-ಪ.ಜಾತಿ, ಪ.ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ನಿಯಮ 17ರ ರೀತ್ಯ ಜಿಲ್ಲಾ ಜಾಗೃತಿ ಸಮಿತಿಯ ಸಭೆಯಲ್ಲಿ ಡೀಸಿ ಸೂಚನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುವಂತಹ ಗ್ರಾಮಗಳ ಪಟ್ಟಿಯನ್ನು ಇಟ್ಟುಕೊಂಡು ತಕ್ಷಣ ಕಾಲ ಕಾಲಕ್ಕೆ ಭೇಟಿ ನೀಡಿ ಅಲ್ಲಿ ಸೂಕ್ತ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಬಿ.ಸುಶೀಲಾ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ನಿಯಮ 17ರ ರೀತ್ಯ ಜಿಲ್ಲಾ ಜಾಗೃತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಸತಿ ನಿಲಯಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಸಮಸ್ಯೆಗಳಿಗೆ ಅಧಿಕಾರಿಗಳು ತುರ್ತು ಸ್ಪಂದಿಸಿ ಕಾರ್ಯಗಳನ್ನು ನಿರ್ವಹಿಸಬೇಕು. ದೌರ್ಜನ್ಯ ಪ್ರಕರಣಗಳಿಗೆ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹಾಗೂ ಅಗತ್ಯ ಸೌಲಭ್ಯ ಒದಗಿಸಲು ತಿಳಿಸಿದರು.
ಜಿಲ್ಲಾ ಜಾಗೃತಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ವಿವಿಧ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆ ಹರಿಸಬೇಕು. ಪ.ಜಾ ಮತ್ತು ಪ. ಪಂಗಡದ ಜನಾಂಗದ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳಿಗೆ ಪರಿಹಾರ ವಿತರಿಸಲು ಒಟ್ಟು 1.20 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನ ಬಾಕಿ ಪ್ರಕರಣಗಳಿಗೆ ವೆಚ್ಚ ಭರಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ದೌರ್ಜನ್ಯ ಪ್ರಕರಣಗಳಲ್ಲಿ ನಿಯಮನುಸಾರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಯಾದಗಿರಿ ದೌರ್ಜನ್ಯ ಸಮಿತಿ ನಾಮ ನಿರ್ದೇಶಿತರಾದ ಮರೆಪ್ಪ ಚಟೇಕರ್, ಸುರಪುರ ದೌರ್ಜನ್ಯ ಸಮಿತಿ ನಿರ್ದೇಶಿತ ನಿಂಗಪ್ಪ ಬುಡ್ಡಾ ದೇವಳಗುಡ್ಡ, ಮಲ್ಲಪ್ಪ ಉಳಡಿಗೇರ್, ರವಿಕುಮಾರ ಯಂಕ್ಷಂತೆ, ಯಾದಗಿರಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಎಸ್.ಎಸ್. ಚನ್ನಬಸಪ್ಪ ಸೇರಿದಂತೆ ಇತರರಿದ್ದರು.
ಫೋಟೊ: ಯಾದಗಿರಿ ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ನಿಯಮ 17ರ ರೀತ್ಯ ಜಿಲ್ಲಾ ಜಾಗೃತಿ ಸಮಿತಿಯ ಸಭೆ ಜರುಗಿತು.
10ವೈಡಿಆರ್1