ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಐತಿಹಾಸಿಕ ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನೆಗೂ ಮುನ್ನ ಶುಕ್ರವಾರ ಪಟ್ಟಣದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಸಾಗರೋಪಾದಿಯಲ್ಲಿ ಸಹಸ್ರಾರು ಮಂದಿ ಹಿಂದೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾಕ್ಷಿಯಾಗುವ ಮೂಲಕ ಘತವೈಭವ ಮರುಕಳಿಸುವಂತೆ ಮಾಡಿದರು.ಶುಕ್ರವಾರ ಬೆಳಗ್ಗೆ ಶ್ರೀಕೋಟೆ ವಿದ್ಯಾಗಣಪತಿ ದೇವಸ್ಥಾನಕ್ಕೆ ಆಗಮಿಸಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಬಳಿಕ ಶ್ರೀಗಳು ಮೂಲ ವಿಗ್ರಹ ಹಾಗೂ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕ ಸುರೇಶ್‌ಗೌಡ ಅವರನ್ನು ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಮೆರವಣಿಗೆ ಆರಂಭವಾದ ನಂತರ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಗಮಿಸಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.ಜಾನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ:
ಚುಂಚಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಂಗಳವಾದ್ಯ, ಡಿ.ಜೆ.ಸೌಂಡ್, ಡೊಳ್ಳು ಕುಣಿತ, ತಮಟೆ ಮೇಳ, ಪೂಜಾ ಕುಣಿತ, ವೀರಗಾಸೆ ಕುಣಿತ, ಮಹಿಳೆಯರ ಪೂರ್ಣಕುಂಭ ಸಹಿತ ಕೋಲಾಟ, ಕೀಲು ಕುದುರೆ, ವೀರಭದ್ರ ವೇಷಧಾರಿಗಳು, ಪಟದ ಕುಣಿತ, ಬಜರಂಗಿ ವೇಷಧಾರಿ, ಹುಲಿವೇಷಧಾರಿ, ರಾಕ್ಷಸ ವೇಷಧಾರಿ ಸೇರಿದಂತೆ ಹತ್ತಾರು ಬಗೆಯ ಜಾನಪದ ಕಲಾತಂಡಗಳ ನೂರಾರು ಕಲಾವಿದರು ತಮ್ಮ ಕಲಾ ಕೌಶಲ್ಯವನ್ನು ಮೆರವಣಿಗೆ ಉದ್ದಕ್ಕೂ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.ಮೆರವಣಿಗೆ ಸಾಗಿದ ಎಲ್ಲಾ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಕಿಕ್ಕಿರುದು ಸೇರಿದ್ದ ಭಕ್ತಾದಿಗಳು ಮೆರವಣಿಗೆಯ ದೃಶ್ಯ ಹಾಗೂ ಜಾನಪದ ಕಲಾ ಪ್ರದರ್ಶನಗಳನ್ನು ಕಣ್ತುಂಬಿಕೊಂಡರು.
ಭಕ್ತರ ದಣಿವಾರಿಸಿದ ಸ್ಥಳೀಯರು:ಮೆರವಣಿಗೆ ಸಾಗಿದ ಪ್ರಮುಖ ಬೀದಿಗಳಲ್ಲಿ ಭಕ್ತಾದಿಗಳು ಅಲ್ಲಲ್ಲಿ ಸ್ಥಳೀಯರು ನೀರು, ಮಜ್ಜಿಗೆ, ಪಾನಕ, ಸಿಹಿ ಪದಾರ್ಥ, ಕಡ್ಲೆ ಹುಸ್ಲಿ ಮತ್ತು ತಂಪು ಪಾನೀಯ ವಿತರಿಸುವ ಮೂಲಕ ಬಿಸಿಲಿನ ಬೇಗೆಯಲ್ಲಿಯೂ ನೆರೆದಿದ್ದ ಸಹಸ್ರಾರು ಮಂದಿ ಭಕ್ತರ ದಣಿವಾರಿಸಿದರು.
ಕೇಸರಿಮಯವಾದ ನಾಗಮಂಗಲ:ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಿಗೆ ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಪಟ್ಟಣದ ಮಂಡ್ಯ ವೃತ್ತ, ಟಿ.ಮರಿಯಪ್ಪ ವೃತ್ತ, ಬಬ್ರುವಾಹನ ಸರ್ಕಲ್, ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೇಸರಿ ಬಾವುಟ ಬಂಟಿಂಗ್ಸ್‌ಗಳನ್ನು ಕಟ್ಟಿ ಇಡೀ ಪಟ್ಟಣವನ್ನು ಕೇಸರಿಮಯಗೊಳಿಸಲಾಗಿತ್ತು.
ಕುಣಿದು ಕುಪ್ಪಳಿಸಿದ ಯುವಕರು:ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಮಂದಿ ಯುವಕರು, ಭಕ್ತರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪಕ್ಷಾತೀತವಾಗಿ ಕೇಸರಿ ಶಾಲು ಧರಿಸಿ ಡಿಜೆ ಸೌಂಡ್ ಮತ್ತು ಕಲಾ ಪ್ರದರ್ಶನಕ್ಕೆ ಕುಣಿದು ಕುಪ್ಪಳಿಸಿದರು. ಯುವಕರ ಉತ್ಸಾಹ ಮುಗಿಲು ಮುಟ್ಟಿತು.
ಮೆರವಣಿಗೆ ಸಾಗಿ ಬಂದ ಹಾದಿ:ಕೋಟೆ ವಿದ್ಯಾಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ 72 ನೇ ವರ್ಷದ ಗಣೇಶ ಮೂರ್ತಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ್ದ ಟ್ರ್ಯಾಕ್ಟರ್‌ನಲ್ಲಿರಿಸಿ ಮೆರವಣಿಗೆ ಪ್ರಾರಂಭಿಸಲಾಯಿತು.
ಶ್ರೀಯವರ ಮೆರವಣಿಗೆ ಪಡುವಲಪಟ್ಟಣ ಸರ್ಕಲ್‌ನಿಂದ ಸಾಗಿ ಸೌಮ್ಯಕೇಶವ ದೇವಸ್ಥಾನದ ಮುಂಭಾಗದ ಕೆಎಸ್‌ಟಿ ರಸ್ತೆ ಮೂಲಕ ಟಿ.ಮರಿಯಪ್ಪ ವೃತ್ತಕ್ಕೆ ಸಾಗಿಬಂದು ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಎಸ್‌ಎಲ್‌ವಿ ನರ್ಸಿಂಗ್ ಹೋಂ ಬಳಿ ತಿರುವು ಪಡೆದು ಮಂಡ್ಯ ವೃತ್ತಕ್ಕೆ ಆಗಮಿಸಿತು.ಅಲ್ಲಿಂದ ಮುಂದುವರಿದು ಮೈಸೂರು ರಸ್ತೆಯ ಬಜಾಜ್ ಶೋ ರೂಂ ಬಳಿ ತಿರುವು ಪಡೆದು ದರ್ಗಾ ಮಂಭಾಗದ ಮೂಲಕ ಹುಲ್ಲೆಸೆಳೆ ಆಂಜನೇಯ ದೇವಸ್ಥಾನದ ರಸ್ತೆ, ಕುಂಬಾರ ಬೀದಿ, ವೀರಭದ್ರೇಶ್ವರ ದೇವಸ್ಥಾನದ ರಸ್ತೆ, ಪಟ್ಟಣದ ಬಡಗೂಡಮ್ಮ ವೃತ್ತಕ್ಕೆ ಆಗಮಿಸಿತು. ಅಲ್ಲಿಂದ ಮುಂದುವರಿದು ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಸಾಗಿಬಂದು ರಾತ್ರಿ ವೇಳೆಗೆ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಇತಿಹಾಸ ಪ್ರಸಿದ್ಧ ಹಂಪೆ ಅರಸನ ಕೊಳ ತಲುಪಿತು.