ರಾಜ್ಯ ಸರ್ಕಾರ ವಿಸರ್ಜಿಸಿ: ಚಲುವಾದಿ ನಾರಾಯಣಸ್ವಾಮಿ

KannadaprabhaNewsNetwork | Published : Aug 22, 2024 12:52 AM

ಸಾರಾಂಶ

ನನ್ನ ರಾಜಕೀಯದಲ್ಲಿ ಈ ವರೆಗೂ ಒಂದೇ ಒಂದು ಕಪ್ಪುಚುಕ್ಕೆಯಿಲ್ಲ ಎನ್ನುತ್ತಿರುವ ಮುಖ್ಯಮಂತ್ರಿಗಳ ಮಾತು ಹಾಸ್ಯಾಸ್ಪದ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಕಪ್ಪುಕಾಗೆ ಇದ್ದಂತೆ. ಎಂದಾದರೂ ಕಾಗೆಯಲ್ಲಿ ಕಪ್ಪುಚುಕ್ಕೆ ಹುಡುಕಲು ಸಾಧ್ಯವೇ.

ಹುಬ್ಬಳ್ಳಿ:

ದೇಶದ್ರೋಹದ ಹೇಳಿಕೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರವನ್ನು ವಿಸರ್ಜಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಗೆ ಶೀಘ್ರದಲ್ಲಿಯೇ ಬಿಜೆಪಿ ನಿಯೋಗ ಮನವಿ ಸಲ್ಲಿಸಲಿದೆ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದಲ್ಲಿ ಪಾಕಿಸ್ತಾನಪರ ಘೋಷಣೆ ಕೂಗುವ, ಭಾರತಕ್ಕೂ ಬಾಂಗ್ಲಾ ದುಸ್ಥಿತಿ ಬರುತ್ತದೆ ಎನ್ನುವ ಕಾಂಗ್ರೆಸ್‌ ಮುಖಂಡರು ನಿಜವಾದ ದೇಶದ್ರೋಹಿಗಳು ಎಂದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಭ್ರಷ್ಟಾಚಾರದ ಕೈವಾಡಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಮಾಧ್ಯಮಗಳೇ ಬಿತ್ತರಿಸಿವೆ. ಹಲವು ದಾಖಲೆಗಳನ್ನು ವೈಟ್ನರ್‌ ಹಾಕಿ ತಿದ್ದಿರುವುದು ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ಅವರೇ ಈಗೇನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.

ಸಿಎಂ ಕಪ್ಪುಕಾಗೆ ಇದ್ದಂತೆ:

ನನ್ನ ರಾಜಕೀಯದಲ್ಲಿ ಈ ವರೆಗೂ ಒಂದೇ ಒಂದು ಕಪ್ಪುಚುಕ್ಕೆಯಿಲ್ಲ ಎನ್ನುತ್ತಿರುವ ಮುಖ್ಯಮಂತ್ರಿಗಳ ಮಾತು ಹಾಸ್ಯಾಸ್ಪದ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಕಪ್ಪುಕಾಗೆ ಇದ್ದಂತೆ. ಎಂದಾದರೂ ಕಾಗೆಯಲ್ಲಿ ಕಪ್ಪುಚುಕ್ಕೆ ಹುಡುಕಲು ಸಾಧ್ಯವೇ ಎಂದು ವ್ಯಂಗ್ಯವಾಡಿದ ನಾರಾಯಣಸ್ವಾಮಿ, ರಾಜ್ಯಪಾಲರು ಬಿಜೆಪಿಯ ಏಜೆಂಟ್, ಬಿಜೆಪಿ ಅಧ್ಯಕ್ಷ ಎಂದೆಲ್ಲ ಕಾಂಗ್ರೆಸ್‌ ಸಚಿವರು, ಶಾಸಕರು, ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯಪಾಲರನ್ನು ತಮ್ಮ ಪಕ್ಷದ ಏಜೆಂಟ್ ಅಥವಾ ಅಧ್ಯಕ್ಷ ಎಂದೇ ಭಾವಿಸಿತ್ತೇ? ಈ ಕುರಿತು ಸ್ಪಷ್ಟಪಡಿಸಲಿ ಎಂದು ಕಿಡಿಕಾರಿದರು.

ದಿನೇಶ ಗುಂಡೂರಾವ್, ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಸಚಿವರು ಹಾಗೂ ಕಾಂಗ್ರೆಸ್‌ ಮುಖಂಡರು ರಾಜ್ಯಪಾಲರಿಗೆ ಏಕ ವಚನದಿಂದ ಕರೆಯುತ್ತಿದ್ದಾರೆ. ರಾಜ್ಯಪಾಲರ ಪ್ರತಿಕೃತಿ ದಹಿಸಿದ್ದಾರೆ. ನಾಲಾಯಕ್ ಎಂಬ ಪದ ಬಳಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜ್ಯಪಾಲರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ, ಈ ವರೆಗೂ ಎಫ್‌ಐಆ‌ರ್ ದಾಖಲಿಸಿಲ್ಲ. ಶೀಘ್ರ ಸಭಾಧ್ಯಕ್ಷ ಹಾಗೂ ಸಭಾಪತಿ ಭೇಟಿ ಮಾಡಿ, ರಾಜ್ಯಪಾಲರನ್ನು ನಿಂದಿಸಿರುವವರ ವಿರುದ್ಧ ಗೂಂಡಾ ಕಾಯ್ದೆ ಹಾಗೂ ಜಾತಿ ನಿಂದನೆ ಕಾಯ್ದೆ ದಾಖಲಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ರಾಜೀನಾಮೆ ನೀಡಲಿ:

ಹಿಂದುಳಿದ ನಾಯಕನೆಂಬ ಕಾರಣಕ್ಕೆ ಬಿಜೆಪಿ ತಮ್ಮನ್ನು ಟಾರ್ಗೇಟ್‌ ಮಾಡಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಹಿಂದುಳಿದ ನಾಯಕನೆಂಬುದು ನೆನಪಾಗಲಿಲ್ಲವೇ?. ಪ್ರಧಾನಿ ವಿರುದ್ಧ ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ವಿರುದ್ಧ ಯಾವುದೇ ಆರೋಪ ಇರದಿದ್ದರೂ ರಾಜೀನಾಮೆ ಕೇಳಿದ್ದರು. ಈಗ ಹಲವಾರು ಭ್ರಷ್ಟಾಚಾರದ ಆರೋಪ ಹೊತ್ತಿರುವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.

ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶ ಕೈ ಬಿಟ್ಟಿರುವ ಕಾಂಗ್ರೆಸ್‌ ಮುಖಂಡರು, ರಾಹುಲ್ ಗಾಂಧಿ ಆದರ್ಶ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಕಾಂಗ್ರೆಸ್‌ ಈ ಸ್ಥಿತಿಗೆ ತಲುಪಿರುವುದು ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ಕುರಿತಾಗಿ ದಾಖಲೆಗಳಿದ್ದರೆ ರಾಜ್ಯಪಾಲರು ತನಿಖೆಗೆ ಪ್ರಾಸಿಕ್ಯೂಷನ್ ನೀಡಬಹುದು. ಈ ಬಗ್ಗೆ ನಾನು ಹೆಚ್ಚು ವಿವರಣೆ ನೀಡಲು ಬಯಸುವುದಿಲ್ಲ ಎಂದರು.

ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಉಪಮೇಯರ್ ದುರ್ಗಮ್ಮ‌ ಬಿಜವಾಡ, ಮುಖಂಡರಾದ ಮಹೇಂದ್ರ ಕೌತಾಳ, ರವಿ ನಾಯಕ ಸೇರಿದಂತೆ ಹಲವರಿದ್ದರು.

Share this article