ಆಲೂರಿನಲ್ಲಿ ನೀರುಪಾಲಾದ ಬಾಲಕರ ಕುಟುಂಬಕ್ಕೆ ಪರಿಹಾರ ವಿತರಣೆ

KannadaprabhaNewsNetwork |  
Published : Jun 25, 2024, 12:38 AM IST
24ಎಚ್ಎಸ್ಎನ್8: | Kannada Prabha

ಸಾರಾಂಶ

ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಆಲೂರಿನ ಗ್ರಾಮದ ಮಕ್ಕಳ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಹಾಸನ ಉಸ್ತುವಾರಿ ಸಚಿವ ಕೆ,ಎನ್.ರಾಜಣ್ಣ ಸೋಮವಾರ ಭೇಟಿ ನೀಡಿ ಪರಿಹಾರದ ಚೆಕ್‌ ವಿತರಿಸಿದರು.

ಆಲೂರಿನಲ್ಲಿ ಮೇ.16ಕ್ಕೆ ಈಜಲು ಹೋಗಿ ಅಸುನೀಗಿದ್ದ ಮಕ್ಕಳು । ಸಚಿವ ರಾಜಣ್ಣ, ಗೃಹ ಸಚಿವ ಪರಮೇಶ್ವರ್‌ ಪರಿಹಾರ ಚೆಕ್‌

ಕನ್ನಡಪ್ರಭ ವಾರ್ತೆ ಆಲೂರು

ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಮಕ್ಕಳ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಹಾಸನ ಉಸ್ತುವಾರಿ ಸಚಿವ ಕೆ,ಎನ್.ರಾಜಣ್ಣ ಸೋಮವಾರ ಭೇಟಿ ನೀಡಿ ಮೃತ ಮಕ್ಕಳ ಕುಟುಂಬಸ್ಥರಿಗೆ ತಲಾ ಎರಡು ಲಕ್ಷ ರು. ಚೆಕ್ ವಿತರಣೆ ಮಾಡಿ ಸಾಂತ್ವನ ಹೇಳಿದರು.

ತಾಲೂಕಿನ ಮುತ್ತಿಗೆ ಗ್ರಾಮಕ್ಕೆ ಜಿ.ಪರಮೇಶ್ವರ್ ಹಾಗೂ ಉಸ್ತುವಾರಿ ಸಚಿವ ಕೆ,ಎನ್.ರಾಜಣ್ಣ ಭೇಟಿ ನೀಡಿದರು. ಮೇ.16 ರಂದು ಮುತ್ತಿಗೆ ಗ್ರಾಮದ ಸಾತ್ವಿಕ್, ಜೀವನ್, ಪೃಥ್ವಿ, ವಿಶ್ವಾಸ್ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದರು.

ಈ ಪ್ರಕರಣ ಕುರಿತು ಗೃಹ ಸಚಿವ ಜಿ.ಪರಮೇಶ್ವರ್ ಮಾತಾನಾಡಿ, ‘ಮೇ 16 ರಂದು ನಡೆದಂತಹ ಘಟನೆಯಲ್ಲಿ ಒಂದೇ ಗ್ರಾಮದ ನಾಲ್ವರು ಗಂಡು ಮಕ್ಕಳು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದರು ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ನಮ್ಮ ಸರ್ಕಾರದ ವತಿಯಿಂದ ನಾವು ಆ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವಾಗಲಿಲ್ಲ. ಈ ವಿಷಯವಾಗಿ ನಮ್ಮ ಮುಖ್ಯಮಂತ್ರಿ ಈಗಾಗಲೇ ಹಣವನ್ನು ಮಂಜೂರಾತಿ ಮಾಡಿ ಪರಿಹಾರ ನೀಡಬೇಕೆಂದು ತೀರ್ಮಾನ ಮಾಡಿದ್ದರು. ಇಂದು ನಮ್ಮ ಉಸ್ತುವಾರಿ ಸಚಿವರು ನಮಗೂ ಈ ವಿಷಯವನ್ನು ತಿಳಿಸಿ ನೀವು ಕೊಡ ಬರಬೇಕು ಎಂದು ಒತ್ತಾಯಿಸಿದ್ದರು’ ಎಂದು ಹೇಳಿದರು.

‘ಈ ಘಟನೆ ಆಕಸ್ಮಿಕವಾಗಿ ಆಗಿರುವಂತದ್ದು. ಆ ಮಕ್ಕಳನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅದರ ನಷ್ಟವನ್ನು ಭರಿಸುವುದಕ್ಕೂ ಸಾಧ್ಯವಿಲ್ಲ. ಆ ಕುಟುಂಬಗಳು ಭಯಪಡುವ ಅಗತ್ಯವಿಲ್ಲ. ಅವರೊಡನೆ ನಾವಿದ್ದೇವೆ. ಧೈರ್ಯ ಕಳೆದುಕೊಳ್ಳಬೇಡಿ, ನಿಮ್ಮ ಜೊತೆ ನಮ್ಮ ಸರ್ಕಾರ ಇದೆ’ ಎಂದು ಧೈರ್ಯ ತುಂಬಿದರು. ಆ ಮೃತ ಕುಟುಂಬದವರಿಗೆ ಸರ್ಕಾರದಿಂದ ತಲಾ ಎರಡು ಲಕ್ಷ ರು. ಪರಿಹಾರವನ್ನು ನೀಡಿದ್ದೇವೆ. ದೇವರು ಆ ಕುಟುಂಬಗಳಿಗೆ ಶಕ್ತಿ ನೀಡಲೆಂದು ಸಾಂತ್ವನ ಹೇಳಿದರು.

ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ‘ಈ ಘಟನೆ ನಿಜಕ್ಕೂ ನೋವಿನ ಸಂಗತಿ. ಬೆಳೆದು ಬದುಕಬೇಕಾದ ಮಕ್ಕಳು ಕೈ ಜಾರಿ ಹೋಗಿದ್ದಾರೆ. ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ನಾವು ಸಾಂತ್ವನ ಹೇಳಲು ಸಾಧ್ಯವಾಗಲಿಲ್ಲ. ಅವರಿಗೆ ಪರಿಹಾರವನ್ನು ದೊರಕಿಸಿಕೊಡಲು ಆಗಲಿಲ್ಲ. ನಮ್ಮಿಂದ ವಿಳಂಬವಾಗಿದೆ, ಅದಕ್ಕಾಗಿ ನಾವೆಲ್ಲರೂ ವಿಷಾದ ವ್ಯಕ್ತಪಡಿಸುತ್ತೇವೆ. ಆ ಮೃತ ಹುಡುಗರೆಲ್ಲರೂ ಹತ್ತು ಹನ್ನೆರಡು ವರ್ಷದ ವಯಸ್ಸಿನ ಮಕ್ಕಳು. ಆ ತಂದೆ ತಾಯಿಯಂದಿರು ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಜೀವನ ಕಟ್ಟಿಕೊಡುವ ಅನೇಕ ಆಸೆ ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಆ ಮಕ್ಕಳು ಅಸುನೀಗಿದ್ದಾರೆ. ಇದು ನಮ್ಮೆಲ್ಲರಿಗೂ ಬೇಸರ ಹಾಗೂ ನೋವುಂಟುಮಾಡಿದೆ’ ಎಂದು ಹೇಳಿದರು.

‘ಎಲ್ಲೂ ಕೂಡ ಈ ತರಹದ ಘಟನೆಗಳು ನಡೆಯಬಾರದು. ಏನೇ ಪರಿಹಾರ ಕೊಟ್ಟರೂ ಸಹ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದು ತಾತ್ಕಾಲಿಕ ನೆರವು ಅಷ್ಟೇ. ನಮ್ಮ ಮುಖ್ಯಮಂತ್ರಿ ಮಂಜೂರು ಮಾಡಿದ ಹಣವನ್ನು ಮೃತ ಕುಟುಂಬಗಳ ನೆರವಿಗೆ ಆಗಲಿ ಎಂದು ಈ ಹಣವನ್ನು ನೀಡಿದ್ದೇವೆ. ಮೃತ ಮಕ್ಕಳ ಮನೆಯವರು ಬಡವರಾಗಿದ್ದು ಮನೆಯ ಆರ್ಥಿಕ ಪರಿಸ್ಥಿತಿ ಕಷ್ಟದ್ದಾಗಿದೆ. ಹಾಗಾಗಿ ಅವರ ಮನೆಯನ್ನು ರಿಪೇರಿ ಮಾಡಿಕೊಡಬೇಕು’ ಎಂದು ತಿಳಿಸಿದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಶಾಸಕ ಸಿಮೆಂಟ್ ಮಂಜು, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಸಿಇಒ ಪೂರ್ಣಿಮಾ, ಎಸ್‌ಪಿ ಮಹಮ್ಮದ್ ಸುಜಿತಾ , ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪೃಥ್ವಿ ಜಯರಾಂ, ಸದಸ್ಯ ರುದ್ರಕುಮಾರ, ಕಾಂಗ್ರೆಸ್ ಮುಖಂಡರಾದ ಹೆಮ್ಮಿಗೆ ಮೋಹನ್, ಬೈರಮುಡಿ ಚಂದ್ರು, ಶಿವಮೂರ್ತಿ, ಕಾದಳು ಗ್ರಾಪಂ ಅಧ್ಯಕ್ಷ ಶಾಂತಪ್ಪ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!