ಜನತಾದರ್ಶನದಲ್ಲಿ ಸ್ವೀಕೃತ ಅರ್ಜಿ ಒಂದು ತಿಂಗಳಲ್ಲಿ ವಿಲೇವಾರಿ: ಕೃಷಿ ಸಚಿವ ಸಿಆರ್‌ಎಸ್‌

KannadaprabhaNewsNetwork | Published : Mar 5, 2024 1:34 AM

ಸಾರಾಂಶ

ಲೋಕಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ಬಾರಿ ಸ್ವೀಕಾರವಾಗುವ ಅರ್ಜಿಗಳ ವಿಲೇವಾರಿ ತಡವಾಗಬಹುದು. ಚುನಾವಣೆ ನಂತರ ಜನತಾದರ್ಶನ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು. ಈಗಾಗಲೇ ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಜನತಾದರ್ಶನದಲ್ಲಿ ಸ್ವೀಕರಿಸುವ ಕುಂದುಕೊರತೆ ಅರ್ಜಿಗಳೊಂದಿಗೆ ಸೂಕ್ತ ದಾಖಲಾತಿಗಳೊಂದಿಗೆ ಸಾರ್ವಜನಿಕರು ಸಲ್ಲಿಸಿದರೆ ಒಂದು ತಿಂಗಳೊಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಕೊಪ್ಪ ಹೋಬಳಿ ಮರಳಿಗ, ತಗ್ಗಹಳ್ಳಿ ಹಾಗೂ ಬೆಕ್ಕಳಲೆ ಗ್ರಾಮಗಳಲ್ಲಿ ಜನತಾದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಲೋಕಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ಬಾರಿ ಸ್ವೀಕಾರವಾಗುವ ಅರ್ಜಿ ವಿಲೇವಾರಿ ತಡವಾಗಬಹುದು. ಚುನಾವಣೆ ನಂತರ ಜನತಾ ದರ್ಶನ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದರು.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡುತ್ತಿದೆ. ಜನ ಸಾಮಾನ್ಯರನ್ನು ಸಬಲೀಕರಣಗೊಳಿಸಲು ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಬರ ಉಂಟಾಗಿರುವುದರಿಂದ ಪ್ರತಿ ರೈತರಿಗೆ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರವಾಗಿ 2000 ರು. ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ‌. ಬೆಳೆ ವಿಮೆ ಪಡೆದಿರುವ ರೈತರಿಗೆ ಬೆಳೆ ನಷ್ಟದ ಹಿನ್ನೆಲೆ ಈಗಾಗಲೇ 600 ಕೋಟಿ ರು. ನೀಡಲಾಗಿದೆ. ಉಳಿದ ರೈತರಿಗೆ 800 ಕೋಟಿ ರು. ಅನುದಾನ ಮಾರ್ಚ್ ತಿಂಗಳೊಳಗೆ ನೀಡಲಾಗುವುದು ಎಂದರು.

ಒಟ್ಟಾರೆ ರೈತರು 140 ಕೋಟಿ ರು.ಪಾವತಿ ಮಾಡಿ ಬೆಳೆ ವಿಮೆ ಪಡೆದಿದ್ದು, 1,400 ಕೋಟಿ ಹಣವನ್ನು ಕೃಷಿ ಇಲಾಖೆಯಿಂದ ಮಾರ್ಚ್ ತಿಂಗಳೊಳಗಾಗಿ ರೈತರಿಗೆ ನೀಡಲಾಗುವುದು. ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ ಜೊತೆಗೆ ಸರ್ಕಾರದಿಂದ ನೀಡುವ ಯಾವುದೇ ಸೌಲಭ್ಯವನ್ನು ಇದುವರೆಗೂ ನಿಲ್ಲಿಸಿಲ್ಲ ಎಂದರು.

ಜಿಲ್ಲೆಯಲ್ಲಿ ಬರಗಾಲ ಬಂದಿದ್ದರೂ ಸಹ ಜನರಿಗೆ ಯಾವುದೇ ತೊಂದರೆಯಾಗದಂತೆ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಕಾಲುವೆಗಳು, ರಸ್ತೆಗಳ ಅಭಿವೃದ್ಧಿ ಚಾಲನೆ ನೀಡಲಾಗಿದೆ. ಮುಂದಿನ ಎರಡು ಮೂರು ವರ್ಷದೊಳಗೆ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದರು.

ಸರ್ಕಾರವು ಎಲ್ಲ ರೈತರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಶಕ್ತಿ ಮೀರಿ ಸಹಕರಿಸಿದೆ. ಜೊತೆಗೆ ಡಿಸಿ ಕಚೇರಿ, ತಹಸೀಲ್ದಾರರ ಕಚೇರಿ ಹಾಗೂ ಪಂಚಾಯ್ತಿಗಳಲ್ಲಿ ಜನ ಸಾಮಾನ್ಯರು ಅಲೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ಕೃಷಿ ಉಪ ನಿರ್ದೇಶಕಿ ಮಾಲತಿ, ತಹಸೀಲ್ದಾರ್ ಕೆ.ಎಸ್. ಸೋಮಶೇಖರ್, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ತಾಪಂ ಇಒ ಮಂಜುನಾಥ್, ಬಿಇಒ ಸಿ.ಕಾಳಿರಯ್ಯ. ಸಹಾಯಕ ಕೃಷಿ ಅಧಿಕಾರಿ ಪರಮೇಶ್, ತಾಲೂಕು ಆರೋಗ್ಯ ಅಧಿಕಾರಿ ರವೀಂದ್ರ ಬಿ.ಗೌಡ, ತೋಟಗಾರಿಕಾ ಅಧಿಕಾರಿ ರೇಖಾ, ಪಶು ಪಾಲನೆ ಇಲಾಖೆಯ ಡಾ.ಪ್ರವೀಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಾರಾಯಣ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Share this article