-ವಿಜಯದಶಮಿಯಂದು ಪಲ್ಲಕ್ಕಿ ಮೆರವಣಿಗೆ ವೇಳೆ ಅನ್ಯ ಕೋಮಿನವರು ತಡೆಯೊಡ್ಡಿದ ಆರೋಪ
ಕನ್ನಡಪ್ರಭ ವಾರ್ತೆ ಹಾನಗಲ್ಲ
ವಿಜಯ ದಶಮಿಯಂದು ಇತಿಹಾಸ ಪ್ರಸಿದ್ಧ ತಾರಕೇಶ್ವರ ದೇವಸ್ಥಾನದ ಪಲ್ಲಕ್ಕಿಯನ್ನು ರಸ್ತೆಯಲ್ಲಿ ತಡೆದು ಒಂದು ಕೋಮಿನವರು ಘೋಷಣೆ ಕೂಗಿದ ಘಟನೆ ಖಂಡಿಸಿ ಹಲಗೆ ಚಳವಳಿ ಮೂಲಕ ಪ್ರತಿಭಟನೆ ಹಿನ್ನೆಲೆ ಪಟ್ಟಣದಲ್ಲಿ ೧೪೪ ಕಲಂ ಜಾರಿಗೊಳಿಸಲಾಗಿದೆ. ಪ್ರತಿಭಟನೆಗೆ ಮುಂದಾದ 70ಕ್ಕೂ ಅಧಿಕ ಹಿಂದುಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರತಿಭಟನೆ ಹಿನ್ನೆಲೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸೋಮವಾರ ಬೆಳಗ್ಗೆಯಿಂದ ರಾತ್ರಿ 10ರವರೆಗೆ ೧೪೪ ಕಲಂ ಜಾರಿಗೊಳಿಸಲಾಗಿತ್ತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಮಾತನಾಡಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು. ಮತ್ತೆ ಇಂತಹ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ವಿಜಯದಶಮಿಯಂದು ಪಲ್ಲಕ್ಕಿ ಬರುವ ಸಂದರ್ಭದಲ್ಲಿ ಅಡಚಣೆ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಶೀಘ್ರ ಬಂಧಿಸುತ್ತೇವೆ. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಆದರೆ ತಪ್ಪಿತಸ್ಥರನ್ನು ಬಂಧಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಅಚಲ ನಿರ್ಧಾರ ಪ್ರಕಟಿಸಿದರು.
ರಾಷ್ಟ್ರ ರಕ್ಷಣಾ ಪಡೆ ರಾಜ್ಯಾಧ್ಯಕ್ಷ ಪುನೀತ ಕೆರೆಹಳ್ಳಿ, ಸರ್ಕಾರ ಈಗ ನಮ್ಮ ಪ್ರತಿಭಟನೆ ಹತ್ತಿಕ್ಕುತ್ತಿರಬಹುದು. ಆದರೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲದು. ಏಕಾಏಕಿ ೧೪೪ ಕಲಂ ಜಾರಿ ಮಾಡಿದ ಕ್ರಮ ಸರಿಯಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಒಂದೆರಡು ದಿನ ಮೊದಲೇ ೧೪೪ ಘೋಷಣೆಯಾಗಿದ್ದರೆ ನಾವು ಬೇರೆ ವಿಚಾರ ಮಾಡುತ್ತಿದ್ದೇವು. ಏನೇ ಆಗಲಿ ಹೋರಾಟ ನಿಲ್ಲದು ಎಂದರು.ಮುಖಂಡರಾದ ರಾಜಶೇಖರಗೌಡ ಕಟ್ಟೇಗೌಡರ, ಕಲ್ಯಾಣಕುಮಾರ ಶೆಟ್ಟರ, ಗಣೇಶ ಮೂಡ್ಲಿ, ಪ್ರವೀಣ ಲಿಂಗೇರಿ, ಹರೀಶ ಹಾನಗಲ್ಲ. ರವಿಚಂದ್ರ ಪುರೋಹಿತ, ಗಣೇಶ ಭಜಂತ್ರಿ, ಲೋಕೇಶ ಕೊಂಡೋಜಿ, ಬಸವರಾಜ ಮಟ್ಟಿಮನಿ, ಪ್ರವೀಣ ಸುಲಾಖೆ, ಪ್ರಶಾಂತ ಕಂಕಾಳೆ, ಮನೋಜ ಕಲಾಲ, ಮಾಲತೇಶ ಹುಡೇದ, ತುಳಜೇಶ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದರು.
ನಾಲ್ಕಾರು ಪೊಲೀಸ್ ವಾಹನಗಳಲ್ಲಿ ಬಂಧಿತರನ್ನು ಕೊಂಡ್ಯೊಯ್ಯಲಾಯಿತಾದರೂ ಬೇರೆ ಬೇರೆ ಊರುಗಳಿಂದ ಪ್ರತಿಭಟನಾಕಾರರು ಹಾನಗಲ್ಲ ವಿರಕ್ತಮಠದತ್ತ ಧಾವಿಸುತ್ತಿದ್ದರು. ಹಾನಗಲ್ಲ ಪ್ರವೇಶ ದ್ವಾರಗಳಲ್ಲಿ ಬರುವವರನ್ನು ವಿಚಾರಿಸಿ ಪೊಲೀಸರು ಒಳಗೆ ಬಿಡುತ್ತಿದ್ದರು. ಹಾನಗಲ್ಲ ವಿರಕ್ತಮಠದ ಪ್ರವೇಶ ದ್ವಾರದಲ್ಲಿ ಯಾರನ್ನೂ ಒಳಬಿಡದಂತೆ ಬ್ಯಾರಿಕೇಡ್ ಹಾಕಿ ನಿರ್ಬಂಧ ಹೇರಲಾಗಿತ್ತು.ಈ ಸಂದರ್ಭದಲ್ಲಿ ಸವಣೂರು ಉಪವಿಭಾಗಾಧಿಕಾರಿ ಮಹ್ಮದ ಖೀಜರ್, ತಹಸೀಲ್ದಾರ ರವಿಕುಮಾರ ಕೊರವರ, ಡಿವೈಎಸ್‌ಪಿಗಳಾದ ಮಂಜುನಾಥ, ಎಂ.ಎಸ್. ಪಾಟೀಲ, ಸಿಪಿಐ ಎಸ್.ಆರ್. ಶ್ರೀಧರ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಇದ್ದರು.