ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ: ವಿಶೇಷಚೇತನರು ಮತ್ತು ಹಿರಿಯ ನಾಗರಿಕರು ಸ್ವಾಭಿಮಾನದಿಂದ ಬದುಕಲು ಕೇಂದ್ರ ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದಿದೆ. ಇದರ ಭಾಗವಾದ ಪ್ರಧಾನ ಮಂತ್ರಿ ದಿವ್ಯಶಾ ಕೇಂದ್ರ (ಪಿಎಂಡಿಕೆ)ವು ನಗರದ ಕರ್ನಾಟಕ ವೈದ್ಯಕೀಯ ಕಾಲೇಜು-ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ)ಯಲ್ಲಿ ಪ್ರಾರಂಭಿಸಿದ್ದು ಈ ಕೇಂದ್ರ 8 ತಿಂಗಳಲ್ಲಿ ₹1.57 ಕೋಟಿ ಮೊತ್ತದ ಸಾಧನ ಸಲಕರಣೆ ವಿತರಿಸಿ ವಿಶೇಷಚೇತನರಿಗೆ ನೆರವಾಗಿದೆ.ಸಾಮಾಜಿಕ ನ್ಯಾಯ ಸಚಿವಾಲಯದಿಂದ ವಿಶೇಷಚೇತನ ವ್ಯಕ್ತಿಗಳಿಗೆ ಸಹಾಯ ಯೋಜನೆ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ವಿವಿಧ ಉಪಕರಣ ವಿತರಿಸಲಾಗುತ್ತದೆ. ಜನವರಿಯಲ್ಲಿ ಆರಂಭವಾದ ಈ ಕೇಂದ್ರ 1,865 ಫಲಾನುಭವಿಗಳಿಗೆ ₹1.57 ಕೋಟಿಗೂ ಹೆಚ್ಚು ಮೌಲ್ಯದ ಉಪಕರಣ ವಿತರಿಸಿ ಅವರ ಬಾಳಿಗೆ ಬೆಳಕು ನೀಡಿದೆ.
ಆರ್‌ವಿವೈ: ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಜನವರಿಯಲ್ಲಿ 35 ಅರ್ಜಿಯಲ್ಲಿ 8 ಜನರಿಗೆ ₹ 82 ಸಾವಿರ, ಫೆಬ್ರವರಿಯಲ್ಲಿ 518 ಅರ್ಜಿಯಲ್ಲಿ 100 ಜನರಿಗೆ ₹ 9.34 ಲಕ್ಷ , ಮಾರ್ಚ್‌ನಲ್ಲಿ 257 ಅರ್ಜಿಯಲ್ಲಿ 103 ಜನರಿಗೆ ₹ 7.78 ಲಕ್ಷ, ಏಪ್ರಿಲ್‌ನಲ್ಲಿ 827 ಅರ್ಜಿಯಲ್ಲಿ 201 ಜನರಿಗೆ ₹ 15.06 ಲಕ್ಷ, ಮೇ ನಲ್ಲಿ 691 ಅರ್ಜಿಯಲ್ಲಿ 189 ಜನರಿಗೆ ₹14.17 ಲಕ್ಷ, ಜೂನ್‌ನಲ್ಲಿ 2,226 ಅರ್ಜಿಯಲ್ಲಿ 495 ಜನರಿಗೆ ₹ 35.36 ಲಕ್ಷ, ಜುಲೈನಲ್ಲಿ 47 ಅರ್ಜಿಯಲ್ಲಿ 24 ಜನರಿಗೆ ₹1.68 ಲಕ್ಷ, ಆಗಸ್ಟ್‌ನಲ್ಲಿ 3,709 ಅರ್ಜಿಯಲ್ಲಿ 731 ಜನರಿಗೆ ₹55.13 ಲಕ್ಷ ಹಾಗೂ ಸೆಪ್ಟಂಬರ್‌ನಲ್ಲಿ ಈ ವರೆಗೆ 49 ಅರ್ಜಿ ಸಲ್ಲಿಕೆಯಾಗಿದ್ದು 23 ಜನರಿಗೆ ₹ 2.01 ಲಕ್ಷ ವೆಚ್ಚದ ಸಲಕರಣೆ ಒದಗಿಸಲಾಗಿದೆ.ಎಡಿಐಪಿ ಯೋಜನೆ: ಎಡಿಐಪಿ ಯೋಜನೆಯಡಿ ಜನವರಿಯಲ್ಲಿ ಸಲ್ಲಿಕೆಯಾದ 26 ಅರ್ಜಿಯಲ್ಲಿ 13 ಜನರಿಗೆ ₹ 2.20 ಲಕ್ಷ ವೆಚ್ಚದ ಸಲಕರಣೆ, ಫೆಬ್ರವರಿಯಲ್ಲಿ 67 ಅರ್ಜಿಯಲ್ಲಿ 39 ಜನರಿಗೆ ₹6.57 ಲಕ್ಷ ವೆಚ್ಚ, ಮಾರ್ಚ್‌ನ 70 ಅರ್ಜಿಯಲ್ಲಿ 41 ಜನರಿಗೆ ₹ 4.51 ಲಕ್ಷ, ಏಪ್ರಿಲ್‌ನಲ್ಲಿ 66 ಅರ್ಜಿಯಲ್ಲಿ 35 ಜನರಿಗೆ ₹ 3.54 ಲಕ್ಷ, ಮೇನಲ್ಲಿ 52 ಅರ್ಜಿಯಲ್ಲಿ 30 ಜನರಿಗೆ ₹ 6.70 ಲಕ್ಷ ವೆಚ್ಚ, ಜೂನ್‌ನಲ್ಲಿ 127 ಅರ್ಜಿಯಲ್ಲಿ 69 ಜನರಿಗೆ ₹ 10.41 ಲಕ್ಷ ವೆಚ್ಚ, ಜುಲೈನಲ್ಲಿ 1 ಅರ್ಜಿ ಸ್ವೀಕರಿಸಿ ಒಬ್ಬ ಫಲಾನುಭವಿಗೆ ₹45,000, ಆಗಸ್ಟ್‌ನಲ್ಲಿ 119 ಅರ್ಜಿಯಲ್ಲಿ 66 ಜನರಿಗೆ ₹8.45 ಲಕ್ಷ ಹಾಗೂ ಸೆಪ್ಟಂಬರ್‌ನಲ್ಲಿ ಈ ವರೆಗೆ 4 ಅರ್ಜಿ ಸಲ್ಲಿಕೆಯಾಗಿದ್ದು ಇಬ್ಬರಿಗೆ ₹18,000 ವೆಚ್ಚದ ಸಲಕರಣೆ ವಿತರಿಸಲಾಗಿದೆ. ಬ್ಯಾಟರಿ ಚಾಲಿತ ಮೂರು ಚಕ್ರಗಳ ವಾಹನ, ಶ್ರವಣ ಯಂತ್ರ, ಸಿಪಿ ವೀಲ್ಹ್‌ಚೇರ್, ಮಡಚಿ ಇಟ್ಟುಕೊಳ್ಳುವ ವಾಕರ್, ಸ್ಟಾಂಡರ್ಡ್ ವೀಲ್ಹ್‌ಚೇರ್, ಕಮೋಡ್ ವೀಲ್ಹ್‌ಚೇರ್ ಸೇರಿದಂತೆ ವಿವಿಧ ಯಂತ್ರ ನೀಡಲಾಗಿದೆ.
ಅಡಿಪ್ ಯೋಜನೆಯಡಿ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಪೋಟೋ ಸಲ್ಲಿಸಬೇಕು. ಕಡ್ಡಾಯವಾಗಿ ಅಂಗವೈಕಲ್ಯ ಬಗ್ಗೆ ವೈದ್ಯರಿಂದ ಸರ್ಟಿಫಿಕೆಟ್ ಸಲ್ಲಿಸಬೇಕು. ಓರ್ವ ಫಲಾನುಭವಿ ಒಂದೇ ಸಲ ಇದರ ಸೌಲಭ್ಯ ಪಡೆಯಬಹುದು. ಯಾವ ಜಿಲ್ಲೆಯವರು ಬೇಕಾದರೂ ಸಂಬಂಧಿತ ದಾಖಲೆ ಸಲ್ಲಿಸಿದರೆ ಉಪಕರಣಗಳ ಲಭ್ಯತೆಯ ಅಧಾರ ಮೇಲೆ ಅಂದೇ ಅವುಗಳನ್ನು ವಿತರಿಸಲಾಗುತ್ತದೆ ಎಂದು ಕೆಎಂಸಿಆರ್‌ಐ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ಹೇಳಿದರು.