ಮಕ್ಕಳು ಕನಸುಗಾರರಾಗಬೇಕು. ಆಡಿ-ಹಾಡಿ ಕುಣಿಯುತ್ತಲೇ ಸಂಭ್ರಮದಿಂದ ಕಲಿಯಬೇಕು. ಮಕ್ಕಳು ಮಕ್ಕಳಾಗಿಯೇ ತಮ್ಮ ಬಾಲ್ಯದ ಕುತೂಹಲ ಉಳಿಸಿಕೊಂಡು ಪ್ರಶ್ನಿಸುತ್ತಾ, ಪ್ರಯೋಗಿಸುತ್ತಾ ಕಲಿಯಬೇಕು.

ಕನ್ನಡಪ್ರಭ ವಾರ್ತೆ ಮುಂಡರಗಿ

ಮಕ್ಕಳು ಕನಸುಗಾರರಾಗಬೇಕು. ಆಡಿ-ಹಾಡಿ ಕುಣಿಯುತ್ತಲೇ ಸಂಭ್ರಮದಿಂದ ಕಲಿಯಬೇಕು. ಮಕ್ಕಳು ಮಕ್ಕಳಾಗಿಯೇ ತಮ್ಮ ಬಾಲ್ಯದ ಕುತೂಹಲ ಉಳಿಸಿಕೊಂಡು ಪ್ರಶ್ನಿಸುತ್ತಾ, ಪ್ರಯೋಗಿಸುತ್ತಾ ಕಲಿಯಬೇಕು. ಶಿಕ್ಷಕರು ತಮ್ಮ ಬಾಲ್ಯತನವನ್ನು ಉಳಿಸಿಕೊಂಡು ಮಕ್ಕಳ ಸ್ವಯಂ ಕಲಿಕೆಗೆ, ಪ್ರತಿಭೆಗಳ ಅನಾವರಣಕ್ಕೆ, ಪೂರಕ ಅವಕಾಶ ಕಲ್ಪಿಸಿ ಕೊಡುವಂತ ಶಾಲೆಗಳನ್ನು ರೂಪುಗೊಳಿಸಬೇಕು. ಮಕ್ಕಳ ಸ್ನೇಹಿ ಶಿಕ್ಷಕರು ಹಾಗೂ ಮಕ್ಕಳ ಸ್ನೇಹಿ ಶಾಲೆಯಿಂದ ಮಾತ್ರ ಮಕ್ಕಳ ಸರ್ವಾಂಗೀಣ ವಿಕಾಸ ಸಾಧ್ಯ ಎಂದು ಗದಗ ಡಯಟ್ ನ ಉಪನ್ಯಾಸಕ- ಸಾಹಿತಿ ಯಲ್ಲಪ್ಪ ಹಂದ್ರಾಳ ಹೇಳಿದರು.

ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಶಾಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ಕಲ್ಪಿಸಲಾಗಿದ್ದು, ಮಕ್ಕಳು ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಶಾಲೆಯಲ್ಲಿ ತೆರೆದ ಗ್ರಂಥಾಲಯ ಹಾಗೂ ವಾಚನಾಭಿರುಚಿ ಬೆಳೆಸುವ ಮೂಲಕ ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳುವಂತೆ ಮಾಡಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದ್ದು ಈ ಶಾಲೆಯಲ್ಲಿ ತರೆದ ಗ್ರಂಥಾಲಯ ಅನುಷ್ಠಾನಗೊಳಿಸಿರುವು ಶ್ಲಾಘನೀಯ ಎಂದರು.

ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ವಾಚನ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಮಕ್ಕಳ‌ ಮಮತೆಯ ಹವ್ಯಾಸಿ ರಂಗಕಲಾವಿದ ದಿ. ಗುರುಲಿಂಗಪ್ಪ ಸೊಲಗಿಯವರ ಸ್ಮರಣೆಯಲ್ಲಿ ಬಹುಮಾನ ನೀಡಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ದೇಶದ ಪ್ರಥಮ ಪ್ರಧಾನಿ ಪಂ. ಜವಾಹರಲಾಲ ನೆಹರ ಅವರ ಮಕ್ಕಳ ಮೇಲಿನ ಪ್ರೀತಿ ಅಮೋಘವಾದುದು. ಅವರ ಕನಸಿನಂತೆ ಈ ನೆಲದ ನಕ್ಷತ್ರಗಳಾಗಿರುವ ಮಕ್ಕಳು ವಾಚನಾಭಿರುಚಿಯೊಂದಿಗೆ ಉತ್ಸಾಹಿಗಳಾಗಿ ಬೆಳೆಯಬೇಕು ಎಂದರು.

ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಹಾಲಮ್ಮ ಜಿತೇಂದ್ರ ಬಾಗಳಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಪಿ.ಎಂ. ಲಾಂಡೆ, ಎಸ್.ಡಿ.ಎಂ.ಸಿ. ಸದಸ್ಯರಾದ ಬಸವರಾಜ ಅಂಗಡಿ, ವಿಠಲ ಜಂಬಗಿ, ಕೋಟೇಶ ಸುಣಗಾರ, ಫಕೀರಪ್ಪ ಕಡೆಮನಿ, ಶೋಭಾ ಹೊಸಮನಿ, ಪರಮೇಶಪ್ಪ ದಂಡಿನ ಉಪಸ್ಥಿತರಿದ್ದರು.

ಶಿಕ್ಷಕ ಎಂ.ಆರ್. ಗುಗ್ಗರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಝಳಕಿ ಸ್ವಾಗತಿಸಿದರು, ಬಿ.ಎಚ್. ಹಲವಾಗಲಿ ನಿರೂಪಿಸಿ, ಶಿವಲೀಲಾ ಪ್ರಕಾಶ ಅಬ್ಬಿಗೇರಿ ವಂದಿಸಿದರು.