ಗರ್ಲ್ ಐಕಾನ್ ಕಾರ್ಯಕ್ರಮಕ್ಕೆ ಆಯ್ಕೆಯಾದ ಹೆಣ್ಣು ಮಕ್ಕಳಿಗೆ ಮೊಬೈಲ್, ಶಾಲಾಚೀಲ, ಪುಸ್ತಕ ವಿತರಣೆ

KannadaprabhaNewsNetwork | Published : Aug 1, 2024 12:24 AM

ಮಿಲಾನ್ ಸಂಸ್ಥೆಯು ಕಳೆದ ಏಳು ವರ್ಷಗಳಿಂದ ಇದೇ ಮಾದರಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಹದಿಹರೆಯದ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ನಾಯಕತ್ವದ ತರಬೇತಿ ನೀಡುತ್ತಿದೆ. ಹೀಗೆ ಆಯ್ಕೆಯಾದ ಬಾಲಕಿಯರನ್ನು ಗರ್ಲ್ ಐಕಾನ್ ಎಂದು ಗುರುತಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಹ್ಯಾಂಡ್ ಪೋಸ್ಟ್

ಹ್ಯಾಂಡ್ ಪೋಸ್ಟ್ ಮೈರಾಡ ಪ್ಲಾನ್ ಸಂಸ್ಥೆಯಲ್ಲಿ ಎಚ್.ಡಿ. ಕೋಟೆಯಲ್ಲಿ ಮಿಲಾನ್ ಸಂಸ್ಥೆಯು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ನಡೆಸುವ ಗರ್ಲ್ ಐಕಾನ್ ಕಾರ್ಯಕ್ರಮಕ್ಕೆ ಆಯ್ಕೆಯಾದ ಹೆಣ್ಣುಮಕ್ಕಳಿಗೆ ಮೊಬೈಲ್, ಶಾಲಾ ಚೀಲ, ಪುಸ್ತಕ ಮತ್ತಿತರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಮೈಸೂರು ಜಿಲ್ಲೆಯ ಸುಮಾರು 46 ಹೆಣ್ಣು ಮಕ್ಕಳನ್ನು 2024-25ನೇ ಸಾಲಿನ ಗರ್ಲ್ ಐಕಾನ್ ಫೆಲೊಶಿಪ್ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು.

ಮಿಲನ್ ಸಂಸ್ಥೆಯ ಲಕ್ಷ್ಮಿ ಪವಾರ್ ಮಾತನಾಡಿ, ಮಿಲಾನ್ ಸಂಸ್ಥೆಯು ಕಳೆದ ಏಳು ವರ್ಷಗಳಿಂದ ಇದೇ ಮಾದರಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಹದಿಹರೆಯದ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ನಾಯಕತ್ವದ ತರಬೇತಿ ನೀಡುತ್ತಿದೆ. ಹೀಗೆ ಆಯ್ಕೆಯಾದ ಬಾಲಕಿಯರನ್ನು ಗರ್ಲ್ ಐಕಾನ್ ಎಂದು ಗುರುತಿಸಲಾಗುತ್ತದೆ ಎಂದರು.

ಮುಂದಿನ ಒಂದು ವರ್ಷದ ಅವಧಿಯಲ್ಲಿ ಈ ಬಾಲಕಿಯರಿಗೆ ವ್ಯಕ್ತಿತ್ವ ವಿಕಸನ, ಹದಿಹರೆಯದವರ ಆರೋಗ್ಯ ಮತ್ತು ಶಿಕ್ಷಣದ ಮಹತ್ವದ ಕುರಿತಾಗಿ ತರಬೇತಿಗಳನ್ನು ನೀಡುವ ಮೂಲಕ ಅವರು ತಮ್ಮ ಹಾಗೂ ತಮ್ಮಂತಹ ಇತರ ಬಾಲಕಿಯರ ಬದುಕಿನಲ್ಲಿ ಬದಲಾವಣೆಯ ನಾಂದಿ ಹಾಡಲು ಉತ್ತೇಜಿಸುವುದು ಮಿಲಾನ್ ಸಂಸ್ಥೆಯ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಕಂಡು ಬರುವಂತಹ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಜಾತಿಭೇದ, ವರದಕ್ಷಿಣೆ, ಮಕ್ಕಳ ಮೇಲಾಗುವ ದೌರ್ಜನ್ಯಗಳ ವಿರುದ್ಧ ಹೆಣ್ಣುಮಕ್ಕಳು ಧ್ವನಿ ಎತ್ತಲು ಪ್ರೇರೆಪಿಸಲಾಗುತ್ತದೆ. ಕರ್ನಾಟಕದಲ್ಲಿ ಮಿಲಾನ್ ಸಂಸ್ಥೆಯು ಪ್ರಸ್ತುತ ಸುಮಾರು 1,500ಕ್ಕೂ ಹೆಚ್ಚು ಬಾಲಕಿಯರನ್ನು ಗರ್ಲ್ ಐಕಾನ್ ಮತ್ತು ಗರ್ಲ್ ಐಕಾನ್ ಸ್ವಯಂಸೇವಕ ಹೊಂದಿದೆ ಎಂದರು.

ಯೋಜನೆ ಸಂಯೋಜಕ ರೂಪಾ ಮರಿಗೌಡ ಮಾತನಾಡಿ, ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಹೇಳಿ ಕೊಡುವ ಮೂಲಕ ಬಾಲಕಿಯರಿಗೆ ಪ್ರೋತ್ಸಾಹಿಸಿದರು.

ಸಂಸ್ಥೆಯ ಯೋಜನೆಯ ಸಹಾಯಕಿ ರಶ್ಮಿ ಬಸವರಾಜ್, ಸಹನಾ , ರಕ್ಷಿತಾ ಉಮೇಶ್, ದೀಕ್ಷಿತಾ , ಸಿಂಧೂ , ಸುಚಿತ್ರ, ರಕ್ಷಿತಾ ಮತ್ತು ಮೈರಾಡ ಪ್ಲಾನ್ ಸಂಸ್ಥೆಯ, ಜಯಂತಿ, ರಾಜೇಂದ್ರ ಇದ್ದರು.