ಹಾನಿಯಾದ ಮನೆಗಳಿಗೆ ತಕ್ಷಣ ಪರಿಹಾರ ವಿತರಿಸಿ: ಸಚಿವೆ ಹೆಬ್ಬಾಳಕರ

KannadaprabhaNewsNetwork |  
Published : Jul 30, 2024, 12:33 AM IST
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸೋಮವಾರ ಖಾನಾಪೂರ ತಾಲೂಕಿನಲ್ಲಿ ಮುಳುಗಡೆಯಾಗಿರುವ ಸೇತುವೆ ವೀಕ್ಷಿಸಿ, ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಖಾನಾಪುರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಖಾನಾಪುರ ತಾಲೂಕಿನಲ್ಲಿ ಮುಳುಗಡೆಯಾಗಿರುವ ಸೇತುವೆ ವೀಕ್ಷಿಸಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಖಾನಾಪುರ-ಗೋವಾ ಮಾರ್ಗದ ಮಲಪ್ರಭಾ ಸೇತುವೆ, ರುಮೇವಾಡಿ ಸೇತುವೆ ವೀಕ್ಷಿಸಿ, ಗಾಡಿಕೊಪ್ಪ ಗ್ರಾಮದ ಜನರ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ನಂತರ ಹಿರೇಹಟ್ಟಿಹೊಳಿ ಗ್ರಾಮಕ್ಕೆ ಭೇಟಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಮಳೆಯಿಂದ ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ನೀಡುವುದರ ಜೊತೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸತತ ಮಳೆಯಿಂದಾಗಿ ಹಿರೇಹಟ್ಟಿಹೊಳಿ ಗ್ರಾಮದ ಅಕ್ಕವ್ವ ಕಲ್ಲಪ್ಪ ಸನದಿ ವೃದ್ಧೆಯ ಮನೆ ಸಂಪೂರ್ಣ ಹಾನಿಯಾಗಿ ಸುಮಾರು ದಿನಗಳು ಕಳೆದಿವೆ. ಆದರೆ ಯಾವೊಬ್ಬ ಅಧಿಕಾರಿಯು ಇತ್ತ ಗಮನಹರಿಸಿಲ್ಲ. ಅಧಿಕಾರಿಗಳು ಈ ರೀತಿಯ ಬೇಜವಾಬ್ದಾರಿ ತೋರಬಾರದು. ವೃದ್ಧ ಮಹಿಳೆಗೆ ಕೂಡಲೇ ಮನೆ ಮಂಜೂರು ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತನ ಬಿಡಬೇಕು. ಮನೆ ಮಂಜೂರಾತಿಗೆ ವಿಳಂಬ ಮಾಡಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ವೃದ್ಧ ಮಹಿಳೆಗೆ ಸ್ಥಳದಲ್ಲೇ ಹಣ ಸಹಾಯ ಮಾಡಿ, ಕೂಡಲೇ ಮನೆ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಕುಕಡೊಳ್ಳಿ, ಬೆಂಡಿಗೇರಿ, ಹಿರೇಬಾಗೇವಾಡಿ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಖಾನಾಪೂರ ತಹಸೀಲ್ದಾರ ಗಾಯಕವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್. ನಾಗರಾಜ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಗಂಗಾಧರ್ ಡಿವಿಟರ್, ತಾಪಂ ಅಧಿಕಾರಿಗಳು ಸೇರಿಂದತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಚಿಕ್ಕಹಟ್ಟಿಹೊಳಿ ಗ್ರಾಮದಿಂದ ಚಿಕ್ಕಮುನ್ನೊಳ್ಳಿ ಗ್ರಾಮಕ್ಕೆ ಸೇರುವ ಸೇತುವೆ ಮುಳುಗಡೆಯಾಗಿರುವ ಕಾರಣ 5 ಊರುಗಳ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಪರ್ಯಾಯ ಮಾರ್ಗ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಕೆಲವು ಭಾಗಗಳಲ್ಲಿ ಮಳೆಯಿಂದ ಬಿದ್ದಿರುವ ಮನೆಗಳ ಕುರಿತು ವಾಸ್ತವ ಮಾಹಿತಿ ಸಿಗುತ್ತಿಲ್ಲ. ಬಿದ್ದಿರುವ ಮನೆಗಳನ್ನು ಗುರುತಿಸಿ, ಮನೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಮನೆಗಳ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ಮಾಡಬೇಕು. ನಿರ್ಲಕ್ಷ್ಯ ತೋರಬಾರದು. ಒಂದು ವೇಳೆ ಈ ಬಗ್ಗೆ ದೂರುಗಳು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು.

- ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ