ಮನೆಯ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ: ಬಿ.ಕೆ. ಸಂತೋಷ

KannadaprabhaNewsNetwork |  
Published : Jun 06, 2024, 12:30 AM IST
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಿಂದ ಪರಿಸರ ದಿನವನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಹಿಂದಿನ ತಲೆಮಾರಿನವರು ದೇವರ ಕಾಡು ಎಂದು ಪರಿಸರವನ್ನು ಪೂಜಿಸುತ್ತಿದ್ದರು. ಈಗಿನ ಪೀಳಿಗೆಯವರು ಸಹ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಪರಿಸರವನ್ನು ದೇವರಂತೆ ಪೂಜಿಸಬೇಕು. ಕೃತಜ್ಞತೆ ಸಲ್ಲಿಸಬೇಕು.

ಕಾರವಾರ: ಮನೆಯಲ್ಲಿ ಉತ್ಪಾದನೆಯಾದ ಘನತ್ಯಾಜ್ಯವನ್ನು ಹಸಿ ಕಸ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಪರಿಸರ ಅಧಿಕಾರಿ ಬಿ.ಕೆ. ಸಂತೋಷ ತಿಳಿಸಿದರು.

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬಾಲಮಂದಿರ ಪ್ರೌಢಶಾಲೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಗರದ ಬಾಲಮಂದಿರ ಪ್ರೌಢಶಾಲೆ, ಶ್ರೀಮತಿ ಸುಮತಿದಾಮ್ಲೆ ಬಾಲಕಿಯರ ಪ್ರೌಢಶಾಲೆ ಹಾಗೂ ಹಿಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಮತ್ತು ವಿಶೇಷ ಪರಿಸರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳ ನಿಷೇಧವಾದರೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಲಾಗುತ್ತಿದೆ. ಕೇವಲ ಬಟ್ಟೆ ಚೀಲಗಳನ್ನು ಬಳಸಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಬಳಸಬೇಡಿ ಎಂದರು. ವಿದ್ಯುತ್‌ನ್ನು ಮಿತವಾಗಿ ಬಳಸಿ, ನೀರನ್ನು ಸಹ ಮಿತವಾಗಿ ಬಳಸಿ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಸಂರಕ್ಷಿಸಬೇಕು. ಈಗಾಗಲೇ ನೀರು ಖಾಲಿ ಮಾಡಿ ಬರ ಪರಿಸ್ಥಿತಿ ಎದುರಿಸುವಂತಾಗಿದೆ. ಭೂಮಿಯನ್ನು ಮರುಸ್ಥಾಪನೆ ಮಾಡುವ ಸಂದರ್ಭ ಬಂದಿದೆ. ಆದ್ದರಿಂದ ಪರಿಸರಕ್ಕೆ ಹಾನಿ ಆಗುವ ಯಾವುದೇ ಕೆಲಸಗಳನ್ನು ಮಾಡಬಾರದು ಎಂದರು.

ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ಮಾತನಾಡಿ, ಪರಿಸರವನ್ನು ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು. ಹಿಂದಿನ ತಲೆಮಾರಿನವರು ದೇವರ ಕಾಡು ಎಂದು ಪರಿಸರವನ್ನು ಪೂಜಿಸುತ್ತಿದ್ದರು. ಈಗಿನ ಪೀಳಿಗೆಯವರು ಸಹ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಪರಿಸರವನ್ನು ದೇವರಂತೆ ಪೂಜಿಸಬೇಕು. ಕೃತಜ್ಞತೆ ಸಲ್ಲಿಸಬೇಕು ಎಂದರು.

ಬಾಲಮಂದಿರ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಶೈಕ್ಷಣಿಕ ಸಹಾಯಕಿ ಕವಿತಾ ಮೇಸ್ತ, ಶಿಕ್ಷಕಿ ಭಾರತಿ ಐಸಾಕ್, ಮಾಲಿನ್ಯ ನಿಯಂತ್ರಣಾ ಮಂಡಳಿಯ ಯೋಜನಾ ಸಹಾಯಕಿ ಡಾ. ಅಮೃತಾ ಶೇಟ್ ಇದ್ದರು.

ಬಹುಮಾನ: ಚಿತ್ರಕಲಾ ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರಜ್ವಲ್ ಶೇಟ್ ಪ್ರಥಮ, ಆಯುಷ್ ರೇವಂಡಿಕರ ದ್ವಿತೀಯ, ರೋಹನ ಗೌಡ ತೃತೀಯ, ವೇದಿಕಾ ತಾಂಡೇಲ ಸಮಾಧಾನಕರ ಬಹುಮಾನ ಮತ್ತು ಶ್ರೇಯಸ್ ಗುನಗಿ ಮೆಚ್ಚುಗೆಯ ಬಹುಮಾನವನ್ನು ಪಡೆದುಕೊಂಡರು.

ಪ್ರಬಂಧ ಸ್ಪರ್ಧೆಯಲ್ಲಿ ಸುಫಿಯಾ ಸೈಯದ್ ಪ್ರಥಮ, ರಾಶಿ ಪೇಡ್ನೇಕರ ದ್ವಿತೀಯ, ಸೃಷ್ಟಿ ಗೌರಯ್ಯ ತೃತೀಯ, ಕಾಂಚಿಕಾ ನಾಯ್ಕ ಸಮಾಧಾನಕರ, ಸೌಮ್ಯ ಕುರ್ಡೇಕರ ಮೆಚ್ಚುಗೆಯ ಬಹುಮಾನ ಪಡೆದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ