ಕೊಪ್ಪಳ: ಬರಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ವರ್ಷವಿಡೀ ಪೌಷ್ಟಿಕ ಹಸಿರು ಮೇವು ಒದಗಿಸುವ ಹಾಗೂ ಹಾಲಿನ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಸುಧಾರಿತ ಮೇವಿನ ಬೀಜಗಳ ಕಿಟ್‌ಗಳನ್ನು ಸಂಸದ ಕೆ. ರಾಜಶೇಖರ ಹಿಟ್ನಾಳ ರೈತರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಾಜಶೇಖರ ಹಿಟ್ನಾಳ, ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಲ್ಲಿಯೂ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳ ನಿರ್ವಹಣೆಗೆ ಮೇವಿನ ಬೀಜದ ಕಿಟ್‌ಗಳು ಸಂಜೀವಿನಿಯಾಗಲಿವೆ. ರೈತರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಸಿರು ಮೇವು ಬೆಳೆಸಬೇಕು ಎಂದರು.
ಜಿಲ್ಲಾಡಳಿತದ ಶ್ಲಾಘನೀಯ ಕಾರ್ಯ: ಸರ್ವೋದಯ ಐಆರ್‌ಡಿಎಸ್ ಅಧ್ಯಕ್ಷ ನಾಗರಾಜ ದೇಸಾಯಿ ಮಾತನಾಡಿ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ರೈತರ ಹಿತದೃಷ್ಟಿಯಿಂದ ಪಶುಸಂಗೋಪನಾ ಇಲಾಖೆಯ ಸಮನ್ವಯದೊಂದಿಗೆ ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿ ಬಳಸಿಕೊಂಡು ಮೇವಿನ ಕಿಟ್ ಖರೀದಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ವಿಶ್ವದ ಪ್ರಮುಖ ಕೃಷಿ ತಂತ್ರಜ್ಞಾನ ಕಂಪನಿಯಾದ ಸಿಂಜೆಂಟಾ ನೀಡಿದ ₹10 ಲಕ್ಷ ಸಿಎಸ್‌ಆರ್ ನಿಧಿಯಿಂದ ಮೇವಿನ ಕಿಟ್‌ಗಳನ್ನು ಖರೀದಿಸಿ ರೈತರಿಗೆ ವಿತರಿಸುತ್ತಿರುವುದು ಬರ ನಿರ್ವಹಣೆಗೆ ಸಹಕಾರಿಯಾಗಿದೆ ಎಂದರು.ಜಾನುವಾರು ಸಾಕಣೆಗೆ ಅನುಕೂಲ: ಮೇವಿನ ಕಿಟ್ ಪಡೆದ ಲಕಮಾಪುರದ ರೈತ ನಾಗಪ್ಪ ಮುದ್ಲಾಪುರ ಮಾತನಾಡಿ, ನಮ್ಮ ಮನೆಯಲ್ಲಿ 10 ದನಗಳಿದ್ದು, ಅವುಗಳ ಮೇವು ನಿರ್ವಹಣೆಗೆ ಈ ಬೀಜಗಳು ಅನುಕೂಲವಾಗಲಿವೆ. ಬೀಜ ಬಿತ್ತಿದ ಸುಮಾರು 40 ದಿನಗಳಲ್ಲಿ ಮೇವು ಲಭ್ಯವಾಗಲಿದೆ ಎಂದರು.
ಸಿಂಜೆಂಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕರ್ನಾಟಕ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಕೆ., ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಸಿಂಜೆಂಟಾ ಹುಬ್ಬಳ್ಳಿ ವಲಯದ ವ್ಯವಹಾರ ವ್ಯವಸ್ಥಾಪಕ ಮಲ್ಲಿಕಾರ್ಜುನ ಕೋರಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ಉಪಸ್ಥಿತರಿದ್ದರು.