ಆಚಾರ್ಯ ತ್ರಯರ ನಿಂದನೆ ಘಟನೆಗಳು ಎಲ್ಲೇ ನಡೆದರೂ ಅದು ಖಂಡನೀಯ ವಿಷಯವಾಗಿದ್ದು, ಇಂಥ ಅವೈಚಾರಿಕ, ಆಧಾರರಹಿತ ಹೇಳಿಕೆಗಳಿಗೆ ಗಮನ ನೀಡದೇ ಒಟ್ಟಾರೆ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು.
ಹುಬ್ಬಳ್ಳಿ:
ತ್ರಿಮತಸ್ಥ ಆಚಾರ್ಯರನ್ನು ನಿಂದಿಸುವ ಪ್ರಯತ್ನಗಳನ್ನು ಮಂಗಳವಾರ ನಡೆದ ಬ್ರಾಹ್ಮಣ ಮಹಾಸಭಾದ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಅಲ್ಲದೇ ಬ್ರಾಹ್ಮಣ ಸಮಾಜದ ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲ ಮುಖಂಡರು ಮುಂದಾಗಬೇಕೆಂಬ ಒಕ್ಕೊರಲ ನಿರ್ಣಯವನ್ನು ಅಂಗೀಕರಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಶಂಕರ ಮಂದಿರ ಸಮಿತಿ, ಹಳೇ ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ ಗುರು ಉತ್ಸವ ಸಂಸ್ಥೆ ಮತ್ತು ಸಮಸ್ತ ವಿಪ್ರ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿನ ಭವಾನಿ ನಗರದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಜಯತೀರ್ಥ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಡುಪಿಯ ರಾಜಾಂಗಣದಲ್ಲಿ ಶಂಕರಾಚಾರ್ಯರನ್ನು ನಿಂದಿಸಿದ ಪ್ರಕರಣ ಹಾಗೂ ಶ್ರೀರಾಮಾನುಜಾಚಾರ್ಯ ಅವರನ್ನು ನಿಂದಿಸಿದ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಲಾಯಿತು. ಅಲ್ಲದೇ ತ್ರಿಮತಸ್ಥ ಗುರುಗಳು ತಮ್ಮ ಶಿಷ್ಯರಿಗೆ ಇತರ ಆಚಾರ್ಯರನ್ನು ನಿಂದಿಸಿ ಹೇಳಿಕೆ ನೀಡದಂತೆ ಅಥವಾ ಭಾಷಣ ಮಾಡದಂತೆ ತಿಳಿಹೇಳಬೇಕೆಂದು ಮನವಿ ಮಾಡಿಕೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಮಾತನಾಡಿ, ಆಚಾರ್ಯ ತ್ರಯರ ನಿಂದನೆ ಘಟನೆಗಳು ಎಲ್ಲೇ ನಡೆದರೂ ಅದು ಖಂಡನೀಯ ವಿಷಯವಾಗಿದ್ದು, ಇಂಥ ಅವೈಚಾರಿಕ, ಆಧಾರರಹಿತ ಹೇಳಿಕೆಗಳಿಗೆ ಗಮನ ನೀಡದೇ ಒಟ್ಟಾರೆ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕಾದುದು ಇಂದಿನ ಅಗತ್ಯ ಎಂದರು.
ಭವಾನಿನಗರದ ರಾಘವೇಂದ್ರ ಸ್ವಾಮಿಗಳ ಮಠದ ಆಡಳಿತಾಧಿಕಾರಿ ಹುಲಿಯಾಚಾರ್, ಅತಿಥಿಗಳಾಗಿ ಆಗಮಿಸಿದ್ದ ಪಂ. ಸಮೀರಾಚಾರ್ಯ ಕಂಠಪಲ್ಲಿ, ಸಭೆಯಲ್ಲಿ ಉದ್ಯಮಿ ಗೋವಿಂದ ಜೋಶಿ, ಮಾಜಿ ಮೇಯರ್ ಹನುಮಂತ ಡಂಬಳ, ಡಾ. ರವಿ ದೇಶಪಾಂಡೆ, ನರಸಿಂಗರಾವ್ ಸೋಮಲಾಪುರ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ವೇದಮೂರ್ತಿಗಳಾದ ವಿನಾಯಕ ತಪಸ, ನವೀನ್ ಆಶ್ರಿತ್, ವೆಂಕಟೇಶ ದಿವಾನ್, ರೋಹಿಣಿ ಜೋಶಿ, ಉಷಾ ಧಬೀರಾ, ಡಾ. ಸಂದೀಪ ಬಂಕಾಪುರ, ಡಾ. ಸಂದೀಪ ಕುಲಕರ್ಣಿ, ಉಮೇಶ ದುಶಿ, ಕೇಶವ ಬಡನಟ್ಟಿ, ಎನ್.ಆರ್. ಕುಲಕರ್ಣಿ, ಎಸ್.ಎ. ಮಾರಟಗೇರಿ ಸೇರಿ ಹಲವರಿದ್ದರು. ಸಂಜೀವ ಜೋಶಿ ಸ್ವಾಗತಿಸಿದರು. ದತ್ತಮೂರ್ತಿ ಕುಲಕರ್ಣಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.