ಕನ್ನಡಪ್ರಭ ವಾರ್ತೆ ಮುಂಡಗೋಡ
ಬುಧವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ ಅವರು, ಬೇಕಾದವರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದ್ದು, ಬಹುತೇಕರಿಗೆ ಇಂದಿಗೂ ಹಕ್ಕುಪತ್ರ ನೀಡಲಾಗಿಲ್ಲ. ಈ ಬಗ್ಗೆ ಹಲವು ಬಾರಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಚರ್ಚಿಸಿದ ವಿಷಯ ಕಾರ್ಯಗತವಾಗದಿದ್ದರೆ ಸಭೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ತಕ್ಷಣ ಹಕ್ಕುಪತ್ರ ಯಾದಿ ತಯಾರಿಸಿ ವಿತರಿಸುವ ಕ್ರಮ ಕೈಗೊಳ್ಳಲು ಠರಾವು ಹೊರಡಿಸುವಂತೆ ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಸಭೆಯಲ್ಲಿ ಸಿಬ್ಬಂದಿಗೆ ಸೂಚಿಸಿದರು.
ಪಟ್ಟಣದ ಆನಂದನಗರ, ಇಂದಿರಾನಗರ ಮುಂತಾದ ಭಾಗದಲ್ಲಿ ಬಹಳಷ್ಟು ಜನರಿಗೆ ಈ ಹಿಂದೆ ಪಹಣಿ ಪತ್ರ ನೀಡಲಾಗಿದೆ. ಕಳೆದ ೬-೭ ವರ್ಷಗಳಿಂದ ಆ ಬಡಾವಣೆಗಳ ಮನೆಯ ತೆರಿಗೆ ಕಟ್ಟಿಸಿಕೊಳ್ಳುವುದನ್ನು ನಿಲ್ಲಿಸಿ ಉತಾರ ನೀಡುವುದನ್ನು ಬಂದ್ ಮಾಡಿದ್ದೀರಿ. ತೆರಿಗೆ ಸಂಗ್ರಹವಾಗದಿದ್ದರೆ ಪಟ್ಟಣ ಪಂಚಾಯಿತಿ ಹೇಗೆ ನಡೆಯಬೇಕು ಎಂದು ಸದಸ್ಯರು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಉತಾರ ನೀಡಲು ಅವಕಾಶವಿದ್ದರೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಸಂತೋಷ ಹಾಲಕಲ್ಲಾಪುರ ಹೇಳಿದರು.ಕಸ ತುಂಬುವ ವಾಹನದ ಕೊರತೆಯಿಂದ ಮನೆಯ ಬಾಗಿಲಿಗೆ ೨ ದಿನಕ್ಕೊಂದು ಬಾರಿ ಕಸದ ವಾಹನ ಬರುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೊಸ ವಾಹನ ಖರೀದಿಸಲು ಠರಾವು ಮಾಡಲಾಗಿತ್ತು ಈವರೆಗೂ ಖರೀದಿಸಿಲ್ಲ. ತಕ್ಷಣ ವಾಹನ ಖರೀದಿ ಕ್ರಮ ಕೈಗೊಳ್ಳುವಂತೆ ಫಣಿರಾಜ ಹದಳಗಿ ಒತ್ತಾಯಿಸಿದರು.
ರಸ್ತೆ ಬದಿ ವ್ಯಾಪಾರ ಮಾಡುವ ಬೀದಿ ವ್ಯಾಪಾರಸ್ಥರಿಗೆ ಪರ್ಯಾಯ ಜಾಗ ಗುರುತಿಸಿ ವ್ಯವಸ್ಥೆ ಮಾಡಿಕೊಡುವಂತೆ ಸದಸ್ಯರು ಒತ್ತಾಯಿಸಿದರು.