ಆದಿಚುಂಚನಗಿರಿಯಲ್ಲಿ ನ. 11ರಿಂದ 13ರ ವರೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗಂಗಾವತಿಯ ಲಿಟಲ್ ಹಾರ್ಟ್ ಶಾಲೆಯ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗಂಗಾವತಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕರ್ನಾಟಕ ಸರ್ಕಾರ ಆದಿಚುಂಚನಗಿರಿಯಲ್ಲಿ ನ. 11ರಿಂದ 13ರ ವರೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಲಿಟಲ್ ಹಾರ್ಟ್ ಶಾಲೆಯ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಮಣಿಕಂಠ ಹಾಗೂ ಹನುಮೇಶ್ ಕಲಬುರಗಿ ವಿಭಾಗವನ್ನು ಪ್ರತಿನಿಧಿಸಿ, ಕಲಾತ್ಮಕ ಜೋಡಿ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ರಿದಮಿಕ್ ಜೋಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಲಬುರ್ಗಿ ವಿಭಾಗದಿಂದ ಯೋಗಾಸನದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದ ಒಟ್ಟು 17 ವಿದ್ಯಾರ್ಥಿಗಳನ್ನು ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರೋಷನ್ ದೈಹಿಕ ಶಿಕ್ಷಣ ಪರೀವಿಕ್ಷಕರಾದ ಸರಸ್ವತಿ, ಇಸಿಒ ರಾಘವೇಂದ್ರ ಹಾಗೂ ಆನಂದ ನಾಗಮ್ಮನವರ್ ಹಾಗೂ ಸಿಬ್ಬಂದಿ ವರ್ಗದವರು ಈ ಮಕ್ಕಳನ್ನು ಸನ್ಮಾನಿಸಿದರು.

ಆನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ತೆರೆದ ವಾಹನದಲ್ಲಿ ವಿದ್ಯಾರ್ಥಿಗಳ ಮೆರವಣಿಗೆ ನಡೆಸಲಾಯಿತು.

ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮಾತನಾಡಿ, ನಮ್ಮ ಶಾಲೆಯಿಂದ ಒಟ್ಟು 17 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಹಾಗೂ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುವುದು ನಿಜವಾಗಿಯೂ ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಿಯಾಕುಮಾರಿ ಅವರು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಈ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಭಾನುಪ್ರಸಾದ್, ಸೋಮಶೇಖರ್ ಅಝರ್ ಛತ್ರಪ್ಪ ಅವರನ್ನು ಅಭಿನಂದಿಸಿದರು.

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಟಿ. ಕುಲ್ಸುಮ್‌ಗೆ ಪ್ರಥಮ ಸ್ಥಾನ

ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡೆಮಿ ಹಾಗೂ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್, ಕೊಪ್ಪಳ ಇವರ ಸಹಯೋಗದಲ್ಲಿ ನಡೆದ 14 ಮತ್ತು 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಚಾಂದ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿನಿ ಟಿ. ಕುಲ್ಸುಮ್ ಗಮನಾರ್ಹ ಸಾಧನೆ ಮಾಡಿದ್ದಾರೆ.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿದ ಕುಲ್ಸುಮ್ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಅಕಾಡೆಮಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿನಿಯ ಸಾಧನೆಗೆ ಚಾಂದ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ತರಬೇತುದಾರರು, ಪದಾಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.