ಹೊಸಪೇಟೆ: ಪರಿಸರ ಸಂರಕ್ಷಣೆ ಎಂದರೆ ಕೇವಲ ಸಸಿ ನೆಡುವುದಲ್ಲ, ಅದೊಂದು ಜೀವನಶೈಲಿ. ಇಂದು ಉತ್ತಮ ಪರಿಸರ ಉಳಿಸಿದರೆ ಮಾತ್ರ ಆರೋಗ್ಯಕರ ಸುಸ್ಥಿರ ಸಮಾಜ ಕಟ್ಟಲು ಸಾಧ್ಯ ಎಂದು ಬಲ್ಡೋಟ ಸಮೂಹದ ಸಮಾಜಸೇವಾ ವಿಭಾಗದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ಎಚ್.ಕೆ. ರಮೇಶ್ ಅಭಿಪ್ರಾಯಪಟ್ಟರು.
ಬಲ್ಡೋಟ ಸಂಸ್ಥೆಯು ಕಳೆದ ಮೂರು ವರ್ಷಗಳಲ್ಲಿ 30 ಸಾವಿರ ಗಿಡ ನೆಟ್ಟಿದ್ದು, ಅದರಂತೆ ಈವರೆಗೆ ಸುಮಾರು 20 ಲಕ್ಷದ 50 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದ್ದೇವೆ. ಇದರಂತೆ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನೀಡಲು ಸಾಧ್ಯ ಎಂದು ಅವರು ಹೇಳಿದರು.
ಸ್ಥಳೀಯ ಪರಿಸರವಾದಿ ಪ್ರಭಾಕರ್ ಮಾತನಾಡಿ, ಬಲ್ಡೋಟ ಸಮೂಹವು ಹೊಸಪೇಟೆ ನಗರವನ್ನು ಹಸಿರೀಕರಣಗೊಳಿಸುವಲ್ಲಿ ವಹಿಸುತ್ತಿರುವ ಪಾತ್ರ ಶ್ಲಾಘನೀಯ. ಸಂಸ್ಥೆ ನೆಟ್ಟ ಸಸಿಗಳು ಇಂದು ನಗರದ ಪಾಲಿಗೆ ದಟ್ಟ ಅರಣ್ಯದಂತೆ ರಕ್ಷಣೆ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಬದಲಾವಣೆಯ ರೂವಾರಿಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಸಿಯನ್ನು ದತ್ತು ಪಡೆದು, ಅದು ಮರವಾಗಿ ಬೆಳೆಯುವವರೆಗೆ ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿ, ನಗರಸಭೆ ಸದಸ್ಯ ಜಿ.ಎಸ್. ಹನುಮಂತಪ್ಪ, ಬಲ್ಡೋಟ ಸಮೂಹದ ವೇಣು ಮಡಿಚರ್ಲಾ, ನರೇಂದ್ರ, ಸಂಜನಾ ಪಾಠಕ್, ಅನ್ನಪೂರ್ಣ ಸದಾಶಿವ, ರೆಡ್ ಕ್ರಾಸ್ ಪದಾಧಿಕಾರಿಗಳು, ಎಂ.ಎಸ್.ಪಿ.ಎಲ್ ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.