ರಾಮನಿಂದ ಸ್ತ್ರೀಯರಿಗೆ ಅಗೌರವ: ಹರಳಯ್ಯ ಶ್ರೀ ವಿವಾದಿತ ಹೇಳಿಕೆ

KannadaprabhaNewsNetwork |  
Published : Feb 11, 2024, 01:49 AM ISTUpdated : Feb 11, 2024, 01:39 PM IST
Ravindra Kala Kshethra | Kannada Prabha

ಸಾರಾಂಶ

ಶ್ರೀ ರಾಮಚಂದ್ರ ತನ್ನ ಆಡಳಿತದ ಅವಧಿಯಲ್ಲಿ ಸ್ತ್ರೀಯರನ್ನು ಅಗೌರವದಿಂದ ನಡೆಸಿಕೊಂಡಿದ್ದ ಎಂದು ಚಿತ್ರದುರ್ಗದ ಹರಳಯ್ಯ ಗುರುಪೀಠದ ಶ್ರೀ ಬಸವಹರಳಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶ್ರೀ ರಾಮಚಂದ್ರ ತನ್ನ ಆಡಳಿತದ ಅವಧಿಯಲ್ಲಿ ಸ್ತ್ರೀಯರನ್ನು ಅಗೌರವದಿಂದ ನಡೆಸಿಕೊಂಡಿದ್ದ. ಹೀಗಾಗಿ ನಮಗೆ ರಾಮರಾಜ್ಯಕ್ಕಿಂತ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭೀಮರಾಜ್ಯ ಸ್ಥಾಪನೆಯ ಅಗತ್ಯವಿದೆ. 

ನಾವೆಲ್ಲ ರಾಮ ಆಗುವುದಕ್ಕಿಂತ ಭೀಮನಾಗಬೇಕು ಎಂದು ಚಿತ್ರದುರ್ಗದ ಹರಳಯ್ಯ ಗುರುಪೀಠದ ಶ್ರೀ ಬಸವಹರಳಯ್ಯ ಕರೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಕಾಯಕ ಶರಣರ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲ ಈಗ ರಾಮನ ಹಿಂದೆ ಹೋಗುತ್ತಿದ್ದೇವೆ. 

ಆದರೆ, ರಾಮ ಸ್ತ್ರೀಯರನ್ನು ಅಗೌರವವಾಗಿ ನಡೆಸಿಕೊಂಡಿದ್ದ. ತಮ್ಮ ಪತ್ನಿ ಸೀತೆಯನ್ನು ಅಗ್ನಿ ಪರೀಕ್ಷೆ ನಡೆಸಿದ್ದ. ಅಷ್ಟೇ ಅಲ್ಲ. ಅನಂತರ ಕಾಡಿಗೂ ಕಳುಹಿಸಿದ್ದ. ಶೂರ್ಪನಖಿಯ ಮೂಗು ಕುಯ್ದಿದ್ದ. ಹೀಗಾಗಿ ನಮಗೆ ರಾಮ ರಾಜ್ಯಕ್ಕಿಂತ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭೀಮ ರಾಜ್ಯ ಸ್ಥಾಪನೆಯ ಅಗತ್ಯವಿದೆ ಎಂದರು.

ಇತ್ತೀಚೆಗಷ್ಟೇ ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಕಲ್ಲಿಗೆ ಜೀವ ಕೊಟ್ಟು ಬದುಕಿಸಿದ್ದೇವೆ ಎಂದು ಹೇಳಿ ಜನರನ್ನು ಮೋಸ ಮಾಡಲಾಗುತ್ತಿದೆ.

 ರಾಮ ಮಂದಿರಕ್ಕೆ ಸುತ್ತೂರು ಮಠದ ಶ್ರೀಗಳನ್ನೇ ಒಳಗೆ ಬಿಡಲಿಲ್ಲ. ಇದು ನಮ್ಮೆಲ್ಲರಿಗೂ ಪಾಠವಾಗಬೇಕು. ನಾವು ದೇವಸ್ಥಾನದೊಳಗೆ ಪ್ರವೇಶಿಸದ ಶೂದ್ರರು. ಹೀಗಾಗಿ ನಾವೆಲ್ಲ ದೇವಸ್ಥಾನಗಳನ್ನು ಬಹಿಷ್ಕರಿಸಿ ದೇವಸ್ಥಾನವನ್ನೇ ಶೂದ್ರವನ್ನಾಗಿಸಬೇಕು ಎಂದು ಶ್ರೀ ಬಸವಹರಳ್ಳಯ್ಯ ಸ್ವಾಮೀಜಿ ಆಗ್ರಹಿಸಿದರು.

ಸಾರ್ವಜನಿಕವಾಗಿ ಧಾರ್ಮಿಕ ಆಚರಣೆ ಮಾಡುವುದನ್ನು ನಿಷೇಧಿಸಬೇಕು. ಮಸೀದಿ ಹಾಗೂ ದೇವಸ್ಥಾನಗಳನ್ನು ಶಿಕ್ಷಣ ಸಂಸ್ಥೆಗಳನ್ನಾಗಿ ಪರಿವರ್ತಿಸಬೇಕು. ನಾವೆಲ್ಲರೂ ಬಸವಣ್ಣ ಅವರ ಶರಣ ತತ್ವ ಪಾಲನೆಗೆ ಮುಂದಾಗಬೇಕು ಎಂದರು.

ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವೆ ರತ್ನಮಾಲಾ ಸವಣೂರು, ಮಾಜಿ ಸಚಿವ ಎಚ್‌. ಆಂಜನೇಯ, ಮಾಜಿ ಶಾಸಕರಾದ ಪಿಳ್ಳ ಮುನಿಸಾಮಪ್ಪ, ತಿಮ್ಮರಾಯಪ್ಪ, ಅಖಿಲ ಕರ್ನಾಟಕ ಮಾದಿಗ ಸಂಘಟನೆ ಒಕ್ಕೂಟದ ಅಧ್ಯಕ್ಷ ಎಂ. ಗುರುಮೂರ್ತಿ, ಡೋಹಾರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ ಸುರೇಂದ್ರ ಸವಣೂರು, ರಾಜ್ಯ ಸಮಗಾರ ಹರಳಯ್ಯ (ಚಮ್ಮಾರ) ಸಂಘದ ಅಧ್ಯಕ್ಷ ಜಗದೀಶ್‌ ದುಂಡಪ್ಪ ಬೆಟಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್‌.ಮಂಜುಳಾ, ನಿದೇಶಕಿ ಡಾ. ಧರಣೀದೇವಿ ಮಾಲಗತ್ತಿ ಇತರರಿದ್ದರು.

ಐವರು ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರ ಕುರಿತು ಅಧ್ಯಯನ ಪೀಠ ಸ್ಥಾಫಿಸಬೇಕು ಎಂಬ ಬೇಡಿಕೆಯಿದೆ. 

ಸದ್ಯ ಕಲಬುರಗಿಯಲ್ಲಿ ಮಾದಾರ ಚೆನ್ನಯ್ಯ ಅಧ್ಯಯನ ಪೀಠವಿದೆ. ಆದಾಗ್ಯೂ ಎಲ್ಲ ಐವರು ಕಾಯಕ ಶರಣರ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸುವ ಸಲುವಾಗಿ ಒಂದೇ ಅಧ್ಯಯನ ಪೀಠ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. 

ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಬಾರಿಯ ಬಜೆಟ್‌ನಲ್ಲಿಯೇ ಘೋಷಣೆ ಮಾಡುವಂತೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ತಳ ಸಮುದಾಯಕ್ಕೆ ಸೇರಿದ ಕೇಂದ್ರ ಮಾಜಿ ರಕ್ಷಣಾ ಸಚಿವ ದಿವಂಗತ ಬಾಬು ಜಗಜೀವನ್‌ ರಾಮ್‌ ಅವರಿಗೆ ಭಾರತ ರತ್ನ ನೀಡಲು ಸರ್ಕಾರದಿಂದ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಡ ಹೇರಲಾಗುವುದು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಅದನ್ನು ಅನುಮೋದಿಸಿದ ಸಚಿವ ಶಿವರಾಜ ತಂಗಡಗಿ, ಈ ಕುರಿತು ಸಿಎಂ ಅವರೊಂದಿಗೆ ಮಾತುಕತೆ ನಡೆಸಿ, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರದಿಂದ ಪತ್ರ ಬರೆಯುವಂತೆ ಕೋರಲಾಗುವುದು ಎಂದು ಹೇಳಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?