ವಿದ್ಯಾರ್ಥಿಗಳಿಗೆ ಉಚಿತ ಪಾಸ್‌: ಶೇ. 25ರ ಶುಲ್ಕ ಯಾರ ಹೆಗಲಿಗೆ?

KannadaprabhaNewsNetwork |  
Published : Jun 07, 2026, 02:30 AM IST
Bus

ಸಾರಾಂಶ

ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌ ಉಚಿತವೆಂದು ಸರ್ಕಾರ ಘೋಷಿಸಿದ್ದು, ವಿದ್ಯಾರ್ಥಿಗಳ ಶುಲ್ಕ, ಸಾರಿಗೆ ಸಂಸ್ಥೆಯ ಪಾಲನ್ನು ಸರ್ಕಾರ ಭರಿಸುತ್ತದೆಯೇ ಎಂಬ ಜಿಜ್ಞಾಸೆ ಮೂಡಿದೆ.ಇಂತಹ ಪ್ರಶ್ನೆ ಇದೀಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಲ್ಲಿ ಉಂಟಾಗಿದೆ

ಶಿವಾನಂದ ಗೊಂಬಿ

ಹುಬ್ಬಳ್ಳಿ:  ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌ ಉಚಿತವೆಂದು ಸರ್ಕಾರ ಘೋಷಿಸಿದ್ದು, ವಿದ್ಯಾರ್ಥಿಗಳ ಶುಲ್ಕ, ಸಾರಿಗೆ ಸಂಸ್ಥೆಯ ಪಾಲನ್ನು ಸರ್ಕಾರ ಭರಿಸುತ್ತದೆಯೇ ಎಂಬ ಜಿಜ್ಞಾಸೆ ಮೂಡಿದೆ.

ಇಂತಹ ಪ್ರಶ್ನೆ ಇದೀಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಲ್ಲಿ ಉಂಟಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಪ್ರಯಾಣಿಸಿದ ಟಿಕೆಟ್‌ ಮೊತ್ತವೇ ಇನ್ನೂ ₹ 1000 ಕೋಟಿ ಬಾಕಿ ಇದೆ. ಇದೀಗ ವಿದ್ಯಾರ್ಥಿಗಳು ಪಡೆಯುತ್ತಿದ್ದ ರಿಯಾಯಿತಿ ಪಾಸ್‌ನ್ನು ಉಚಿತವೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದಾರೆ. ಇದರ ಹೊರೆ ಎಲ್ಲಿ ಸಂಸ್ಥೆಯ ಮೇಲೆ ಬೀಳುತ್ತದೆಯೋ? ಅಥವಾ ಪೂರ್ಣವಾಗಿ ಏಕಕಾಲಕ್ಕೆ ನೀಡುತ್ತದೆಯೋ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ವಿದ್ಯಾರ್ಥಿನಿಯರು ಶಕ್ತಿ ಯೋಜನೆಯಡಿ ಪ್ರಯಾಣಿಸುತ್ತಿದ್ದು, ಇವರಿಗೆ ಉಚಿತ ಬಸ್‌ಪಾಸ್‌ ಕೊಡುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ ನೀಡಲಾಗುತ್ತಿತ್ತು. ಇದರಲ್ಲಿ ಶೇ .25ರಷ್ಟು ವಿದ್ಯಾರ್ಥಿಗಳು ಪಾವತಿಸಿದರೆ ಉಳಿದ ಶೇ.75ರಷ್ಟರಲ್ಲಿ ರಾಜ್ಯ ಸರ್ಕಾರ ಶೇ.50, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶೇ.25ರಷ್ಟು ಹಣ ಭರಿಸುತ್ತಿತ್ತು.

2.23 ಲಕ್ಷ ವಿದ್ಯಾರ್ಥಿಗಳು:

ವಾಯವ್ಯ ಕರ್ನಾಟಕ ರಸ್ತೆಯ 6 ಜಿಲ್ಲೆಗಳ 9 ವಿಭಾಗಗಳಲ್ಲಿ ಬರೋಬ್ಬರಿ ಕಳೆದ ವರ್ಷ 2.23 ಲಕ್ಷ ವಿದ್ಯಾರ್ಥಿಗಳು (1.83 ಲಕ್ಷ ಸಾಮಾನ್ಯ, 40 ಸಾವಿರ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು) ರಿಯಾಯಿತಿ ದರದ ಬಸ್‌ಪಾಸ್‌ ಪಡೆದಿದ್ದು ಇದರ ಮೊತ್ತ ಬರೋಬ್ಬರಿ ₹ 343.28 ಕೋಟಿ ಆಗಿದೆ. ಇದರಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ₹ 142 ಕೋಟಿಗೂ ಅಧಿಕ ನೀಡಿದೆ.

ಇದೀಗ ಸರ್ಕಾರ ತನ್ನ ಪಾಲಿನ ಶೇ.50ರ ಜತೆಗೆ ವಿದ್ಯಾರ್ಥಿಗಳ ಪಾಲಿನ ಶೇ.25ರಷ್ಟು ಹಣವನ್ನು ಮಾತ್ರ ಭರಿಸುತ್ತದೆಯೋ ಅಥವಾ ಸಂಸ್ಥೆಯ ಪಾಲಿನ ಶೇ. 25ನ್ನು ಭರಿಸುತ್ತದೆಯೋ ಎಂಬುದು ತಿಳಿಯಬೇಕಿದೆ. ಆದರೆ, ಸಂಸ್ಥೆಯ ಬೇಡಿಕೆ ಮಾತ್ರ ಬಸ್‌ ಪಾಸ್‌ಗೆ ಖರ್ಚಾಗುವ ಎಲ್ಲ ವೆಚ್ಚವನ್ನೂ ಸರ್ಕಾರವೇ ಭರಿಸಬೇಕು. ಜತೆಗೆ ಶಕ್ತಿ ಯೋಜನೆಯಂತೆ ಬಾಕಿ ಉಳಿಸಿಕೊಳ್ಳದೆ ಏಕಕಾಲಕ್ಕೆ ಸಂದಾಯ ಮಾಡಬೇಕೆಂಬುದು ನೌಕರರ ವರ್ಗ ಆಶಯ.ರಿಯಾಯಿತಿ ದರದ ವಿದ್ಯಾರ್ಥಿಗಳ ಬಸ್‌ಪಾಸ್‌ ಹಣದಲ್ಲಿ ಶೇ.50ರಷ್ಟು ಸರ್ಕಾರ, ಶೇ. 25ರಷ್ಟು ಸಂಸ್ಥೆ ಹಾಗೂ ಶೇ. 25ರಷ್ಟು ವಿದ್ಯಾರ್ಥಿಗಳು ಭರಿಸುತ್ತಾರೆ. ಉಚಿತ ಪಾಸ್‌ ಕುರಿತಂತೆ ಸರ್ಕಾರದಿಂದ ಈ ವರೆಗೂ ಯಾವುದೇ ಆದೇಶ ಬಂದಿಲ್ಲ.

ಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೋದಿ ಭೇಟಿ ವೇಳೆ ಜಿಲೆಟಿನ್ ಕಡ್ಡಿ ಪತ್ತೆ: ಆರೋಪಿಗೆ ಮಂಪರು ಪರೀಕ್ಷೆ
ಅನೈತಿಕತೆಗೆ ಅಡ್ಡಿಯಾದ ಮಗಳ ಕೊಂದ ತಾಯಿ