ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಂವಿಧಾನ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ರಾಷ್ಟ್ರಪತಿಗಳು ತಕ್ಷಣ ವಿಸರ್ಜಿಸಬೇಕು ಎಂದು ಶಾಸಕ ಸಿದ್ದು ಸವದಿ ಆಗ್ರಹಿಸಿದರು.ಬನಹಟ್ಟಿಯ ವೈಭವ ಚಿತ್ರಮಂದಿರದಿಂದ ಎಂ.ಎಂ.ಬಂಗ್ಲೆವರೆಗೆ ಬಿಜೆಪಿ ಕಾರ್ಯಕರ್ತರೊಡನೆ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಂಚರಿಸಿದರು. ನಂತರ ಎಂ.ಎಂ.ಬಂಗ್ಲೆ ಎದುರು ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಶಾಸಕ ಸವದಿ ಮಾತನಾಡಿ, 2 ವರ್ಷಗಳ ಕಾಲ ಭ್ರಷ್ಟಾಚಾರ, ಹಗರಣಗಳ ಸರಮಾಲೆಗಳನ್ನೇ ಸೃಷ್ಟಿಸಿ ಸಂವಿಧಾನದಡಿ ಕೆಲಸ ಮಾಡದೇ ಮಾಜಿ ಸಂಸದ, ಮಾಜಿ ಸಚಿವ, ವಿಪ ಸದಸ್ಯ ಸಿ.ಟಿ.ರವಿ ಅವರನ್ನು ಅಸಾಂವಿಧಾನಿಕ ಕ್ರಮದಡಿ ಬಂಧಿಸಿ ರಾತ್ರಿಯಿಡೀ ಆಹಾರ, ನೀರು ನೀಡದೇ ಮೂರು ಜಿಲ್ಲೆಗಳಲ್ಲಿ ಸುತ್ತಿಸಿ, ಕೊನೆಗೆ ಹೈಕೋರ್ಟ್ ಕಪಾಳಮೋಕ್ಷದ ಬಳಿಕ ಬಿಡುಗಡೆಗೊಳಿಸಿದೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಸರ್ಕಾರ ಕಳೆದೆರಡು ವರ್ಷಗಳಿಂದ ರಾಜ್ಯವನ್ನು ಹಗಲು ದರೋಡೆ ಮಾಡುತ್ತ, ಸಂವಿಧಾನದ ವಿಧಿಗಳನ್ನು ಕಾಲ ಕಸವಾಗಿಸಿಕೊಂಡು ಭ್ರಷ್ಟಾಚಾದಲ್ಲಿ ಮುಳುಗಿದೆ. ವಾಲ್ಮೀಕಿ, ಹಿಂದುಳಿದ ವರ್ಗಗಳ ಕಲ್ಯಾಣದ ಹಣಕಾಸು ಅವ್ಯವಹಾರ, ಮುಡಾ ಮೊದಲಾದ ನಿಗಮ ಮತ್ತು ಇಲಾಖೆಗಳಲ್ಲಿ ದಾಖಲೆಯ ಭ್ರಷ್ಟಾಚಾರ ಮಾಡಿ, ರಾಜ್ಯವನ್ನೇ ಲೂಟಿ ಮಾಡುತ್ತಿದೆ ಎಂದು ದೂರಿದರು. ಸಿಎಂ, ಡಿಸಿಎಂ, ಸಚಿವರ ನೇರ ಉಸ್ತುವಾರಿಯಲ್ಲಿ ಬಹುಸಂಖ್ಯಾತರನ್ನು ಗುರಿಯಾಗಿಸಿ ಒಡೆದು ಆಳುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸಲಾಗುತ್ತಿದೆ. ಡಿಸಿಎಂ ಶಿವಕುಮಾರ ಬೆಳಗಾವಿಯಿಂದ ಸಿ.ಟಿ.ರವಿ ಜೀವಂತ ಬಂದಿದ್ದೇ ಹೆಚ್ಚು ಎಂದಿರುವುದು ಬಿಜೆಪಿ ನಾಯಕನ ಹತ್ಯೆಗೆ ಸಂಚು ರೂಪಿಸಲಾಗಿತ್ತೆ ಎಂಬ ಅನುಮಾನ ಸೃಷ್ಟಿಸಿದೆ. ಡಾ.ಬಾಬಾಸಾಹೇಬರ ಸಂವಿಧಾನ ಕೈಯಲ್ಲಿಟ್ಟುಕೊಂಡು ನಾಟಕವಾಡುವ ಕಾಂಗ್ರೆಸ್ ನಾಯಕರು, ಡಾ.ಬಾಬಾಸಾಹೇಬರು ಬದುಕಿದ್ದಾಗ ಚುನಾವಣೆಯಲ್ಲಿ ಸೋಲುವಂತಾಗಲು ಮಾಡಿದ್ದ ಕುತಂತ್ರ, ಅವರು ಮರಣವಾದಾಗ ಅವರ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡದೇ ಶವ ಸಾಗಣೆಗೂ ಸಹಕರಿಸದೇ ಕಾಂಗ್ರೆಸ್ ಅವಮಾನಿಸಿತ್ತು ಎಂದು ದೂರಿದರು.ಭಾರತರತ್ನ ಪ್ರಶಸ್ತಿ ನೀಡಲೂ ಯೋಚಿಸಿರಲಿಲ್ಲ. ಇದೀಗ ಸಂವಿಧಾನ ವಿರೋಧಿ ನೀತಿಯಿಂದ ಪೊಲೀಸರನ್ನು ಜೀತದಾಳುಗಳಂತೆ ಬಳಸಿಕೊಂಡು ಜನಪ್ರತಿನಿಧಿಯನ್ನು ಬಂಧಿಸಿದ ಬಳಿಕ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಬಿಡುಗಡೆಗೊಳಿಸಿದೆ. ಈಗ ಡಾ.ಅಂಬೇಡ್ಕರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಸಂವಿಧಾನವನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರವನ್ನು ತಕ್ಷಣ ರಾಷ್ಟ್ರಪತಿಗಳು ವಜಾಗೊಳಿಸಬೇಕೆಂದು ಪುನರುಚ್ಚರಿಸಿದರು.ಪ್ರತಿಭಟನೆಯಲ್ಲಿ ತೇರದಾಳ ಮತಕ್ಷೇತ್ರದ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಗರಾಧ್ಯಕ್ಷೆ ವಿದ್ಯಾ ದಬಾಡಿ, ನಗರ ಮತ್ತು ಗ್ರಾಮೀಣ ಬಿಜೆಪಿ ಅಧ್ಯಕ್ಷ ಶ್ರೀಶೈಲ ಬೀಳಗಿ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಶಂಕರ ಬಟಕುರ್ಕಿ, ಶಿವಾನಂದ ಗಾಯಕವಾಡ, ಬಾಬಾಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಭುಜಬಲಿ ವೆಂಕಟಾಪುರ, ಪ್ರಭು ಪಾಲಭಾಂವಿ, ಮುರಗೇಶ ಮಿರ್ಜಿ, ಜಯಪ್ರಕಾಶ ಸೊಲ್ಲಾಪುರ, ಚಿದಾನಂದ ಹೊರಟ್ಟಿ, ಲಕ್ಕಪ್ಪ ಪಾಟೀಲ, ವೈಷ್ಣವಿ ಬಾಗೇವಾಡಿ, ಗೌರಿ ಮಿಳ್ಳಿ, ಸವಿತಾ ಕುಂಬಾರ, ಮಹಾದೇವ ಕೊಟ್ಯಾಳ, ಪ್ರಭು ನೇಸೂರ ಸೇರಿದಂತೆ ಪ್ರಮುಖರಿದ್ದರು.