ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬಂದ್ ಬೆಂಬಲಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಎಂಇಎಸ್ ಸಂಘಟನೆಯ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. ಇತರೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ದೂರ ಉಳಿದಿದ್ದರು. ನಗರದಲ್ಲಿ ಬಸ್ ಹಾಗೂ ವಾಹನ ಸಂಚಾರ, ಮಾರುಕಟ್ಟೆ ಮೇಲೆ ಬಂದ್ ಯಾವುದೇ ಪ್ರಭಾವ ಬೀರಲಿಲ್ಲ. ಎಂದಿನಂತೆ ವ್ಯಾಪಾರ, ವಹಿವಾಟು ನಡೆಯಿತು. ಬಸ್ ಸಂಚಾರವೂ ಸಾಮಾನ್ಯವಾಗಿತ್ತು. ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳು ಯಾವುದೇ ಆತಂಕವಿಲ್ಲದೆ ನಡೆದವು. ಎರಡನೇ ಶನಿವಾರವಾಗಿದ್ದರಿಂದ ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಬಂದಾಗಿದ್ದವು. ಉಳಿದಂತೆ ಎಲ್ಲವೂ ಸಾಮಾನ್ಯವಾಗಿತ್ತು.
ಪ್ರತಿಕೃತಿ ದಹಿಸಿ ಕರವೇ ಆಕ್ರೋಶ:ಬಂದ್ ಬೆಂಬಲಿಸಿ ನಗರದ ಬಸವೇಶ್ವರ ವೃತ್ತದಲ್ಲಿ ರಾಜ್ಯ ವಕ್ತಾರ ಬಿ.ಎಂ.ಪಾಟೀಲ ಹಾಗೂ ಜಿಲ್ಲಾಧ್ಯಕ್ಷ ಆತ್ಮಾರಾಮ ನೀಲನಾಯಕ ನೇತೃತ್ವದಲ್ಲಿ ಕರವೇ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಎಂಇಎಸ್ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಆತ್ಮಾರಾಮ ನಿಲನಾಯಕ ಮಾತನಾಡಿ, ಕನ್ನಡಿಗರ ಬೇಡಿಕೆಗಳನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸಬೇಕು. ಕನ್ನಡ ನಾಡಲ್ಲಿ ಎಂ.ಇ.ಎಸ್.ಪುಂಡರ ಪುಂಡಾಟಿಕೆ ಪದೇ ಪದೇ ನೋಡಿಕೊಂಡು ಕೆಲವು ಕನ್ನಡಪರ ಸಂಘಟನೆಗಳು ಮೌನ ವಹಿಸುವುದು ಖಂಡನೀಯ. ಇಂತಹ ಪುಂಡಾಟಿಕೆ ಮೆರೆದವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಶಂಕರ ಮುತ್ತಲಗೇರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಪರಶುರಾಮ ಬುಳ್ಳಾಪೂರ, ಸಹ ಸಂಚಾಲಕ ಸಂತೋಷ ಚಿನಿವಾಲ, ಶರಣು ಗಾಣಿಗೇರ,ಶಿವು ಪಾದಗಟ್ಟಿ, ಮಂಜುನಾಥ ಸವದಿ, ತಿಮ್ಮಣ್ಣ ಕುರುಬರ, ವಿಷ್ಣು ಬಾರಕೇರ, ಸಾದೀಕ ಶೇಖ ಭಾಗವಹಿಸಿದ್ದರು.