ಬೀದರ್: ಹಮಿಲಾಪೂರ್ ಗ್ರಾಮದ ಡಾ.ಅಂಬೇಡ್ಕರ್ ಪುತ್ಥಳಿಯ ಧ್ವಜ ಸ್ಥಂಭ ನಿರ್ಮಾಣಕ್ಕೆ ಸ್ಥಳ ನೀಡದಿದ್ದರೆ ಜಿಲ್ಲಾಡಳಿತದ ವಿರುದ್ಧ ಬೀದರ್‌ನಿಂದ ಹಮಿಲಾಪೂರ್‌ಗೆ ಪಾದಯಾತ್ರೆ ನಡೆಸಿ ರಾಸ್ತಾ ರೋಕೋ ನಡೆಸಲಾಗುವದು ಅಲ್ಲದೇ ಲೋಕಸಭಾ ಚುನಾವಣೆ ಬಹಿಷ್ಕರಿಸುವದಾಗಿ ಹಮಿಲಾಪೂರ ಬುದ್ಧ ಯುವಕ ಸಂಘದ ಅಧ್ಯಕ್ಷ ಮಹೇಶ ರಾಂಪುರೆ ಎಚ್ಚರಿಸಿದರು.
ಅವರು ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲಾ ಕೇಂದ್ರ ಬೀದರ್‌ನಿಂದ ಕೇವಲ 2 ಕಿಮೀ ದೂರದಲ್ಲಿರುವ ತಾಲೂಕಿನ ಹಮಿಲಾಪುರ ಗ್ರಾಮದಲ್ಲಿ 235 ಜನ ವಾಸಿಸುತ್ತಿದ್ದು, ಇಲ್ಲಿಯ ಕೆಲವರು ಅಕ್ರಮವಾಗಿ ಸಾರ್ವಜನಿಕ ಆಸ್ತಿ ಕಬಳಿಸಿ ಇಲ್ಲಿಯ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.ಕಳೆದ ಏ.26ರಂದು ಚುನಾವಣೆ ನೀತಿ ಸಂಹಿತೆ ಇದ್ದಾಗಲೇ ಗಾದಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದ್ವಜ ಕಟ್ಟೆ ತೆರವುಗೊಳಿಸಿ ಅವಮಾನ ಮಾಡಿದ್ದಾರೆ. ಈ ವಿಚಾರವಾಗಿ ಬೀದರ್ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ತಾಪಂ ಇಒ ಅವರಿಗೆ ದೂರು ಸಲ್ಲಿಸಿದರೂ ಏನು ಪ್ರಯೋಜನ ಆಗಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಅಲ್ಪಸಂಖ್ಯಾತರಿಗೆ ಅದರಲ್ಲೂ ಕ್ರೈಸ್ತ ಬಾಂಧವರನ್ನು ನಮ್ಮ ವಿರುದ್ಧ ಎತ್ತಿ ಕಟ್ಟುವ ಕೆಲಸಕ್ಕೆ ಕೆಲವರು ಕೈ ಹಾಕಿರುವರು. ಇದಕ್ಕೆ ಸ್ಥಳೀಯ ಪೊಲೀಸರ ಕುಮ್ಮಕ್ಕು ಸಹ ಇದೆ ಎಂದು ಮಹೇಶ ಗಂಭೀರ ಆರೋಪ ಮಾಡಿದರು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಡಾ.ಅಂಬೇಡ್ಕರ ಅವರ ಪುತ್ಥಳಿಗೆ ಸ್ಥಳ ನೀಡದೇ ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಗ್ರಾಮಸ್ಥರನ್ನು ಸುರಕ್ಷಿತಗೊಳಿಸಬೇಕೆಂದು ಮನವಿ ಮಾಡಿದರು.
ದಲಿತರ ಹೆಸರು ಹೇಳಿಕೊಂಡು ಅನೇಕ ದಲಿತ ಪರ ಸಂಘಟನೆಗಳು ಈ ಕಡೆ ತಿರುಗಿ ಸಹ ನೋಡಲಿಲ್ಲ. ಸಂವಿಧಾನದ ರಕ್ಷಣೆ ಮಾಡುವ ಹೆಸರು ಹೇಳಿಕೊಳ್ಳುತ್ತಿರುವ ಇವರು ಸಂವಿಧಾನ ಶಿಲ್ಪಿಗೆ ಅವಮಾನ ಆದರೂ ಮೌನ ವಹಿಸಿದ್ದಾರೆ ಎಂದು ಮಹೇಶ ಕಿಡಿ ಕಾರಿದರು.ಮುಖಂಡರಾದ ಪ್ರಭಾಕರ ಭೋಸ್ಲೆ, ಕಿಶೋರ ರಾಂಪುರೆ, ವಿಶಾಲ ಹೊನ್ನಾ, ಲಕ್ಷ್ಮಣ ಕಾಂಬಳೆ, ಘಾಳೆಮ್ಮ ರಾಂಪುರೆ, ಈರಮ್ಮ ರಾಂಪುರೆ, ಚಿತ್ರಮ್ಮ ರಾಂಪುರೆ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.