ಶಿರಸಿ: ಅನಧಿಕೃತವಾಗಿ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವವರು ಮತ್ತು ಭೂಮಿ ಇಲ್ಲದವರಿಗೆ ಭೂಮಿಯ ಹಕ್ಕು ನೀಡುವ ಕೆಲಸವನ್ನು ಕಂದಾಯ ಇಲಾಖೆಯಿಂದ ಅಭಿಯಾನದ ರೀತಿಯಲ್ಲಿ ಹಾಗೂ ಸರ್ಕಾರದ ಮಾನದಂಡದಂತೆ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ನಗರದ ಅಂಬೇಡ್ಕರ ಭವನದಲ್ಲಿ ಬುಧವಾರ ಶಿರಸಿ ತಾಲೂಕಿನ ಬಗರ್‌ಹುಕುಂ ಸಾಗುವಳಿ ಚೀಟಿ, ಪಹಣಿ ಪತ್ರಿಕೆ ಮತ್ತು ಪೋಡಿ ದಾಖಲೆಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.ಸಾಮಾಜಿಕ ಹಾಗೂ ಅರ್ಥಿಕವಾಗಿ ಬಡವರನ್ನು ಹುಡುಕಿ ಅವರಿಗೆ ಆದ್ಯತೆ ಮೇರೆಗೆ ಸರ್ಕಾರದ ಮಾನದಂಡದ ಪ್ರಕಾರ ಕೆಲಸ ಮಾಡಿಕೊಡಲಾಗುತ್ತಿದೆ. ಸುಮಾರು ವರ್ಷಗಳಿಂದ ಅರಣ್ಯ ಭೂಮಿ ಹೊರತುಪಡಿಸಿ, ಸರ್ಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿ ಊರು ಆಗಿರುವುದನ್ನು ಗ್ರಾಮ ದಾಖಲಾತಿಗಳು ಇಲ್ಲದಿರುವ ಕ್ಯಾಂಪ್, ತಾಂಡಾ, ಕಂದಾಯ ಗ್ರಾಮದ ಅಧಿಕಾರ ನೀಡುವ ಕೆಲಸ ಮಾಡಲಾಗುತ್ತದೆ.
ಕಂದಾಯ ಗ್ರಾಮ ಆದ ನಂತರ ದಾಖಲೆ ಸಿಗುತ್ತದೆ. ದಾಖಲೆರಹಿತ ಗ್ರಾಮಗಳಿಗೆ ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಕಂದಾಯ ಗ್ರಾಮವನ್ನಾಗಿ ಮಾಡುವ ಕೆಲಸ ಮಾಡಲಾಗುತ್ತದೆ. ಒಂದು ವರ್ಷದಲ್ಲಿ ಕಂದಾಯ ಗ್ರಾಮವಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಕಾರಣದಿಂದ ಆಂದೋಲನದ ಮಾದರಿಯಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದರು.ರಾಜ್ಯದಲ್ಲಿ ೩,೮೦೦ ವಸತಿ ಪ್ರದೇಶಗಳು ಅನಧಿಕೃತವಾಗಿ ಇದೆ. ವರ್ಷದ ಒಳಗಡೆ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುತ್ತೇವೆ. ಅಧಿಕೃತ ಕಂದಾಯ ಗ್ರಾಮ ಎಂದು ಘೋಷಣೆ ಮಾಡಿ, ಹಕ್ಕುಪತ್ರ ನೀಡುವ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ೩೦ ಲಕ್ಷ ಕುಟುಂಬದಲ್ಲಿ ೧.೫೦ ಕೋಟಿ ಜನರಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ೧,೪೪೧ ಕುಟುಂಬಗಳಿವೆ. ಅವುಗಳಲ್ಲಿ ಸಾಂಕೇತಿಕವಾಗಿ ೪ ಜನರಿಗೆ ನೀಡುತ್ತಿದ್ದೇವೆ. ಮುಂದಿನ ವಾರದೊಳಗಡೆ ಎಲ್ಲರಿಗೂ ನೀಡುತ್ತೇವೆ.ಸ್ವಲ್ಪ ಹಣ ಸಂದಾಯ ಮಾಡಬೇಕಿರುವ ೩೦೦ ಜನರ ಅರ್ಜಿ ಬಾಕಿ ಉಳಿಯುತ್ತದೆ. ಅವರು ಹಣ ಭರ್ತಿ ಮಾಡಿದ ನಂತರ ಅವರಿಗೂ ನೀಡಲಾಗುತ್ತದೆ. ಹಳಿಯಾಳ ೮, ಮುಂಡಗೋಡ ೮ ಸೇರಿದಂತೆ ೧೬ ವಸತಿ ಪ್ರದೇಶದವರಿಗೂ ಹಕ್ಕುಪತ್ರ ನೀಡಿ, ಶಾಶ್ವತ ಪರಿಹಾರ ಹಾಗೂ ನೆಮ್ಮದಿ ನೀಡುತ್ತೇವೆ ಎಂದ ಅವರು, ಅರಣ್ಯ ಭೂಮಿ ಅರ್ಜಿ ಕುರಿತು ಜಿಪಂ ಸದಸ್ಯರು ಇಲ್ಲದಿರುವ ಕಾರಣ ಇತ್ಯರ್ಥಪಡಿಸಲು ಜಿಪಂ ಆಡಳಿತಾಧಿಕಾರಿ ಸದಸ್ಯರನ್ನಾಗಿ ಮಾಡಿ, ಚುನಾಯಿತ ಪ್ರತಿನಿಧಿಯನ್ನಾಗಿ ಸದಸ್ಯರನ್ನಾಗಿ ಮಾಡಿ ಅರಣ್ಯ ಹಕ್ಕು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಆ ಕಾರ್ಯವೂ ನಡೆಯಲಿದೆ ಎಂದರು.ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಉಳುವವವರೇ ಒಡೆಯ ಕಾನೂನು ತಂದಿದ್ದ ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ಭೂ ಹಕ್ಕನ್ನು ನೀಡಿದ್ದರು. ಲಕ್ಷಾಂತರ ರೈತರು ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಭೂಮಿಗಾಗಿ ಹಲವಾರು ವರ್ಷಗಳಿಂದ ಸಲ್ಲಿಸಿ, ಬಗರ್ ಹುಕುಂ ಕಾಯ್ದೆ ಮೂಲಕ ಸಾಂಕೇತಿಕವಾಗಿ ೪ ಜನರಿಗೆ ಭೂ ಹಕ್ಕು ನೀಡಲಾಗುತ್ತಿದೆ. ೩೧ ವಾರ್ಡ್‌ಗಳಲ್ಲಿ ಅತಿಕ್ರಮ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ ಅವರಿಗೆ ಹಕ್ಕು ನೀಡಲು ಕ್ರಮ ವಹಿಸಬೇಕು ಎಂದು ವಿನಂತಿಸಿದರು. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಸೀಲ್ದಾರ್ ಮತ್ತಿತರರು ಇದ್ದರು.