ಬಿಬಿಎಂಪಿಯ ಅಪಾಯಕಾರಿ ಶಾಲೆ ತೆರವಿಗೆ ಮತಗಟ್ಟೆ ಅಡ್ಡಿ!

KannadaprabhaNewsNetwork | Updated : Feb 04 2024, 02:25 PM IST

ಸಾರಾಂಶ

ಅಪಾಯ ಸ್ಥಿತಿಯಲ್ಲಿ ಇರುವ ಬಿಬಿಎಂಪಿಯ 19 ಶಾಲಾ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮುಂಬರುವ ಲೋಕಸಭಾ ಚುನಾವಣೆ ಅಡ್ಡಿಯಾಗಿದೆ.

ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪಾಯ ಸ್ಥಿತಿಯಲ್ಲಿ ಇರುವ ಬಿಬಿಎಂಪಿಯ 19 ಶಾಲಾ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮುಂಬರುವ ಲೋಕಸಭಾ ಚುನಾವಣೆ ಅಡ್ಡಿಯಾಗಿದೆ.

ಬಿಬಿಎಂಪಿಯು ಶಿಶು ವಿಹಾರ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಸೇರಿದಂತೆ ಒಟ್ಟು 163 ಶಾಲಾ-ಕಾಲೇಜುಗಳನ್ನು ನಡೆಸುತ್ತಿದೆ. 

ಕಳೆದ ಡಿಸೆಂಬರ್‌ನಲ್ಲಿ ಶಿವಾಜಿನಗರ ಭಾರತಿನಗರದ ಪಾಲಿಕೆಯ ಶಿಶುವಿಹಾರ ಕಟ್ಟಡ ರಾತ್ರೋರಾತ್ರಿ ಕುಸಿದು ಬಿದ್ದಿತ್ತು. ರಾತ್ರಿ ವೇಳೆ ಕಟ್ಟಡ ಕುಸಿತ ಪರಿಣಾಮ ಯಾವುದೇ ಅನಾಹುತ ಉಂಟಾಗಿರಲಿಲ್ಲ. 

ಈ ಘಟನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯು ತನ್ನ ಎಲ್ಲಾ ಶಾಲಾ ಕಾಲೇಜು ಕಟ್ಟಡಗಳ ಸದೃಢತೆ ಪರಿಶೀಲನೆಗೆ ವರದಿ ನೀಡುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿತ್ತು.

ಅದರಂತೆ ಪರಿಶೀಲನೆ ನಡೆಸಿ ಬಿಬಿಎಂಪಿ ಯೋಜನಾ ವಿಭಾಗದ ಅಧಿಕಾರಿಗಳು 163 ಶಾಲಾ-ಕಾಲೇಜುಗಳ ಪೈಕಿ ಪೂರ್ವ ವಲಯದ 12, ಪಶ್ಚಿಮ ವಲಯದ 6, ದಕ್ಷಿಣ ವಲಯದ 1 ಶಾಲೆಯ ಕಟ್ಟಡದ ಸೇರಿದಂತೆ 19 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ತೀವ್ರ ಅಪಾಯದ ಸ್ಥಿತಿಯಲ್ಲಿವೆ. 

ಅಲ್ಲಿನ ವಿದ್ಯಾರ್ಥಿಗಳನ್ನು ತಕ್ಷಣ ಬೇರೆ ಕಟ್ಟಡಗಳಿಗೆ ಸ್ಥಳಾಂತರಗೊಳಿಸಿ ಕಟ್ಟಡ ತೆರವು ಮಾಡಬೇಕು. ಇಲ್ಲವಾದರೆ, ಅಪಾಯ ಉಂಟಾಗಬಹುದು ಎಂದು ವರದಿ ನೀಡಿತ್ತು.

ವರದಿ ನೀಡಿ ಈಗಾಗಲೇ ಸುಮಾರು ಎರಡು ತಿಂಗಳು ಕಳೆದಿದೆ. 13 ಕಟ್ಟಡ ತೆರವುಗೊಳಿಸುವುದಕ್ಕೆ ಆದೇಶಿಸಲಾಗಿದೆ. ಆದರೆ, ಈ ಶಾಲಾ ಕಟ್ಟಡಗಳಲ್ಲಿ ಚುನಾವಣೆ ಮತಗಟ್ಟೆ ಕೇಂದ್ರಗಳು ಇರುವುದರಿಂದ ಸದ್ಯಕ್ಕೆ ಕಟ್ಟಡ ತೆರವುಗೊಳಿಸುವುದು ಬೇಡ. 

ಲೋಕಸಭಾ ಚುನಾವಣೆ ಬಳಿಕ ಕಟ್ಟಡ ತೆರವು ಕಾರ್ಯ ನಡೆಸುವುದಕ್ಕೆ ಸೂಚನೆ ನೀಡಲಾಗಿದೆ. ಹೀಗಾಗಿ, ಕಟ್ಟಡ ತೆರವು ಕಾರ್ಯ ಕೈಗೊಂಡಿಲ್ಲ. ಉಳಿದಂತೆ ಈಗಾಗಲೇ ಭಾರತಿನಗರ ಶಾಲಾ ಕಟ್ಟಡ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಾಯದ ಐದು ಕಟ್ಟಡದಲ್ಲಿ ಇಂದಿಗೂ ಪಾಠ: ವರದಿ ನೀಡಿ ಎರಡು ತಿಂಗಳು ಕಳೆದರೂ ಇಂದಿಗೂ ಅಪಾಯದ ಸ್ಥಿತಿಯಲ್ಲಿ ಇರುವ ಐದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ನಡೆಯುತ್ತಿದೆ. 

ಶಾಲೆ ಸ್ಥಳಾಂತರ ಮಾಡುವುದಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಐದು ಶಾಲೆಯ ಮಕ್ಕಳನ್ನು ಬೇರೆ ಕಟ್ಟಡಗಳಿಗೆ ಸ್ಥಳಾಂತರಿಸಲಾಗುವುದು ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಹೇಳುತ್ತಿದ್ದಾರೆ.

ದುರಸ್ತಿ ಕಾಮಗಾರಿ ಶುರು: ಉಳಿದಂತೆ 73 ಶಾಲಾ ಕಾಲೇಜು ಕಟ್ಟಡಗಳು ಸುರಕ್ಷಿತವಾಗಿವೆ. 67 ಶಾಲಾ-ಕಾಲೇಜು ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಚಾವಣಿಯಲ್ಲಿ ಕಬ್ಬಿಣದ ಸರಳು ಹೊರ ಬಂದ ಸ್ಥಿತಿಯಲ್ಲಿವೆ. ಹಾಗಾಗಿ, ದುರಸ್ತಿಗೊಳಿಸಬೇಕಿದೆ ಎಂದು ತಿಳಿಸಲಾಗಿತ್ತು. 

ಆ ಪ್ರಕಾರ 37 ಶಾಲೆಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಪಾಲಿಕೆ ಯೋಜನಾ ವಿಭಾಗದಿಂದ ಕಾಮಗಾರಿ ನಡೆಸಲಾಗುತ್ತಿದೆ. ಇನ್ನುಳಿದ 30 ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರಿಗೆ ₹40 ಸಾವಿರದಿಂದ ₹1.20 ಲಕ್ಷ ನೀಡಲಾಗಿದ್ದು, ದುರಸ್ತಿ ನಡೆಸುವಂತೆ ನಿರ್ದೇಶನ ನೀಡಲಾಗಿದೆ. 

ಆ ಪ್ರಕಾರ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ಪಾಲಿಕೆ ಶಿಕ್ಷಣ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ತೆರವುಗೊಳಿಸಬೇಕಾದ ಶಾಲಾ ಕಟ್ಟಡದಲ್ಲಿ ಮತಗಟ್ಟೆ ಕೇಂದ್ರ ಇದೆ. ಹಾಗಾಗಿ, ಲೋಕಸಭಾ ಚುನಾವಣೆ ಬಳಿಕ ಕಟ್ಟಡ ತೆರವು ಮಾಡುವುದಕ್ಕೆ ನಿರ್ಧರಿಸಲಾಗಿದೆ. ಇನ್ನು ಸುಸ್ಥಿತಿಯಲ್ಲಿ ಇರುವ ಕೊಠಡಿ ನೋಡಿಕೊಂಡು ಮತದಾನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು. -ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ

Share this article