ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ವೈಯಕ್ತಿಕ ಸಾಮಾಗ್ರಿ ವಿತರಣೆ

KannadaprabhaNewsNetwork | Published : Apr 17, 2025 12:06 AM

ಸಾರಾಂಶ

ಚಳ್ಳಕೆರೆಯ ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ಜಿಪಂ ಸಿಇಒ ಸೋಮಶೇಖರ್ ಸ್ವಂತ ಖರ್ಚಿನಲ್ಲಿ ವಿತರಿಸಿರುವ ಸಾಮಾಗ್ರಿ.

ಜಿಪಂ ಸಿಇಒ ಎಸ್.ಜೆ ಸೋಮಶೇಖರ್ ರಿಂದ ವೈಯುಕ್ತಿಕ ಉಳಿತಾಯದ ಹಣ ವ್ಯಯಕನ್ನಡ ಪ್ರಭವಾರ್ತೆ ಚಳ್ಳಕೆರೆ

ಚಳ್ಳಕೆರೆಯ ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಮ್ಮ ದುಡಿಮೆಯ ಉಳಿತಾಯದ ವೈಯಕ್ತಿಕ ಹಣದಿಂದ ಸುಮಾರು 1.5 ಲಕ್ಷ ರು.ಗೂ ಹೆಚ್ಚು ಮೊತ್ತದ ಸಾಮಾಗ್ರಿ ಖರೀದಿಸಿ ಒದಗಿಸಿದ್ದಾರೆ. ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡ ಮುಖ್ಯ ವಾಹಿನಿಗೆ ಬರುವಂತಾಗಲು ಶ್ರಮ ವಹಿಸುವ ಮೂಲಕ, ಇಂತಹ ಮಕ್ಕಳಿಗೆ ಆಸರೆಯಾಗಿದ್ದಾರೆ.

ಕಿವುಡ ಹಾಗೂ ಮೂಕ ಮಕ್ಕಳು, ಮಾನಸಿಕ ಆರೋಗ್ಯ ವೈಕಲ್ಯ ಹೊಂದಿರುವಂತಹ ಮಕ್ಕಳು ಸೇರಿದಂತೆ ಶಾಲೆಗೆ ಹಾಜರಾಗಲು ಸಾಧ್ಯವಾಗದ ವಿವಿಧ ಬಗೆಯ (ತೀವ್ರ ನ್ಯೂನ್ಯತೆಯುಳ್ಳ) ಮಕ್ಕಳಿಗೆ ಮನೆಯಲ್ಲಿಯೇ ತಮಗೆ ಅವಶ್ಯಕತೆಯಿರುವ ದೈನಂದಿನ ಕೌಶಲ್ಯಗಳ ತರಬೇತಿ ಹಾಗೂ ಫೀಜಿಯೋಥೆರಪಿ ಸೇವೆಯನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಗೃಹಾಧಾರಿತ ಶಿಕ್ಷಣವಾಗಿದೆ. ಇಂತಹ ಮಕ್ಕಳ ಶಿಕ್ಷಣಕ್ಕಾಗಿ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಶೋಧನಾ ಸಂಸ್ಥೆ ಶಿಫಾರಸ್ಸು ಮಾಡಿದೆ.

ಈ ರೀತಿ ಶಿಫಾರಸ್ಸು ಮಾಡಿರುವಂತಹ ಸಾಮಗ್ರಿಗಳನ್ನು ಜಿಪಂ ಸಿಇಒ ಸೋಮಶೇಖರ್ ಚಳ್ಳಕೆರೆಯ ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ಪೂರೈಕೆ ಮಾಡಿಸಿದ್ದಾರೆ. ಶೀಘ್ರದಲ್ಲಿ ಈ ಕೇಂದ್ರವನ್ನು ಚಳ್ಳಕೆರೆ ಶಾಸಕರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.

ಗೃಹಾಧಾರಿತ ಶಿಕ್ಷಣ ಕೇಂದ್ರದಲ್ಲಿ ದಾಖಲಾಗಿರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಫಿಜಿಯೋಥೆರಪಿ ಮತ್ತು ದೈನಂದಿನ ಕೌಶಲ್ಯಗಳನ್ನು ಅಭ್ಯಾಸ ಮಾಡಿಸಿ ಈ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲಾ ತಾಲೂಕು ಕೇಂದ್ರದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರಗಳನ್ನು ಸಮನ್ವಯ ಶಿಕ್ಷಣ ಯೋಜನೆಯಡಿ ಪ್ರಾರಂಭಿಸಿದ್ದು, ಇಂತಹ ಮಕ್ಕಳಿಗೆ ಸರ್ಕಾರದಿಂದ ತಲಾ 2 ಲಕ್ಷದಂತೆ ಅನುದಾನ ನೀಡಲಾಗುತ್ತಿದೆ.

ಚಳ್ಳಕೆರೆ ತಾಲೂಕಿನ 49 ಮಕ್ಕಳಿಗೆ ಸಮನ್ವಯ ಶಿಕ್ಷಣ ನೀಡಲಾಗುತ್ತಿದ್ದು, ಈ ಕೇಂದ್ರಕ್ಕೆ ಕಲಿಕೋಪಕರಣ ಮತ್ತು ಫಿಜಿಯೋಥೆರಪಿ ಒಟ್ಟು 56 ಸಾಮಗ್ರಿಗಳು ಈ ತಾಲೂಕಿಗೆ ಅವಶ್ಯಕತೆ ಇದೆ ಎಂದು ತಿಳಿಸಿದಾಗ ಕೂಡಲೇ ಜಿಪಂ ಸಿಇಒ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಚಳ್ಳಕೆರೆ ಗೃಹಧಾರಿತ ಶಿಕ್ಷಣ ಕೇಂದ್ರಕ್ಕೆ ಸಾಮಗ್ರಿಗಳನ್ನು ಖರೀದಿಸಿ ಕೊಡಿಸುವುದಾಗಿ ತಿಳಿಸಿದ್ದರು. ಕೂಡಲೆ ಇವುಗಳನ್ನು ತರಿಸಲು ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದರು.

ಅದರಂತೆ ಚಳ್ಳಕೆರೆಯ ಗೃಹಾಧಾರಿತ ಶಿಕ್ಷಣ ಕೇಂದ್ರಕ್ಕೆ ಸುಮಾರು 56 ಬಗೆಯ ಸಾಮಗ್ರಿಗಳನ್ನು ಜಿಪಂ ಸಿಇಒ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ಈ ಕೇಂದ್ರಕ್ಕೆ ನೀಡಿದ್ದಾರೆ. ಮಕ್ಕಳ ಬಳಕೆಗೆ ಮತ್ತು ಕಲಿಕೆಗೆ ಈ ಕೇಂದ್ರದಲ್ಲಿರುವ ಸೌಲಭ್ಯಗಳು ಮತ್ತು ಮಗುವಿನ ವಿಕಲತೆಯ ಪ್ರಮಾಣ ಕಡಿಮೆಯಾಗಿ ಜೀವನ ಕೌಶಲ್ಯಗಳು ಸುಧಾರಣೆಯಾಗಬೇಕು, ಅವರನ್ನು ಮುಖ್ಯ ವಾಹಿನಿಗೆ ತರಲು ಇಲ್ಲಿನ ಶಿಕ್ಷಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.

Share this article