿತ್ರ 2-

-ಶ್ರೀ ಕೃಷ್ಣ.ಸಹಾಯಕ ನಿರ್ದೇಶಕ .ತೋಟಗಾರಿಕೆ ಇಲಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ