ಬ್ರಹ್ಮಪುರದಲ್ಲಿ ಮಂತ್ರಾಕ್ಷತೆ ವಿತರಣೆ

KannadaprabhaNewsNetwork | Published : Jan 15, 2024 1:48 AM

ಸಾರಾಂಶ

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಹೊಳಲ್ಕೆರೆ ತಾಲೂಕು ಬ್ರಹ್ಮಪುರದಲ್ಲಿ ಮನೆ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.

ಹೊಳಲ್ಕೆರೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಹೊಳಲ್ಕೆರೆ ತಾಲೂಕು ಬ್ರಹ್ಮಪುರದಲ್ಲಿ ಮನೆ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸಿ ಜ.22ರಂದು ಉತ್ತರ ದಿಕ್ಕಿನಲ್ಲಿ ಐದು ದೀಪಗಳನ್ನು ಹಚ್ಚಿ ಶ್ರೀರಾಮನನ್ನು ಪೂಜಿಸುವಂತೆ ಮನವಿ ಮಾಡಲಾಯಿತು. ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸಿದ ನಂತರ ಪ್ರತಿ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.

ಹಿಂದೂಗಳ ಆರಾಧ್ಯ ದೈವ ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಅಯೋಧ್ಯೆಯಲ್ಲಿ ಕರ ಸೇವೆ ಸಲ್ಲಿಸಿದವರನ್ನು ಈ ಶುಭ ಸಂದರ್ಭದಲ್ಲಿ ಕಡ್ಡಾಯವಾಗಿ ಎಲ್ಲರೂ ಸ್ಮರಿಸಲೇಬೇಕು. ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಆಗದಿದ್ದರೂ ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಸೌಭಾಗ್ಯ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಹಾಗಾಗಿ ಪ್ರಾಣ ಪ್ರತಿಷ್ಠಾಪನೆಯಂದು ಎಲ್ಲರೂ ಶ್ರೀರಾಮನನ್ನು ಜಪಿಸುವ ಮೂಲಕ ಭಕ್ತಿ ಸಮರ್ಪಿಸಬೇಕೆಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಗ್ರಾಮಸ್ಥರಲ್ಲಿ ವಿನಂತಿಸಿದರು.

ಜ.22 ರಂದು ಪ್ರತಿ ಮಂಡಲಗಳ ಆಯಾ ದೇವಸ್ಥಾನಗಳಲ್ಲಿ ಸ್ವಚ್ಚತೆ ಕೈಗೊಳ್ಳುವ ಮೂಲಕ ಪ್ರಧಾನಿ ಮೋದಿರವರ ಕನಸಿಗೆ ಕೈಜೋಡಿಸುವಂತೆ ಮನವಿ ಮಾಡಿದ ದಗ್ಗೆಶಿವಪ್ರಕಾಶ್ ಇದೊಂದು ಅಭೂತಪೂರ್ವ ಸಂದರ್ಭವಾಗಿರುವುದರಿಂದ ಎಲ್ಲರೂ ಪ್ರಾಣ ಪ್ರತಿಷ್ಠಾಪನೆಯಂದು ದೀಪಗಳನ್ನು ಬೆಳಗಿ ಗೌರವಿಸಬೇಕೆಂದರು.

ಪ್ರಧಾನಿ ನರೇಂದ್ರಮೋದಿಯಂತಹ ಭಕ್ತನನ್ನು ಸ್ವತಃ ರಾಮನೇ ಅಯೋಧ್ಯೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಭೂಮಿಗೆ ಕಳಿಸಿದ್ದಾನೆ. ಪ್ರತಿಯೊಬ್ಬ ಭಾರತೀಯ ಪ್ರತಿನಿಧಿಯಾಗಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆಂದು ದಗ್ಗೆಶಿವಪ್ರಕಾಶ್ ಹೇಳಿದರು.

ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಕುಬೇಂದ್ರಪ್ಪ.ಎಚ್, ಎಂ.ಎಸ್.ಲೋಕೇಶ್ವರಪ್ಪ, ಮಿಲ್ಟ್ರಿ ನಾಗರಾಜಪ್ಪ, ಯರಗುಂಟಪ್ಪ, ಸಿ.ತಿಪ್ಪೇಸ್ವಾಮಿ, ಚೇರ್ಮನ್ ರುದ್ರಪ್ಪ, ದಗ್ಗೆ ದೇವೇಂದ್ರಪ್ಪ, ಸಿದ್ದಲಿಂಗಪ್ಪ, ಭೈರೇಶ್, ಸುಧಮ್ಮ, ತಗಡೂರು ರಾಜಮ್ಮ, ಮೀನಾಕ್ಷಮ್ಮ, ತಳವಾರ್ ರಾಜಪ್ಪ, ತಗಡು ಗೌರಮ್ಮ, ಅಮೂಲ್ಯ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.

Share this article