ಆಹಾರ ಮತ್ತು ಉದ್ಯೋಗ ಭದ್ರತೆ ಯೋಜನೆಗಳ ವಿರೂಪ: ವೀರಸಂಗಯ್ಯ ಆಕ್ರೋಶ

KannadaprabhaNewsNetwork |  
Published : Apr 25, 2026, 02:00 AM IST
ಹಗರಿಬೊಮ್ಮನಹಳ್ಳಿ ಜಲಾಶಯದ ಅಂಗಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲಾಶಯದ ಹೂಳೆತ್ತುವ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಕಾರ್ಮಿಕರನ್ನು ಉದ್ದೇಶಿಸಿ ಶುಕ್ರವಾರ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿದರು. | Kannada Prabha

ಸಾರಾಂಶ

ದೇಶದ ಬಡ ಜನತೆಯ ಕಲ್ಯಾಣದ ಕುರಿತಂತೆ ಆಲೋಚನೆ ಮಾಡುವ ಮನಸ್ಸುಗಳೇ ಇಲ್ಲದಂತಾಗಿದೆ.

ಹಗರಿಬೊಮ್ಮನಹಳ್ಳಿ: ಬಡ ಜನರ ಕಲ್ಯಾಣ ಯೋಜನೆಗಳ ಜಾರಿಯಿಂದ ಅಧಿಕಾರ ಪಡೆಯುವ ಬದಲಾಗಿ ದೇವರು, ಧರ್ಮ ಎಂದು ಹೊರಟಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ೧೨ ವರ್ಷಗಳಿಂದ ಮನಮೋಹನ್ ಸಿಂಗ್ ಕಾಲದ ಆಹಾರ ಭದ್ರತೆ ಮತ್ತು ಉದ್ಯೋಗ ಭದ್ರತೆ ಯೋಜನೆಗಳನ್ನು ವಿರೂಪಗೊಳಿಸಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಾಲವಿ ಗ್ರಾಮದ ಬಳಿ ಇರುವ ಹಗರಿಬೊಮ್ಮನಹಳ್ಳಿ ಜಲಾಶಯದ ಅಂಗಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲಾಶಯದ ಹೂಳೆತ್ತುವ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಕಾರ್ಮಿಕರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ದೇಶದ ಬಡ ಜನತೆಯ ಕಲ್ಯಾಣದ ಕುರಿತಂತೆ ಆಲೋಚನೆ ಮಾಡುವ ಮನಸ್ಸುಗಳೇ ಇಲ್ಲದಂತಾಗಿದೆ. ಬಿಜೆಪಿ ವಿರುದ್ಧ ಮತ ಚಲಾಯಿಸುವ ಈ ದೇಶದ ಜನರನ್ನು ದೇಶದ ಜನರೇ ಅಲ್ಲ ಎನ್ನುವ ವಾತಾವರಣ ಉಂಟಾಗಿದೆ. ಅವರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಪಿತೂರಿ ನಡೆದಿದೆ. ಕರ್ನಾಟಕದಲ್ಲಿ ೨ ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿ ಗ್ರಾಮ ಗ್ರಾಮಗಳಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು ರೈತ ಸಂಘದಡಿ ಸಂಘಟಿತರಾಗುವ ತುರ್ತು ಇದೆ. ನಿಮ್ಮ ಜಾತಿ, ಧರ್ಮ ಮತ್ತು ಪಕ್ಷ ಬದಿಗೊತ್ತಿ ಸಂಘಟಿತರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡದಿದ್ದರೆ ಉಳಿಗಾಲವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ನಂತರ ಜಲಾಶಯದ ಬಾಕಿ ಉಳಿದಿದ್ದ ಎರಡು ಕ್ರಸ್ಟಗೇಟ್ ಅಳವಡಿಸುವ ಪೂರ್ಣಗೊಂಡಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸರಿಯಾದ ಸಮಯದಲ್ಲಿ ಗೇಟ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಿರುವುದು ಸ್ವಾಗತಾರ್ಹ. ಆದರೆ, ತುಂಗಭದ್ರಾ ನದಿಯಿಂದ ಜಲಾಶಯಕ್ಕೆ ನೀರು ಪೂರೈಸುವ ಜಾಕ್‌ವೆಲ್, ಜಲಾಶಯದ ಎರಡೂ ಬದಿಯ ಕಾಲುವೆಗಳ ಸುಸ್ಥಿತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ರೈತರ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್ ತಂಬ್ರಹಳ್ಳಿ, ತಾಲೂಕು ಘಟಕದ ಅಧ್ಯಕ್ಷ ಬಸವನಗೌಡ, ಪ್ರಧಾನ ಕಾರ್ಯದರ್ಶಿ ಅಕ್ಕಿ ನಾಗರಾಜ್, ಮುಖಂಡ ಜಿ.ಮಂಜುನಾಥ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನಸಿ ದೇವರಾಜ್, ಕೋಗಳಿ ಮಲ್ಲೇಶ್ ಹಾಗೂ ಮಾಲವಿ ಚನ್ನಬಸಪ್ಪ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಬಸವ ಜಯಂತಿ ಆಚರಣೆ!