ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಯಕ್ಸಂಬಾ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ತನ್ನ ಸದಸ್ಯರಿಗೆ ಶೇ.10 ಲಾಭಾಂಶ ಹಾಗೂ ಸಿಬ್ಬಂದಿಗೆ ಪ್ರತಿಶತ 8.33 ಬೋನಸ್ ವಿತರಿಸಲಾಗುವುದು ಎಂದು ಸಹಕಾರಿಯ ನಿರ್ದೇಶಕ ರಮೇಶ ಚೌಗಲೆ ಹೇಳಿದರು.ಅವರು ಶನಿವಾರ ತಾಲೂಕಿನ ಸಹಕಾರಿಯ ಸಭಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಹಕಾರಿಯ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆಯವರ ಮಾರ್ಗದರ್ಶನದಲ್ಲಿ ಕಳೆದ 29 ವರ್ಷಗಳ ಹಿಂದೆ ಹುಟ್ಟು ಹಾಕಿರುವ ಜ್ಯೋತಿ ಸೌಹಾರ್ದ ಸಹಕಾರಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. 2022-23ನೇ ಸಾಲಿನ ಷೇರು ಹಣ ₹1,56,24,300 ಮೇಲೆ ಪ್ರತಿಶತ 10ರಷ್ಟು ಅಂದರೆ, ₹15,62,430 ಅನ್ನು 30,677 ಸದಸ್ಯರು ಲಾಭಾಂಶದ ಲಾಭ ಪಡೆದುಕೊಳ್ಳಲಿದ್ದಾರೆ.
ಸಿಬ್ಬಂದಿಗೆ ಶೇ. 8.33ರಷ್ಟು ಬೋನಸ್ ನೀಡಲಾಗುತ್ತದೆ. 39,923 ಸದಸ್ಯರನ್ನು ಹೊಂದಿರುವ ಸಹಕಾರಿಯು ₹2,20,15,200 ಷೇರು ಬಂಡವಾಳ, ₹294 ಕೋಟಿ ಠೇವಣಿ ಸಂಗ್ರಹಿಸಿ, ₹136 ಕೋಟಿ ಸಾಲ ವಿತರಿಸಿದೆ. ಸಹಕಾರಿಯ 305 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹1.50 ಕೋಟಿ ಲಾಭ ಗಳಿಸಿದೆ ಎಂದು ಹೇಳಿದರು.ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಕಾರ ತಳಹದಿಯ ಮೇಲೆ ಜ್ಯೋತಿ ಬಜಾರ್, ಔಷಧ ಅಂಗಡಿ, ಪ್ರಿಂಟಿಂಗ್ ಪ್ರೆಸ್ ಸೇರಿದಂತೆ ಜ್ಯೋತಿ ವಿವಿಧ ಉದ್ದೇಶ ಸೌಹಾರ್ದ ಸಹಕಾರಿಯ 81 ಶಾಖೆ ಹೊಂದಿದ್ದು, ಸಹಕಾರಿ ಕ್ಷೇತ್ರವನ್ನು ರಾಜ್ಯಾದ್ಯಂತ್ಯ ವಿಸ್ತರಿಸಲಾಗಿದೆ ಎಂದರು.
ಜ್ಯೋತಿಪ್ರಸಾದ ಜೊಲ್ಲೆ, ಉಪಾಧ್ಯಕ್ಷ ಬಿ.ಎನ್. ಮಾಳಿ, ನಿರ್ದೇಶಕ ಮಲಗೌಡ ಪಾಟೀಲ, ಜ್ಯೋತಿ ಗಿಡ್ಡ, ,ಶೈಪುದ್ದಿನ ಮುಲ್ಲಾ, ಕಲ್ಲಪ್ಪ ನಾಯಕ್, ವಿಶ್ವನಾಥ ಪೇಟಕರ್, ಸವಿತಾ ಉಂದುರೆ, ಲಕ್ಷ್ಮಣ ಪ್ರಭಾತ, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಸಂತೋಷ ಪಾಟೀಲ, ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂತೋಷ ಪೂಜಾರಿ, ಮುಖ್ಯ ಕಚೇರಿ ಲೆಕ್ಕಿಗ ತಾನಾಜಿ ಶೀಂಧೆ ಇದ್ದರು.