ಬಿ.ಕಾಂ. ಇ-ಕಾಮರ್ಸ್‌ ಪರೀಕ್ಷೆ; ಪ್ರಶ್ನೆಗಳ ಬದಲು ಉತ್ತರ ಸಮೇತ ಪತ್ರಿಕೆ ವಿತರಣೆ

KannadaprabhaNewsNetwork | Published : Aug 7, 2024 1:13 AM

ಸಾರಾಂಶ

ಅಂತಿಮ ವರ್ಷದ ವಾಣಿಜ್ಯ ವಿಭಾಗದ ಇ-ಕಾಮರ್ಸ್‌ ಪತ್ರಿಕೆಗೆ ಮಂಗಳವಾರ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ನಡೆಯಬೇಕಿದ್ದ 6ನೇ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಬದಲಿಗೆ ಬೋರ್ಡ್‌ ಆಫ್‌ ಎಕ್ಸಾಮಿನೇಷನ್‌ (ಬಿಒಇ) ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಸ್ಕೀಂ ಆಫ್‌ ವ್ಯಾಲುವೇಷನ್‌ ಪತ್ರಿಕೆ ನೀಡಿದ್ದರಿಂದ ಪರೀಕ್ಷೆ ಮುಂದೂಡಲಾಗಿದೆ.

- ದಾವಿವಿ ಬಿಒಇ ಕರ್ತವ್ಯಲೋಪದಿಂದ ದಾವಣಗೆರೆ, ಚಿತ್ರದುರ್ಗ ವಿದ್ಯಾರ್ಥಿಗಳ ಪರದಾಟ

- - - - ಪರೀಕ್ಷೆ ಮುಂದೂಡಿದ ದಾವಿವಿ: ವಿದ್ಯಾರ್ಥಿಗಳು, ಪೋಷಕರ ಆತಂಕ-ಅಸಮಾಧಾನ

- ಪ್ರಶ್ನೆಪತ್ರಿಕೆ ಬದಲಿಗೆ ಸ್ಕೀಂ ಆಫ್‌ ವ್ಯಾಲುವೇಷನ್‌ ಪತ್ರಿಕೆ ಪೂರೈಸಿದ್ದರಿಂದಲೇ ಎಡವಟ್ಟು- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಅಂತಿಮ ವರ್ಷದ ವಾಣಿಜ್ಯ ವಿಭಾಗದ ಇ-ಕಾಮರ್ಸ್‌ ಪತ್ರಿಕೆಗೆ ಮಂಗಳವಾರ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ನಡೆಯಬೇಕಿದ್ದ 6ನೇ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಬದಲಿಗೆ ಬೋರ್ಡ್‌ ಆಫ್‌ ಎಕ್ಸಾಮಿನೇಷನ್‌ (ಬಿಒಇ) ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಸ್ಕೀಂ ಆಫ್‌ ವ್ಯಾಲುವೇಷನ್‌ ಪತ್ರಿಕೆ ನೀಡಿದ್ದರಿಂದ ಪರೀಕ್ಷೆ ಮುಂದೂಡಲಾಗಿದೆ.

ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ 15 ಪದವಿ ಕಾಲೇಜುಗಳ ಅಂತಿಮ ವರ್ಷದ ವಾಣಿಜ್ಯ ವಿಭಾಗದ ಸುಮಾರು 500-600 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ತಮ್ಮದಲ್ಲದ ತಪ್ಪಿಗೆ, ಇ-ಕಾಮರ್ಸ್‌ ಪರೀಕ್ಷೆ ಮುಂದಿನ ದಿನಾಂಕವನ್ನು ಎದುರು ನೋಡಬೇಕಾದ ಪರಿಸ್ಥಿತಿ ಸಿಲುಕಿದ್ದಾರೆ.

ದಾವಿವಿ ಅಂತಿಮ ವರ್ಷದ ವಾಣಿಜ್ಯ ವಿದ್ಯಾರ್ಥಿಗಳಿಗೆ 6ನೇ ಸೆಮಿಸ್ಟರ್‌ನ ಇ-ಕಾಮರ್ಸ್ ಪತ್ರಿಕೆಗೆ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿತ್ತು. ಆದರೆ, ವಿವಿಯ ಬೋರ್ಡ್ ಆಫ್‌ ಎಕ್ಸಾಮಿನೇಷನ್‌ನಿಂದ ಪ್ರಶ್ನೆಪತ್ರಿಕೆಗಳು ಸೀಲ್ ಆಗಿ, ಮುಚ್ಚಿದ ಲಕೋಟೆಯಲ್ಲಿ ಕಾಲೇಜುಗಳಿಗೆ ತಲುಪಿಸಲಾಗಿತ್ತು. ಆದರೆ, ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯೆಂದು ಕೈಗಿಟ್ಟರೆ, ಅದು ಸ್ಕೀಂ ಆಫ್ ವ್ಯಾಲ್ಯುವೇಷನ್‌ ಪತ್ರಿಕೆಗಳಾಗಿತ್ತು. ಈ ಅಚಾತುರ್ಯ ಕಂಡ ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಕ್ಷಣವೇ ವಿಷಯವನ್ನು ದಾವಣಗೆರೆ ವಿವಿ ಪರೀಕ್ಷಾಂಗ ಕುಲಸಚಿವರ ಗಮನಕ್ಕೆ ತಂದಿದ್ದಾರೆ.

ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ 15 ಪದವಿ ಕಾಲೇಜುಗಳಲ್ಲಿ ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಶುರುವಾಗಿತ್ತು. ಆದರೆ, ಪದವಿ ವಿದ್ಯಾರ್ಥಿಗಳು ತಮಗೆ ಪ್ರಶ್ನೆಪತ್ರಿಕೆ ಮಾತ್ರವಲ್ಲದೇ, ಉತ್ತರದ ಸಮೇತ ಪ್ರಶ್ನೆಪತ್ರಿಕೆ ಕೈಗೆ ಬಂದಿದ್ದನ್ನು ಕಂಡು ಒಂದು ಕ್ಷಣ ಅವಕ್ಕಾದರು. ಪ್ರಶ್ನೆಗೆ ಉತ್ತರವೂ ಸಿದ್ಧವಾಗಿ ಕೊಟ್ಟರೆ, ಹಗಲು-ರಾತ್ರಿ ಓದಿ, ಬರೆದು, ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಗೆ ಬಂದ ನಾವೇನು ಮಾಡಬೇಕೆಂಬ ಗೊಂದಲ ಸಹಜವಾಗಿಯೇ ವಿದ್ಯಾರ್ಥಿಗಳಿಗೂ ಕಾಡಿತ್ತು.

ಬಿಒಇ ಅಧಿಕಾರಿ, ಸಿಬ್ಬಂದಿ ಎಡವಟ್ಟಿನಿಂದ ಆದ ಗಂಭೀರ ಪ್ರಮಾದವನ್ನು ತಕ್ಷಣವೇ ದಾವಿವಿ ಗಮನಕ್ಕೆ ತಂದಿದ್ದರಿಂದ ಎಲ್ಲ ಸ್ಕೀಂ ಪತ್ರಿಕೆಗಳನ್ನು ವಾಪಸ್‌ ಪಡೆಯಲಾಯಿತು. ಇಂದು ನಡೆಯಬೇಕಿದ್ದ ದಾವಣಗೆರೆ ವಿವಿ ಇ-ಕಾಮರ್ಸ್‌ನ ಪರೀಕ್ಷೆ ರದ್ದುಪಡಿಸಲಾಯಿತು. ಅಲ್ಲದೇ, ಇ-ಕಾಮರ್ಸ್‌ ಪರೀಕ್ಷೆ ಮುಂದೂಡಲಾಗಿದೆ ಎಂಬುದಾಗಿಯೂ ಘೋಷಿಸಲಾಯಿತು.

ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ದಾವಿವಿಗೆ ಒಳಪಡುವ ಒಟ್ಟು 90 ಕಾಲೇಜು ಇವೆ. ಈ ಪೈಕಿ 15 ಕಾಲೇಜುಗಳಲ್ಲಿ ಸ್ಕೀಂ ಆಫ್ ವ್ಯಾಲುವೇಷನ್‌ ಪತ್ರಿಕೆಗಳು ವಿದ್ಯಾರ್ಥಿಗಳ ಕೈಗೆ ತಲುಪಿದ್ದರಿಂದ ಇಷ್ಟೆಲ್ಲಾ ಗೊಂದಲ ಏರ್ಪಟ್ಟಿದೆ. ದಾವಣಗೆರೆ ವಿವಿ ಪ್ರಶ್ನೆಪತ್ರಿಕೆಗಳನ್ನು ಸೆಟ್ ಮಾಡಿದ ನಂತರ ಅವುಗಳನ್ನು ಪ್ರಿಂಟ್ ಮಾಡಿಸಲು ಬೋರ್ಡ್ ಆಫ್‌ ಎಕ್ಸಾಮಿನೇಷನ್‌ಗೆ ನೀಡುತ್ತದೆ. ಪ್ರಶ್ನೆಪತ್ರಿಕೆ ಜೊತೆಗೆ ಮೌಲ್ಯಮಾಪನ ಮಾಡುವ ಬೋಧಕರಿಗೂ ಸ್ಕೀಂ ಆಫ್‌ ವ್ಯಾಲ್ಯುವೇಷನ್‌ ಸಹ ಮುಂಚಿತವಾಗಿ, ಪ್ರಶ್ನೆಪತ್ರಿಕೆ ಜೊತೆಗೆ ಮಾಡಿಸಿದ್ದೇ ಇಷ್ಟೆಲ್ಲಾ ಗೊಂದಲ, ಎಡವಟ್ಟುಗಳಿಗೆ ಕಾರಣ ಎನ್ನಲಾಗುತ್ತಿದೆ.

ವಿವಿ ವ್ಯಾಪ್ತಿಯ ಎರಡೂ ಜಿಲ್ಲೆಯಲ್ಲಿ ಇ-ಕಾಮರ್ಸ್‌ ಪರೀಕ್ಷೆ ಮುಂದೂಡಲಾಗಿದೆ. ಬಿಒಇ ಅಧಿಕಾರಿ, ಸಿಬ್ಬಂದಿ ಗೊಂದಲದಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದ್ದರಿಂದ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಾಲಕರೂ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆಗಿರುವ ಪ್ರಮಾದವನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಶ್ನೆಪತ್ರಿಕೆ ಸಿದ್ಧಗೊಂಡ ನಂತರ ಮುಚ್ಚಿದ ಲಕೋಟೆಯಲ್ಲಿ ಸೀಲ್ ಮಾಡಲಾದ ಪ್ರಶ್ನೆಪತ್ರಿಕೆಗಳ ಕವರ್‌ ಕಳಿಸುವ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಪರೀಕ್ಷೆ ಮುಂದೂಡಬೇಕಾದ ಸ್ಥಿತಿ ಬಂದೊದಗಿದೆ ಎಂದು ಹೇಳಲಾಗಿದೆ.

- - -

ಕೋಟ್‌ ದಾವಣಗೆರೆ ವಿಶ್ವವಿದ್ಯಾನಿಲಯದ ದಾವಿವಿ ಬಿ.ಕಾಂ. ಅಂತಿಮ ವರ್ಷದ ಇ-ಕಾಮರ್ಸ್ ಪತ್ರಿಕೆ ಪರೀಕ್ಷೆ ಆ.6ರಂದು ನಡೆಯಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ತೊಂದರೆಯಾದ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದೆ. ಮುಂದೂಡಿದ ಪರೀಕ್ಷೆಯ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು. ಅಂತಿಮ ವರ್ಷದ ಇ-ಕಾಮರ್ಸ್‌ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಗೆ ದಾವಿವಿ ವಿಷಾದಿಸುತ್ತದೆ

- ಪ್ರೊ.ಸಿ.ಕೆ.ರಮೇಶ, ಪರೀಕ್ಷಾಂಗ ಕುಲಸಚಿವ, ದಾವಿವಿ

- - - -6ಕೆಡಿವಿಜಿ3, 4: ದಾವಣಗೆರೆ ತಾಲೂಕು ತೋಳಹುಣಸೆ ಬಳಿಯ ಶಿವಗಂಗೋತ್ರಿಯ ದಾವಣಗೆರೆ ವಿವಿಯ ದೃಶ್ಯ.

-6ಕೆಡಿವಿಜ5, 6: ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಮಂಗಳವಾರ ನಡೆದ ಇ-ಕಾಮರ್ಸ್‌ ಪರೀಕ್ಷೆಯಲ್ಲಿ 6ನೇ ಸೆಮಿಸ್ಟರ್‌ನ ಪ್ರಶ್ನೆಪತ್ರಿಕೆ ಬದಲಿಗೆ ಸ್ಕೀಂ ಆಫ್ ವ್ಯಾಲುವೇಷನ್ ಪತ್ರಿಕೆ ನೀಡಿರುವುದು.

Share this article