ಬಸ್‌ನಲ್ಲಿ ಅವ್ಯವಸ್ಥೆ, ₹ 3 ಸಾವಿರ ದಂಡ

KannadaprabhaNewsNetwork |  
Published : Aug 26, 2025, 01:05 AM IST
564645 | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಅವ್ಯವಸ್ಥೆ ಮತ್ತು ತೆರೆದುಕೊಳ್ಳದ ಕಿಟಕಿಯಿಂದ ಹಿಂಸೆ ಅನುಭವಿಸಿದ್ದಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹ 3 ಸಾವಿರ ದಂಡ ವಿಧಿಸಿದೆ.

ಕೊಪ್ಪಳ:

ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಅವ್ಯವಸ್ಥೆ ಮತ್ತು ತೆರೆದುಕೊಳ್ಳದ ಕಿಟಕಿಯಿಂದ ಹಿಂಸೆ ಅನುಭವಿಸಿದ್ದಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹ 3 ಸಾವಿರ ದಂಡ ವಿಧಿಸಿದೆ.

ಗಂಗಾವತಿ ತಾಲೂಕಿನ ಬಸಾಪಟ್ಟಣದ ನಿವಾಸಿ ಹಾಗೂ ವಕೀಲ ವೆಂಕಟೇಶ ಬಿ. ಅವರು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಬಸ್‌ನಲ್ಲಿ 2024 ಡಿ. 20ರಂದು ಕಲಬುರಗಿಯಿಂದ ಗಂಗಾವತಿಗೆ ಪ್ರಯಾಣಿಸಿದ್ದರು. ಬಸ್ಸಿನ ಕಿಟಕಿ ಸರಿಯಾಗಿ ಲಾಕ್ ಆಗದೇ ಪದೇ ಪದೇ ತೆರೆದುಕೊಳ್ಳುತ್ತಿತ್ತು. ಕಿಟಕಿಯಿಂದ ಚಳಿ, ಗಾಳಿ ಬೀಸುತ್ತಿದ್ದರಿಂದ ಹಾಗೂ ಬಸ್‌ನಲ್ಲಿ ಅವರ ಸೀಟ್‌ ಹತ್ತಿರ ಲೈಟ್ ಇಲ್ಲದೇ ಇರುವುದರಿಂದ ಹಿಂಸೆಯಾಗಿತ್ತು. ಸೀಟಿನ್ ಬೆಡ್ ಸ್ವಚ್ಛವಾಗಿರಲಿಲ್ಲ ಹಾಗೂ ಅವ್ಯವಸ್ಥಿತವಾಗಿತ್ತು. ಅದರಿಂದ ರಾತ್ರಿ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ. ಈ ಕುರಿತು ಚಾಲಕನಿಗೆ, ಅಧಿಕಾರಿಗಳಿಗೆ ದೂರಿದರೂ ಸರಿಯಾಗಿ ಸ್ಪಂದಿಸದೆ ಇರುವುದರಿಂದ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಆಯೋಗದ ಅಧ್ಯಕ್ಷ ಜಿ.ಇ. ಸೌಭಾಗ್ಯಲಕ್ಷ್ಮಿ ಹಾಗೂ ಸದಸ್ಯ ರಾಜು ಎನ್. ಮೇತ್ರಿ ವಿಚಾರಣೆ ನಡೆಸಿ, ದೂರುದಾರರು ದೈಹಿಕ ಮತ್ತು ಮಾನಸಿಕವಾಗಿ ಯಾತನೆ ಅನುಭವಿಸಿದ್ದಾರೆ. ಸಂಸ್ಥೆ ನಿರ್ಲಕ್ಷ್ಯ ತೋರಿ ಸೇವಾ ನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ಹೇಳಿ, ಪರಿಹಾರ ಮೊತ್ತ ₹3 ಸಾವಿರ ದೂರುದಾರರಿಗೆ ನೀಡುವಂತೆ ಆದೇಶಿಸಿದ್ದಾರೆ. ದೂರಿನ ಖರ್ಚು ₹3 ಸಾವಿರವನ್ನು ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಪಾವತಿಸುವಂತೆ ಆದೇಶ ನೀಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್‌ ಹಾಗೂ ಸಹಾಯಕ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ