ರೈತರಿಗೆ ಸಮರ್ಪಕ ಬೀಜ ಗೊಬ್ಬರ ವಿತರಿಸಿ

KannadaprabhaNewsNetwork |  
Published : Jun 07, 2026, 02:30 AM IST
೦೫ ವೈಎಲ್‌ಬಿ ೦೧ಯಲಬುರ್ಗಾದ ತಾಪಂ ಸಭಾಂಗಣದಲ್ಲಿ ಯಲಬುರ್ಗಾ-ಕುಕನೂರು ತಾಪಂ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಕ್ಷೇತ್ರದ ನಾಲ್ಕು ಹೋಬಳಿ ರೈತರಿಗೆ ಮುಂಗಾರು ಬಿತ್ತನೆಗೆ ಅವಶ್ಯ ಬೀಜ ದಾಸ್ತಾನು ಮಾಡಲಾಗಿದೆ. ಈಗಾಗಲೇ ವಿತರಣೆ ಕಾರ್ಯ ಆರಂಭವಾಗಿದೆ

ಯಲಬುರ್ಗಾ: ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ಬಿತ್ತನೆ ಬೀಜ, ಗೊಬ್ಬರ ವಿತರಿಸಬೇಕು ಎಂದು ಕೃಷಿ ಅಧಿಕಾರಿಗೆ ತಾಪಂ ಆಡಳಿತಾಧಿಕಾರಿ ಟಿ. ಕೃಷ್ಣಮೂರ್ತಿ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಯಲಬುರ್ಗಾ-ಕುಕನೂರು ತಾಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಂತ್ರಿಕ ಕೃಷಿ ಅಧಿಕಾರಿ ಮಾರುತಿ ಮಾತನಾಡಿ, ಕ್ಷೇತ್ರದ ನಾಲ್ಕು ಹೋಬಳಿ ರೈತರಿಗೆ ಮುಂಗಾರು ಬಿತ್ತನೆಗೆ ಅವಶ್ಯ ಬೀಜ ದಾಸ್ತಾನು ಮಾಡಲಾಗಿದೆ. ಈಗಾಗಲೇ ವಿತರಣೆ ಕಾರ್ಯ ಆರಂಭವಾಗಿದೆ. ಒಟ್ಟು ೧.೨೧ ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ ೧೮ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಯೂರಿಯಾ ಮತ್ತು ಡಿಎಪಿ ಪರ್ಯಾಯವಾಗಿ ನ್ಯಾನೊ ಹಾಗೂ ಸಂಯುಕ್ತ ಗೊಬ್ಬರ ಉಪಯೋಗಿಸುವಂತೆ ರೈತರಿಗೆ ಇಲಾಖೆಯಿಂದ ಸೂಚಿಸಲಾಗಿದೆ ಎಂದು ಉತ್ತರಿಸಿದರು.

ಮಳೆಗಾಲ ಹಿನ್ನೆಲೆಯಲ್ಲಿ ಜನರಲ್ಲಿ ಆರೋಗ್ಯದ ಕಾಳಜಿ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಸಾಂಕ್ರಾಮಿಕ ರೋಗಗಳ ಕುರಿತು ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು. ಡೆಂಘೀ, ಚಿಕನ್ ಗುನ್ಯಾ,ಮಲೇರಿಯಾ ಹರಡದಂತೆ ತಡೆಯಲು ಕೆಲಸ ಮಾಡಬೇಕು ಎಂದರು.

ಬಳಿಕ ಆರೋಗ್ಯ ಇಲಾಖೆ ಅಧಿಕಾರಿ ಶಂಕ್ರಯ್ಯ ಮಾತನಾಡಿ, ಡೆಂಘೀ ಚಿಕುನ್‌ ಗುನ್ಯ ಪ್ರಕರಣ ಕೆಲ ಕಡೆ ದಾಖಲಾಗಿದ್ದು, ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಉತ್ತರಿಸಿದರು.

ಬಿಇಒ ಅಶೋಕ ಗೌಡರ ಮಾತನಾಡಿ, ಪ್ರಸ್ತುತ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಆನ್‌ಲೈನ್ ಹಾಜರಾತಿ ಇಲಾಖೆ ಕಡ್ಡಾಯಗೊಳಿಸಿದ್ದರಿಂದ ಪ್ರತಿದಿನ ಶೇ. ೮೦ರಷ್ಟು ಹಾಜರಾತಿ ದಾಖಲಾಗುತ್ತಿದೆ. ಸರ್ಕಾರದಿಂದ ದ್ವಿಭಾಷಾ ನೀತಿ ಜಾರಿಗೆ ಬಂದಿದ್ದರಿಂದ ನಲಿಕಲಿ ಕೈಬಿಡಲಾಗಿದೆ. ೧ರಿಂದ ೫ನೇ ತರಗತಿ ವರೆಗೆ ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುವುದು. ಒಟ್ಟು ೩೨ ಸಾವಿರ ವಿದ್ಯಾರ್ಥಿಗಳು ದಾಖಲೀಕರಣವಾಗಿದ್ದು, ಇನ್ನೂ ಐದಾರು ಸಾವಿರ ಆಗುವ ನಿರೀಕ್ಷೆ ಇದೆ. ೧೧ ಕೆಪಿಎಸ್ ಶಾಲೆ ತೆರೆಯಲಾಗಿದ್ದು, ಎಲ್‌ಕೆಜಿಯಿಂದ ಪಿಯುಸಿ ವರೆಗೂ ಶಿಕ್ಷಣ ದೊರೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗಿದೆ.‌ ಶೇ.೮೦ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಪೂರೈಕೆಯಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಸಿಡಿಪಿಒ ಬೆಟದೇಶ ಮಾಳೆಕೊಪ್ಪ ಮಾತನಾಡಿ, ಶಿಶು ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ವಿತರಿಸಲಾಗುತ್ತಿದೆ. ಅವಳಿ ತಾಲೂಕಿನಲ್ಲಿ ೨೦ ಅಂಗನವಾಡಿ ಕೇಂದ್ರಗಳ ಪೈಕಿ ೧೮ ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ೧೨ ಕೇಂದ್ರಗಳ ಪೈಕಿ ೬ ಪೂರ್ಣಗೊಂಡಿವೆ. ಇನ್ನುಳಿದ ಕೇಂದ್ರಗಳ ಕೆಲಸ ಪ್ರಾರಂಭಿಸಬೇಕಿದೆ. ಇನ್ನೂ ಕೆಲವೆಡೆ ನಿವೇಶನಗಳ ಸಮಸ್ಯೆ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಯಲಬುರ್ಗಾ ತಾಪಂ ಇಒ ನೀಲಗಂಗಾ ಬಬಲಾದ, ಕುಕನೂರು ತಾಪಂ ಇಒ ಸಂತೋಷ ಬಿರಾದಾರ ಮಾತನಾಡಿ, ವಿವಿಧ ಇಲಾಖೆ ಅಧಿಕಾರಿಗಳು ತಾಪಂಗೆ ಕಾಮಗಾರಿಗಳ ಕ್ರಿಯಾಯೋಜನೆ ಸಕಾಲಕ್ಕೆ ಸಲ್ಲಿಸಬೇಕು. ಕುಡಿಯುವ ನೀರಿನ ಅಭಾವ ಆಗದಂತೆ ಗ್ರಾಪಂ ಹಾಗೂ ಆರ್‌ಡಬ್ಲುಎಸ್ ಇಲಾಖೆ ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು.

ಈ ಸಂದರ್ಭ ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್, ಫಕೀರಪ್ಪ ಕಟ್ಟಿಮನಿ, ಅಧಿಕಾರಿಗಳಾದ ಬಿ. ಮಲ್ಲಿಕಾರ್ಜುನ, ಶಿವಶಂಕರ ಕರಡಕಲ್, ಲಿಂಗನಗೌಡ ಪಾಟೀಲ್, ರಾಜಶೇಖರ ಮಳಿಮಠ, ನಾಜಿಯಾ, ಪ್ರಕಾಶ ಚೂರಿ, ಮಹಾದೇವಪ್ಪ ಪತ್ತಾರ, ಮಹ್ಮದ್ ಖಲೀಮುದ್ದೀನ್ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30ರಿಂದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ
ಏಕರೂಪ ಬೀಜ ದರ ನಿಗದಿಗೆ ಒತ್ತಾಯ