ದುರ್ಗಾಮಾತಾ ಸಹಕಾರ ಸಂಘದ ಬಗ್ಗೆ ಅಸಮಾಧಾನ: ಹಣ ಹಿಂದಿರುಗಿಸಲು ಒತ್ತಾಯ

KannadaprabhaNewsNetwork | Published : Jun 29, 2025 1:32 AM

ಜನವರಿ 2025 ರಿಂದ ಯಾವುದೇ ಠೇವಣಿ ಹಣವನ್ನು ಹಿಂತಿರುಗಿಸುತ್ತಿಲ್ಲ

ಕಾರವಾರ: ಸದಾಶಿವಗಡದಲ್ಲಿನ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ಠೇವಣಿದಾರರಿಗೆ ಹಣ ಹಿಂದಿರುಗಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಗ್ರಾಹಕರು ಅಸಮಾಧಾನ ತೀವ್ರ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಗ್ರಾಹಕ ಅಜೀತ್ ನಾಯ್ಕ, ಸಹಕಾರ ಸಂಘದ ಕಾರ್ಯನಿರ್ವಹಣೆ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ.

ಸಹಕಾರ ಸಂಘವು ಪ್ರಧಾನ ಕಚೇರಿ ಸೇರಿದಂತೆ ಒಟ್ಟು 13 ಶಾಖೆಗಳನ್ನು ಹೊಂದಿದೆ. ಈ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಗ್ರಾಹಕರು ವಿವಿಧ ಯೋಜನೆಗಳಾದ ಎಂಐಎಸ್, ಆರ್ಡಿ, ಎಫ್ಡಿ, ಎಸ್ಬಿ, ಮತ್ತು ಪಿಗ್ಮಿ ಖಾತೆಗಳಲ್ಲಿ ಠೇವಣಿ ಇಟ್ಟಿದ್ದರು. ಆದರೆ, ಜನವರಿ 2025 ರಿಂದ ಯಾವುದೇ ಠೇವಣಿ ಹಣವನ್ನು ಹಿಂತಿರುಗಿಸುತ್ತಿಲ್ಲ ಎಂದು ಅಜಿತ್ ನಾಯ್ಕ ತಿಳಿಸಿದರು.ಸಂಘವು ಕಳೆದ ಎರಡು ವರ್ಷಗಳಿಂದ ಆಡಿಟ್ ಮಾಡಿಸಿಲ್ಲ. ₹56 ಕೋಟಿ ಠೇವಣಿ ಸಂಗ್ರಹಿಸಿದ್ದರೂ ಕೇವಲ ₹50 ಕೋಟಿ ಮಾತ್ರ ತೋರಿಸುತ್ತಿದ್ದಾರೆ. ಠೇವಣಿ ಹಣ ಹಿಂದಿರುಗಿಸಲು ನಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅಜಿತ್ ನಾಯ್ಕ ಆಪಾದಿಸಿದರು.

ಸಹಕಾರ ಸಂಘವು ಜೂನ್ 25ರಂದು ಹಣವನ್ನು ಮರುಪಾವತಿಸುವುದಾಗಿ 2025ರ ಏಪ್ರಿಲ್ 30ರಂದು ಲಿಖಿತವಾಗಿ ಭರವಸೆ ನೀಡಿತ್ತು. ಅದರಂತೆ, ಜೂನ್ 25ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಪ್ರಧಾನ ಕಚೇರಿಯಲ್ಲಿ ಠೇವಣಿದಾರರು ಕಾದಿದ್ದರೂ ಯಾವುದೇ ಹಣ ನೀಡಲಿಲ್ಲ ಎಂದು ಅವರು ವಿವರಿಸಿದರು.

ಈ ಬಗ್ಗೆ ಪೊಲೀಸರು ದೂರು ಸ್ವೀಕರಿಸಲು ಮುಂದಾಗದೇ ಇದ್ದಾಗ ಜೂ.25ರಂದು ಎಸ್ಪಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ವಂಚನೆಯಲ್ಲಿ ಶಾಮೀಲಾದವರ ಮೇಲೆ ಕಠಿಣ ಕ್ರಮ ಕೈಗೊಂಡು ಗ್ರಾಹಕರಿಗೆ ಹಣ ಮರಳಿಸುವಂತಾಗಬೇಕು ಎಂದು ಗ್ರಾಹಕರು ಒತ್ತಾಯಿಸಿದರು.

ಮನೋಜ ನಾಯ್ಕ, ಅಕ್ಷತಾ ಬೇಳೂರಕರ, ವೆಂಕಟರಮಣ ಹರಿಕಾಂತ, ರೋಹಿದಾಸ ತಾಮ್ಸೆ, ಮತ್ತು ಶಗುಪ್ತಾ ತಾಳಿಕೋಟೆ ಇದ್ದರು.