ಕನ್ನಡಪ್ರಭ ವಾರ್ತೆ ಹನೂರು
ರಾಜಮ್ಮ ಮೃತ ದುರ್ದೈವಿ. ಅಧಿಕಾರಿಗಳ ದೌರ್ಜನ್ಯದಿಂದ ರಾಜಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ವಿವಾದಕ್ಕೀಡಾದ ಜಮೀನಿನಲ್ಲಿಯೇ ಮೃತ ದೇಹ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಕೆಂಪಯ್ಯನಹಟ್ಟಿ ಗ್ರಾಮದ ನಿವಾಸಿಗಳು ಡಾ. ಬಿ .ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿಕೊಡುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಡಳಿತ ದೊಡ್ಡಲತ್ತೂರು ಗ್ರಾಮದ ಸರ್ವೆ ನಂಬರ್ 80ರಲ್ಲಿ ಇರುವ 3.96 ಸೆಂಟ್ ಜಮೀನಿನ ಪೈಕಿ 20 ಸೆಂಟ್ ನಿವೇಶನವನ್ನು ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಿತ್ತು. ಈ ಜಾಗದಲ್ಲಿ ಕೆಲವು ಗ್ರಾಮಸ್ಥರು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದರು. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಗೆ ಅಕ್ರಮ ತೆರವು ಮಾಡಿಕೊಳ್ಳುವಂತೆ ದೂರು ಸಲ್ಲಿಕೆಯಾಗಿತ್ತು.
ಆ. 6 ರಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಅಧಿಕಾರಿಗಳ ಸಮ್ಮುಖದಲ್ಲಿ ನಿವೇಶನ ಸರ್ವೇ ಮಾಡಲು ಮುಂದಾಗಿದ್ದರು. ಆಗ ರಾಜಮ್ಮ ಪತಿ ಸೋಮಣ್ಣ ಮರ ಹೇರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.ಗ್ರಾಮಸ್ಥರು ಮಾತನಾಡಿ, ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆಯನ್ನು ನೀಡಿದ್ದಾರೆ. ಆದರೆ ಅವರು ಬೇರೆಯವರ ಜಮೀನು ಕಿತ್ತು ಇನ್ನೊಬ್ಬರಿಗೆ ಕೊಡಿ ಎಂದಿಲ್ಲ. ಅಧಿಕಾರಿಗಳು ಬೇಜವಾಬ್ದಾರಿತನದಿಂದ ಒಬ್ಬರು ಮೃತಪಟ್ಟಿದ್ದಾರೆ ಎಂದರು.ರಾಜಮ್ಮ ಮನೆಗೆ ಶಾಸಕ ಎಂ. ಆರ್. ಮಂಜುನಾಥ್ ಭೇಟಿ ನೀಡಿ ಮಾತನಾಡಿ, ರಾಜಮ್ಮ ಪತಿ ಸೋಮಣ್ಣ ಮರ ಹೇರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದೆ. ಸಮುದಾಯದ, ಅಧಿಕಾರಿಗಳನ್ನು ಮನವೊಲಿಸುತ್ತೇನೆ. ಈ ಜಮೀನನ್ನು ಇವರಿಗೆ ಬಿಟ್ಟುಕೊಟ್ಟರೆ ಆತ್ಮಕ್ಕೂ ಶಾಂತಿ ಸಿಗಲಿದೆ. ಬೇರೆ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಕ್ರಮ ವಹಿಸಲಾಗುವುದು. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ರಾಜಮ್ಮ ಸಂಬಂಧಿಕರು ದೂರು ನೀಡಲು ಹೋದರೆ ದೂರು ತೆಗೆದುಕೊಳ್ಳುತ್ತಿಲ್ಲ ಎನ್ನಲಾಗಿತ್ತು. ದೂರು ದಾಖಲು ಮಾಡಿಕೊಳ್ಳಿ ವಿಚಾರಣೆ ನಡೆದು ಸತ್ಯಾಂಶ ಹೊರಬರಲಿ ಎಂದು ತಿಳಿಸಿದ್ದೇನೆ.ದೊಡ್ಡಲತ್ತೂರು ಗ್ರಾಮದ ಸರ್ವೇ ನಂಬರ್ 80ರಲ್ಲಿ 3.96 ಸೆಂಟ್ ಜಮೀನಿನ ಪೈಕಿ 20 ಸೆಂಟ್ ಜಮೀನನ್ನು ಕೆಂಪಯ್ಯನ ಹಟ್ಟಿ ಗ್ರಾಮಸ್ಥರಿಗೆ ಅಂಬೇಡ್ಕರ್ ಭವನ ನಿರ್ಮಾಣದ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ. ಆದರೆ 3 ಎಕರೆಗೂ ಹೆಚ್ಚು ಸರ್ಕಾರಿ ಆಸ್ತಿ ಇದ್ದರೂ ಕೇವಲ 20 ಸೆಂಟ್ ಒತ್ತುವರಿ ಮಾಡಿಕೊಂಡಿದ್ದ ರಾಜಮ್ಮ ಜಮೀನನ್ನೇ ಬಲವಂತವಾಗಿ ಏಕೆ ತೆರವುಗೊಳಿಸಿದರು ಎಂಬುವುದೇ ಯಕ್ಷಪ್ರಶ್ನೆಯಾಗಿದೆ.
ದೊಡ್ಡಲತ್ತೂರು ಗ್ರಾಮದ ಸರ್ವೇ ನಂಬರ್ 81/1ರಲ್ಲಿ 2.7 ಸೆಂಟ್ ಜಮೀನಿದ್ದು, ಇದು ಒಗ್ಗಯ್ಯ ಹೆಸರಿನಲ್ಲಿದೆ. ಇವರು ಅವರ ಖಾಸ ಅಣ್ಣನಾಗಿದ್ದು, ಇವರ ಹೆಸರಿನಲ್ಲಿರುವ ಆಸ್ತಿಯಲ್ಲಿ ನಾವೇ ಅನುಭೋಗದಲ್ಲಿದ್ದೇವೆ. ಆದರೆ 15 ದಿನಗಳ ಹಿಂದೆ ಕೆಂಪಯ್ಯನಹಟ್ಟಿಯ ಗುರುದೇವ, ಸಹಚರರು 20 ಸೆಂಟ್ ಜಮೀನು ಜಾಗ ಅಕ್ರಮ ಮಾಡಿಕೊಂಡು ನಾಮಫಲಕ ಹಾಕಿದ್ದಾರೆ. ಜಮೀನುನ್ನು ಸಮುದಾಯ ಭವನಕ್ಕೆ ಸೇರಿದ ಆಸ್ತಿ ಎಂದು ದಾಖಲೆ ಸೃಷ್ಟಿಸಿದ್ದಾರೆ. ರಾಜಮ್ಮ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಕರ್ತರಾದ ಗುರುದೇವ, ಗ್ರಾಮ ಲೆಕ್ಕಾಧಿಕಾರಿ ಮಹದೇವ ಪ್ರಸಾದ್, ಕಂದಾಯ ನಿರೀಕ್ಷಕ ಶಿವಕುಮಾರ್, ನಿರ್ಗಮಿತ ತಹಸೀಲ್ದಾರ್ ಗುರುಪ್ರಸಾದ್ ವಿರುದ್ಧ ಸೋಮಣ್ಣ ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ .ವಿವಾದಿತ ಜಮೀನಿನಲ್ಲಿ ಅಳವಡಿಸಿದ ಅಂಬೇಡ್ಕರ್ ನಾಮಫಲಕ, ತಂತಿ ಬೇಲಿ ತೆರವುಗೊಳಿಸಿದರೆ ಮಾತ್ರ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು, ಸಂಬಂಧಿಕರು ಪಟ್ಟು ಹಿಡಿದಿದ್ದಾರೆ. ಇನ್ಸ್‌ಪೆಕ್ಟರ್ ಚಿಕ್ಕರಾಜ ಶೆಟ್ಟಿ, ಸಿಬ್ಬಂದಿ ಗ್ರಾಮದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಉಳ್ಳವರು ಸರ್ಕಾರದ ಎಕರೆಗಟ್ಟಲೆ ಜಮೀನನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಪರವಾಗಿ ಅಧಿಕಾರಿ ಇದ್ದಾರೆ. ವ್ಯವಸಾಯ ಮಾಡಿಕೊಂಡು ಬಂದಿರುವ ಜಮೀನನ್ನು ಅಧಿಕಾರಿಗಳು ಸ್ಧಳ ಮಹಜರ್ ನಡೆಸದೆ ಸಮುದಾಯ ಭವನಕ್ಕೆ ಮಂಜೂರು ಮಾಡಿಕೊಟ್ಟಿದ್ದಾರೆ. ರಾಜಮ್ಮಗೆ 4 ಹೆಣ್ಣು ಮಕ್ಕಳಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಒಂದು ಕುಟುಂಬವನ್ನು ಇಂತಹ ಪರಿಸ್ಥಿತಿಗೆ ದೂಡಿರುವುದು ಎಷ್ಟರ ಮಟ್ಟಿಗೆ ಸರಿ. ಇವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ.ಶಂಕರಪ್ಪ, ದೊಡ್ಡಲತ್ತೂರು ಗ್ರಾಮದ ನಿವಾಸಿ.