ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಡಿ.ರಮೇಶ್‌ರನ್ನು ತಕ್ಷಣ ಹುದ್ದೆಯಿಂದ ವಿಮುಕ್ತಿಗೊಳಿಸಿ ಹೊಸಬರನ್ನು ನೇಮಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ.ಚಿಕ್ಕಣ್ಣ ಒತ್ತಾಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗಾಗಿ ಜಿಲ್ಲಾದ್ಯಂತ ಜೆಡಿಎಸ್ ಕಾರ್‍ಯಕರ್ತರು ಮಿಡಿಯುತ್ತಾರೆ. ನಿಮ್ಮ ಮೇಲಿನ ಅಭಿಮಾನಕ್ಕಾಗಿ ಕಾರ್‍ಯಕರ್ತರು ಬರುತ್ತಾರೆ. ಆದರೆ, ಸೌಜನ್ಯಕ್ಕಾದರೂ ಜಿಲ್ಲಾಧ್ಯಕ್ಷ ಎನಿಸಿಕೊಂಡಿರುವ ವ್ಯಕ್ತಿ ಕಾರ್‍ಯಕರ್ತರ ಸಮಸ್ಯೆ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಹೆಸರೇಳಿಕೊಂಡು ಮನೆ ಕಟ್ಟಿಕೊಂಡ, ಜಮೀನು ಖರೀದಿ ಮಾಡಿಕೊಂಡಿದ್ದಾರೆ. ಮಗಳಿಗೆ ಕೆಲಸ ಕೊಡಿಸಿದ್ದಾರೆ. ಆತ ತನ್ನ ವೈಯಕ್ತಿಕವಾಗಿ ಎಲ್ಲವನ್ನೂ ಮಾಡಿಕೊಂಡಿದ್ದಾರೆ. ಕಾರ್‍ಯಕರ್ತರನ್ನು ನಿಮ್ಮ ಬಳಿಗೆ ಹೋಗಲೂ ಬಿಡುವುದಿಲ್ಲ ಎಂದು ಕಿಡಿಕಾರಿದರು.ಪಕ್ಷದ ಕಾರ್‍ಯಕರ್ತರು ಪೊಲೀಸ್ ಠಾಣೆ ಅಥವಾ ಆಸ್ಪತ್ರೆಗಳಲ್ಲಿ ಕೆಲಸವಾಗಬೇಕಿದ್ದರೂ ಕನಿಷ್ಠ ಸೌಜನ್ಯಕ್ಕೂ ಏನೆಂದು ಕೇಳುವುದಿಲ್ಲ. ಇಂತಹ ಜಿಲ್ಲಾಧ್ಯಕ್ಷ ನಮಗೆ ಬೇಕೇ ಎಂದು ಪ್ರಶ್ನೆ ಮಾಡಿದರು.
ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳಿಂದ ಎಲ್ಲ ಸಹಕಾರವನ್ನೂ ಪಡೆಯುವ ಈತನನ್ನು ಕಂಡರೆ ನಿಷ್ಠಾವಂತ ಕಾರ್‍ಯಕರ್ತರಿಗೆ ಆಗುವುದಿಲ್ಲ. ಎಲ್ಲರೂ ನಿಮ್ಮ ಮುಖ ನೋಡಿಕೊಂಡು ಸುಮ್ಮನಿದ್ದಾರೆ. ಕೆಲವರು ನಿಮ್ಮ ಸಮ್ಮುಖದಲ್ಲೇ ಗಲಾಟೆ ಮಾಡಲೆಂದೇ ಬರುತ್ತಾರೆ. ಆದರೆ, ನಿಮ್ಮನ್ನು ಕಂಡು ಸುಮ್ಮನಾಗುವಂತಹ ಸ್ಥಿತಿ ಇದೆ. ದಯಮಾಡಿ ತಕ್ಷಣ ಯಾರಿಗೂ ಬೇಡದ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರನ್ನು ಬದಲಿಸಿ ಪಕ್ಷವನ್ನು ಉಳಿಸುವಂತೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡ ಗೋಪಾಲಪುರ ಶ್ರೀನಿವಾಸ್ ಇದ್ದರು.
ಲೋಕಶಕ್ತಿ ಪಕ್ಷದಿಂದ ಬಸವರಾಜು ನಾಳೆ ನಾಮಪತ್ರ: ಚಂದ್ರಶೇಖರ ವಿಸ್ತಾವರ್ ಮಠ್ಮಂಡ್ಯ:ಲೋಕ್ ಶಕ್ತಿ ಪಕ್ಷದಿಂದ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ಎನ್.ಬಸವರಾಜು ನಾಳೆ (ಮಾ.3) ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಚಂದ್ರಶೇಖರ್ ವಿಸ್ತಾವರ್ ಮಠ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಅವರು ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್‍ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ. ಪಕ್ಷ ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಮೌಲ್ಯ ಉಳಿಸಿಕೊಂಡು ರಾಜಕಾರಣ ಮಾಡುತ್ತಾ ಬಂದಿದೆ ಎಂದರು.ಜನತಾ ಪರಿವಾರದಲ್ಲಿ ಉತ್ತಮ ಜನಪರವಾದ ಕಾರ್‍ಯಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಎನ್. ಬಸವರಾಜು, ರಾಜ್ಯ ಕಾರ್‍ಯದರ್ಶಿ ಮಾರುತಿ ಪ್ರಸಾದ್ ಇದ್ದರು.