ಹೊಸಪೇಟೆ: ಪ್ರಮುಖ ವಾಣಿಜ್ಯ ಬೆಳೆ ಮೆಣಸಿನಕಾಯಿಗೆ ರೋಗಗಳು ಗಂಟು ಬಿದ್ದಿದ್ದು ಇಳುವರಿ ಕುಂಠಿತ ಜೊತೆಗೆ ಬೆಲೆ ಕಡಿಮೆಯಾಗಿದ್ದು, ರೈತರಿಗೆ ನಷ್ಟದ ಹೊರೆಯಾಗಿದೆ.ಮೆಣಸಿನಕಾಯಿ ಬೆಳೆಗೆ ಹದವರಿತು ಮಳೆಯಾದರೆ ಇದು ರೈತನ ದೊಡ್ಡ ಖರ್ಚು ವೆಚ್ಚಗಳನ್ನು ನೀಗಿಸುತ್ತದೆ. ಮೆಣಸಿನಕಾಯಿ ಬೆಳೆಯನ್ನೇ ನೆಚ್ಚಿಕೊಂಡು ಹಲವು ರೈತರು ಉತ್ತಮ ಇಳುವರಿ ಹಾಗೂ ಲಾಭ ಬರುತ್ತದೆ ಎಂಬ ಕನಸು ಕಂಡಿದ್ದರು. ಆದರೆ ಈ ಬಾರಿ ಅವರ ಆಸೆಯನ್ನು ಬೆಳೆಗಳಿಗೆ ಬಂದಿರುವ ರೋಗಗಳು ನುಚ್ಚುನೂರು ಮಾಡಿವೆ.
ಬೆಳೆಯುವ ವೆಚ್ಚ:
ಪ್ರತಿ ಎಕರೆ ಮೆಣಸಿನಕಾಯಿ ಬೆಳೆಯಲು ₹75 ಸಾವಿರದಿಂದ ₹೧ ಲಕ್ಷವರೆಗೆ ಖರ್ಚು ಮಾಡಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಉತ್ತಮ ಗೊಬ್ಬರ, ಅಗತ್ಯ ನೀರುಣಿಸಿದಲ್ಲಿ 12ರಿಂದ 15 ಕ್ವಿಂಟಲ್ ಫಸಲು ಕೈಗೆ ಸಿಗುತ್ತದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಒಣ ಮೆಣಸಿನಕಾಯಿಗೆ ₹10ರಿಂದ ₹13 ಸಾವಿರ ಬೆಲೆಯಿದೆ. ಫಸಲು ಕೈ ಸೇರುವ ಸಂದರ್ಭದಲ್ಲಿ ಚಳಿಗಾಲದ ಇಬ್ಬನಿಯ ಹೊಡೆತ, ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ್ಗೆ ಜಿನುಗು ಮಳೆ ಸುರಿಯುತ್ತಿದ್ದು, ಗಿಡಗಳಿಂದ ಬಿಡಿಸಿ ಒಣಗಲು ಹಾಕಿದ ಮೆಣಸಿನಕಾಯಿಗೆ ಫಂಗಸ್‌ರೋಗ ಕಾಣಿಸಿಕೊಂಡಿದೆ.ಕಾಯಿಗಳ ಮೇಲೆ ಕಪ್ಪು ಚುಕ್ಕೆ ಮೂಡಿದ್ದು, ಕೊಳೆಯುವಿಕೆ ಶುರುವಾಗಿದೆ. ಒಂದು ಕಾಯಿಯಿಂದ ಮತ್ತೊಂದು ಕಾಯಿಗೆ ಬಹುಬೇಗ ಫಂಗಸ್ ಹರಡಿ ಉಳಿದ ಕಾಯಿಗಳನ್ನು ಹಾಳುಮಾಡುತ್ತವೆ ಎಂದು, ರೋಗಬಿದ್ದ ಕಾಯಿಯನ್ನು ಬೇರ್ಪಡಿಸುವುದು ರೈತರ ತಲೆಬಿಸಿಗೆ ಕಾರಣವಾಗಿದೆ. ರೋಗಬಿದ್ದ ಕಾಯಿಗೆ ಈ ಭಾಗದ ರೈತರು ಕೆಡುಕುಕಾಯಿ ಎಂದು ಹೆಸರಿಟ್ಟಿದ್ದು, ರೋಗ ಪೀಡಿತ ಕಾಯಿಯನ್ನು ಖರೀದಿಸಲು ವ್ಯಾಪಾರಿಗಳು ಸಿದ್ಧರಿಲ್ಲ ಎನ್ನುತ್ತಾರೆ ಒಣ ಮೆಣಸಿನಕಾಯಿ ಬೆಳೆದ ನೆಲ್ಲಾಪುರದ ರೈತರು.