ಕನ್ನಡಪ್ರಭ ವಾರ್ತೆ ಚಾಮರಾಜನಗರ ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಲಿನ ಜೊತೆಗೆ ಪ್ರತಿ ದಿನ ಬೆಳಗ್ಗೆ ಮಕ್ಕಳಿಗೆ ಶಕ್ತಿ ಕೊಡುವ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ನೀಡಲು ಮುಂದಾಗಿದೆ. ಎಂದು ತಾಲೂಕು ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ತಿಳಿಸಿದರು. ನಗರದ ಸಂತೆಮರಳ್ಳಿ ರಸ್ತೆಯಲ್ಲಿ ಇರುವ ಉಪ್ಪಾರಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆಎಂಎಫ್ ಸಂಸ್ಥೆಗಳ ಸಹಯೋಗದಲ್ಲಿ ಮದ್ಯಾಹ್ನ ಉಪಾಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ೧ ರಿಂದ ೧೦ ತರಗತಿಯ ಎಲ್ಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬಿಸಿ ಹಾಲಿನೊಂದಿಗೆ ಮಿಶ್ರಣಗೊಳಿಸಿ ಶಾಲಾ ಮಕ್ಕಳಿಗೆ ಜಿಲ್ಲಾ ಹಾಗೂ ತಾಲೂಕು ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಗಿ ಹೆಲ್ತ್ ಮಿಕ್ಸ್ ನೀಡುವುದರ ಮೂಲಕ ಉದ್ಘಾಟಿಸಿದರು.ಮಕ್ಕಳ ವಿದ್ಯಾಭ್ಯಾಸವನ್ನು ಉತ್ತಮ ಗೊಳಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳು ಶಾಲೆಗಳಲ್ಲಿ ನೀಡುವ ಪೌಷ್ಠಿಕ ಆಹಾರವನ್ನು ಸೇವಿಸಿ ಓದಿನ ಕಡೆ ಹೆಚ್ಚು ಒತ್ತು ನೀಡಿ ನಮ್ಮ ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.ಡಯಟ್ ಪ್ರಾಶುಪಾಲ ಕಾಶಿನಾಥ್ ಮಾತನಾಡಿ ನಮ್ಮ ದೇಶದ ಮುಂದಿನ ಪ್ರಜೆಗಳು ಮಕ್ಕಳು. ಮಕ್ಕಳಿಗೆ ಜ್ಞಾನವನ್ನು ತುಂಬುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತುಕೊಟ್ಟು ಮುಂದೆ ಸಾಗಬೇಕಿದೆ. ಸರ್ಕಾರಗಳು ಸರ್ಕಾರಿ ಶಾಲೆಗಳ ಮಕ್ಕಳು ಹಸಿವಿನಿಂದ ಇರಬಾರದು ಎಂದು ಮದ್ಯಾಹ್ನದ ಊಟ, ಜೊತೆ ಮೊಟ್ಟೆ, ರಾಗಿ ಹೆಲ್ತ್ ಮಿಕ್ಸ್ ನೀಡುತಿದೆ ವಿದ್ಯಾರ್ಥಿಗಳು ಪೌಷ್ಠಿಕ ಆಹಾರಗಳನ್ನು ಸೇವಿಸಿ ಶಾಲೆಗೆ ಕೀರ್ತಿತರುವ ಶಿಕ್ಷಣವನ್ನು ಪಡೆಯಬೇಕು ಎಂದು ತಿಳಿಸಿದರು.ಬಿಇಒ ಸೋಮಣ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಾಮರಾಜನಗರ ಜಿಲ್ಲಾಧ್ಯಂತ ಸರ್ಕಾರಿ ಶಾಲೆಗಳಲ್ಲಿ ಗುರುವಾರ ಮಕ್ಕಳಿಗೆ ಹಾಲಿನ ಜೊತೆಯಲ್ಲಿ ರಾಗಿ ಮಾಲ್ಟ್ ನೀಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಮಕ್ಕಳು ಶಕ್ತಿ ಹೀನರಾಗಬಾರದು, ಸರ್ಕಾರವು ನೀಡುವ ಪೌಷ್ಠಿಕ ಆಹಾರವನ್ನು ಪಡೆದು ಶಕ್ತಿವಂತರಾಗಬೇಕು ಜೊತೆಗೆ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದ ನಗರಸಭೆ ಸದಸ್ಯ ಬಸವಣ್ಣ ಮಾತನಾಡಿ ಹಿಂದಿನ ಕಾಲದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವೆಂದರೆ ಬಹಳ ಕಷ್ಟವಾಗಿತ್ತು. ಕಾಲ ಬದಲಾಗುತ್ತಿದ್ದಂತೆ ಸರ್ಕಾರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ನೀಡುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ವಿದ್ಯಾವಂತರಾಗಬೇಕು ಎಂದು ಹೇಳಿದರು.ಜಿಲ್ಲಾ ಆಕ್ಷರ ದಾಸೋಹ ಅಧಿಕಾರಿ ಗುರುಲಿಂಗಯ್ಯ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಸಿ.ಆರ್.ಪಿ ಗಂಗಾಬಿಕೆ, ಎಸ್.ಡಿ.ಎಂ.ಸಿ ಸದಸ್ಯ ಮಹದೇವಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕಬಸವಯ್ಯ, ಹಾಗೂ ಶಾಲಾ ಶಿಕ್ಷಕ ವೃಂದದವರು ಹಾಗೂ ಮಕ್ಕಳು ಹಾಜರಿದ್ದರು.