ಮುಂಡಗೋಡ: ದಮ್, ತಾಕತ್ತು ಇದ್ದವರು ತಕ್ಷಣ ಪಕ್ಷ ಬಿಟ್ಟು ಹೋಗಲಿ. ಅದನ್ನು ಬಿಟ್ಟು ಇಲ್ಲಿಯೇ ಇದ್ದುಕೊಂಡು ಆಟವಾಡುವುದನ್ನು ನಿಲ್ಲಿಸಲಿ. ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ ಗೊಂದಲಕ್ಕೆ ಒಳಪಡಿಸುತ್ತಿದ್ದು, ಹಣ ಬಲದ ದರ್ಪ ತೋರಿಸುತ್ತಿರುವರಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಟೀಕಿಸಿದರು.
ಬುಧವಾರ ಸಂಜೆ ಪಟ್ಟಣದ ದೈವಜ್ಞ ಕಲ್ಯಾಣಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಹಾಗೂ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಜೆಪಿಗೆ ಬಂದು ಶಾಲು ಹೊದಿಸಿಕೊಂಡು ಅಧಿಕಾರ ಅನುಭವಿಸಿ ದ್ರೋಹ ಬಗೆಯುತ್ತಿರುವವರು ಯಾವತ್ತೂ ಉದ್ಧಾರವಾಗುವುದಿಲ್ಲ. ಪಕ್ಷ ಬಿಟ್ಟು ಹೋಗುವುದಾದರೆ ಬೇಗ ಹೋಗಬೇಕು. ಸುಮ್ಮನೆ ನಾಟಕವಾಡಿ ಗೊಂದಲ ಸೃಷ್ಟಿಸದಂತೆ ಪರೋಕ್ಷವಾಗಿ ಶಾಸಕ ಶಿವರಾಮ ಹೆಬ್ಬಾರ ವಿರುದ್ಧ ಮತ್ತೆ ಅಬ್ಬರಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕ್ಷೇತ್ರಕ್ಕೆ ಮಂಜೂರಿಯಾದ ಕೆಲಸಗಳೇ ಇದುವರೆಗೆ ಪ್ರಗತಿಯಲ್ಲಿವೆ. ಭಿಕಾರಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಯಾಪೈಸೆ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಕೇವಲ ಬಿಟ್ಟಿ ಭಾಗ್ಯದ ಹೆಸರು ಹೇಳಿಕೊಂಡು ಪ್ರಚಾರಕ್ಕೆ ಧುಮುಕಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಕಿಸಾನ್ ಸಮ್ಮಾನ, ಆಯುಷ್ಮಾನ ಭಾರತ, ಉಜ್ವಲ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿವೆ. ಕಾಂಗ್ರೆಸ್‌ನವರು ೭೦ ವರ್ಷ ಮಾಡಿದ ಡೋಂಗಿ ನಾಟಕವನ್ನು ಮತ್ತೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪಕ್ಷ ಬಿಡುವವರು ಬಿಟ್ಟು ಹೋಗಲಿ. ಬಿಜೆಪಿ ಯಾರದ್ದೋ ಒಬ್ಬರ ಮೇಲೆ ನಿಂತಿಲ್ಲ. ನಮ್ಮಲ್ಲಿ ಗಟ್ಟಿಮನಸಿನ ಕಾರ್ಯಕರ್ತರಿದ್ದಾರೆ. ವ್ಯಕ್ತಿಗಿಂತ ದೇಶ ಮುಖ್ಯ. ಕಾರ್ಯಕರ್ತರನ್ನು ನಾನು ಎಂದೂ ಬಿಟ್ಟು ಕೊಟ್ಟಿಲ್ಲ. ನಿಮ್ಮ ಜತೆ ಸದಾ ಇರುತ್ತೇನೆ. ಹಣದಿಂದ ಕಾರ್ಯಕರ್ತರನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಅದ್ಯಾರೋ ಒಬ್ಬರು ಹಣ ಕೊಟ್ಟು ನಮ್ಮ ಯಲ್ಲಾಪುರ- ಮುಂಡಗೋಡ ಕ್ಷೇತ್ರದಲ್ಲಿ ಗೆದ್ದು ಬರ್ತಿನಿ ಅಂತಾ ಮಾತನಾಡ್ತಿದಾರಂತೆ. ಹೀಗಾಗಿ ಅಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಶಿವರಾಮ ಹೆಬ್ಬಾರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು. ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಬಿಜೆಪಿಯಿಂದ ಅಭಿವೃದ್ಧಿ ನಿರಂತರವಾಗಿ ನಡೆದಿದೆ. ನಾವು ಯಾವತ್ತೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಮೊಟ್ಟ ಮೊದಲು ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬ ಭಾವನೆಯನ್ನು ತಂದಿರುವುದು ಬಿಜೆಪಿ ಎಂಬುವುದು ಎಲ್ಲರಿಗೂ ಗೊತ್ತಾಗಿದೆ ಎಂದರು. ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯನ್ನು ಅವಲಂಬಿಸಿ ನಿಂತಿಲ್ಲ. ಕಾರ್ಯಕರ್ತರ ಅವಲಂಬಿತ ಪಕ್ಷವಾಗಿದೆ. ಮೋದಿಯವರ ಪ್ರತೀಕವಾಗಿ ೪೦ ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿ ನಮ್ಮ ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ಬಣ್ಣಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಅಶೋಕ ಚಲವಾದಿ, ಮಹೇಶ ಹೊಸಕೊಪ್ಪ ಮಾತನಾಡಿದರು. ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ, ಲೆಸ್ಸಾ ಥಾಮಸ್, ಶ್ರೀಕಾಂತ ಸಾನು, ಜಿ.ಎನ್. ಗಾಂವಕರ, ಪ್ರಶಾಂತ ನಾಯ್ಕ ವೀಣಾ ಓಶಿಮಠ, ಸುಬ್ರಾಯ ರಮೇಶ ನಾಯ್ಕ ಪ್ರೇಮಕುಮಾರ ನಾಯ್ಕ ತುಕಾರಾಮ ಇಂಗಳೆ, ಮಹೇಶ ಹೊಸಕೊಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಉಷಾ ಹೆಗಡೆ ಸ್ವಾಗತಿಸಿದರು. ವಿಠಲ ಬಾಳಂಬೀಡ ನಿರೂಪಿಸಿದರು. ಭರತರಾಜ ಹದಳಗಿ ವಂದಿಸಿದರು.