ರೋಗ - ಮುಪ್ಪುಮೀರಲು ಉಷಃಪಾನ, ನಾಸಾಪಾನ ಸಹಕಾರಿ

KannadaprabhaNewsNetwork |  
Published : Sep 17, 2026, 02:15 AM IST
 ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಶ್ರೀಗಳಿಂದ ಆರ್ಶೀವಾದ ಪಡೆಯುತ್ತಿರುವುದು  | Kannada Prabha

ಸಾರಾಂಶ

ಉಷಃಪಾನದಿಂದ ಎಲ್ಲ ರೋಗಗಳ ನಿವಾರಣೆಯ ಜತೆಗೆ ಮುಪ್ಪನ್ನು ಇದು ನಿವಾರಿಸುತ್ತದೆ ಮತ್ತು ಮನುಷ್ಯನು ಶತಾಯುಷಿಯಾಗುತ್ತಾನೆ ಎಂದು ಇದರ ಉಪಯೋಗವನ್ನು ಹೇಳಿದ್ದು, ಬೆಳಗ್ಗೆ ಎದ್ದು ಶೌಚಕ್ರಿಯೆಯನ್ನು ಮಾಡುವುದಕ್ಕೂ ಮೊದಲೇ ಇದನ್ನು ಆಚರಿಸಬೇಕು.

ಗೋಕರ್ಣ: ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನವೂ ನಿಯಮಿತವಾಗಿ ನೀರನ್ನು ಸೇವಿಸುವ ಉಷಃಪಾನ ಹಾಗೂ ನಾಸಾಪಾನ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನುಷ್ಯನು ಮುಪ್ಪು ಹಾಗೂ ರೋಗಗಳಿಲ್ಲದ ನೂರು ವರ್ಷಗಳ ಕಾಲದ ಆರೋಗ್ಯಯುತ ಜೀವನವನ್ನು ನಡೆಸಲು ಸಾಧ್ಯ ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಬುಧವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಉಷಃಪಾನ- ನಾಸಾಪಾನ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನ ಎಂಟು ಬೊಗಸೆ ನೀರನ್ನು ಸೇವಿಸುವುದನ್ನು ಉಷಃಪಾನ ಎಂದು ಕರೆಯಲಾಗಿದ್ದು, ಆಯುರ್ವೇದ ಹಾಗೂ ಯೋಗಶಾಸ್ತ್ರದಲ್ಲಿ ಈ ಕುರಿತಾಗಿ ಉಲ್ಲೇಖಗಳಿದ್ದು, ಪ್ರತಿದಿನ ಇದನ್ನು ಆಚರಿಸುವಂತೆ ಸೂಚಿಸಲಾಗಿದೆ.

ಉಷಃಪಾನದಿಂದ ಎಲ್ಲ ರೋಗಗಳ ನಿವಾರಣೆಯ ಜತೆಗೆ ಮುಪ್ಪನ್ನು ಇದು ನಿವಾರಿಸುತ್ತದೆ ಮತ್ತು ಮನುಷ್ಯನು ಶತಾಯುಷಿಯಾಗುತ್ತಾನೆ ಎಂದು ಇದರ ಉಪಯೋಗವನ್ನು ಹೇಳಿದ್ದು, ಬೆಳಗ್ಗೆ ಎದ್ದು ಶೌಚಕ್ರಿಯೆಯನ್ನು ಮಾಡುವುದಕ್ಕೂ ಮೊದಲೇ ಇದನ್ನು ಆಚರಿಸಬೇಕು ಎಂದರು.ಉಷಃಪಾನವನ್ನು ಒಂದನೇ ವಯಸ್ಸಿಗೇ ಆರಂಭಿಸಬಹುದಾಗಿದ್ದು, ಹಂತ- ಹಂತವಾಗಿ ನೀರಿನ ಸೇವನೆಯನ್ನು ಹೆಚ್ಚಿಸುತ್ತಾ ಹೋಗಬೇಕು. ಹದಿನಾರನೇಯ ವಯಸ್ಸಿಗೆ ಬರುವಾಗ ಅದು ಎಂಟು ಬೊಗಸೆ ಆಗುವಂತೆ ಹೊಂದಿಸಿಕೊಳ್ಳುಬೇಕು. ಈ ಕ್ರಿಯೆಗಾಗಿ ನೀರನ್ನು ರಾತ್ರಿ ಶೇಖರಿಸಿಡುವಾಗ ತಾಮ್ರ ಅಥವಾ ಯಾವುದಾದರೂ ಉತ್ತಮ ಪಾತ್ರೆಯಲ್ಲಿಯೇ ನೀರನ್ನು ಶೇಖರಿಸಿಡಬೇಕು ಎಂದರು.ಸೂರ್ಯೋದಯಕ್ಕೂ ಪೂರ್ವದಲ್ಲಿ ಮೂಗಿನ ಹೊಳ್ಳೆಗಳಿಂದ ನೀರನ್ನು ಸೇವಿಸುವ ಕ್ರಮಕ್ಕೆ ನಾಸಾಪಾನ ಎಂದು ಯೋಗ ಹಾಗೂ ಆಯುರ್ವೇದದಲ್ಲಿ ಉಲ್ಲೇಖವಿದ್ದು, ಇದರಿಂದ ಬುದ್ಧಿ ಚುರುಕಾಗುವ ಜತೆಗೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಇದಕ್ಕೆ ಜಲ ನೇತಿ, ಜಲ ನಸ್ಯ ಎಂಬ ಹೆಸರೂ ಇದ್ದು, ಯೋಗಶಾಸ್ತ್ರವು ಪ್ರತಿದಿನ ಇದನ್ನು ಆಚರಿಸುವುದರಿಂದ ದಿವ್ಯದೃಷ್ಟಿ ಪ್ರಾಪ್ತವಾಗುತ್ತದೆ ಎಂದು ಹೇಳಿದೆ ಎಂದರು.ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್, ರವೀಶ್ ತಂತ್ರಿ ಅವರು ಶ್ರೀಗಳ ಆಶೀರ್ವಾದ ಪಡೆದರು. ಶಿವರಾಮಚಂದ್ರ ಶಿವಾಲ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಜಾರಾಮ ಮರಿಗದ್ದೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

ಘನಪಾರಾಯಣ ಪ್ರಾರಂಭ: ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯ ಘನಪಾರಾಯಣವು ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳ ನೇತೃತ್ವದಲ್ಲಿ ನಾಡಿನ ಪ್ರಮುಖ ಹತ್ತು ಘನಪಾಠಿಗಳಿಂದ ಪ್ರಾರಂಭವಾಯಿತು. ಸೆ. ೨೩ರ ವರೆಗೆ ಘನಪಾರಾಯಣ ನಡೆಯಲಿದ್ದು, ವಿಶಿಷ್ಟವಾದ ಕ್ರಮದಲ್ಲಿ ವೇದ ಮಂತ್ರಗಳನ್ನು ಉಚ್ಚರಿಸುವ ಪದ್ಧತಿ ಘನಪಾಠವಾಗಿದೆ. ವೇದ ಪಾರಾಯಣದಲ್ಲಿ ಒಟ್ಟು ೮ ಪ್ರಕಾರದ ವಿಕೃತಿ ಪಾಠಗಳಿದ್ದು, ಅವುಗಳಲ್ಲಿ ಘನಪಾಠವು ಅತ್ಯಂತ ಶ್ರೇಷ್ಠ ಹಾಗೂ ಕಠಿಣವಾದದ್ದು ಎಂದು ಪರಿಗಣಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌರಿ​ಗಣೇಶ ಹಬ್ಬಕ್ಕೆ ಮನಸೋತ ಜರ್ಮನ್ ಪ್ರಜೆ
ಮೂರನೇ ದಿನ ಜಿಲ್ಲೆಯಲ್ಲಿ 1432 ಗಣೇಶ ವಿಸರ್ಜನೆ