ರಾತ್ರಿ 8 ರವರೆಗೂ ಪಡಿತರ ವಿತರಣೆ

KannadaprabhaNewsNetwork |  
Published : Dec 09, 2025, 12:15 AM IST

ಸಾರಾಂಶ

ಉದ್ಯೋಗಸ್ಥರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಗಳನ್ನು ರಾತ್ರಿ 8 ಗಂಟೆಯವರೆಗೂ ತೆರೆದಿರಲು ಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಉದ್ಯೋಗಸ್ಥರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಗಳನ್ನು ರಾತ್ರಿ 8 ಗಂಟೆಯವರೆಗೂ ತೆರೆದಿರಲು ಕ್ರಮ ಕೈಗೊಳ್ಳಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಅವರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.

ಜಿಲ್ಲೆಯ ಗುಬ್ಬಿ ತಾಲೂಕು ಜಿ.ಹೊಸಹಳ್ಳಿ ಗ್ರಾಮದ ಸಮುದಾಯಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉದ್ಯೋಗಸ್ಥ ಮಹಿಳೆಯರು / ಪುರುಷರು ಸಂಜೆ 6 ಗಂಟೆಯೊಳಗೆ ಪಡಿತರ ಧಾನ್ಯವನ್ನು ಪಡೆಯಲು ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ರಾತ್ರಿ 8 ಗಂಟೆಯವರೆಗೂ ತೆರೆದಿರಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಡಿತರ ಚೀಟಿ ಹೊಂದಿರುವ ಗ್ರಾಹಕರ ಕುಂದು-ಕೊರತೆಗಳನ್ನು ಬಗೆಹರಿಸಲು ಜಿಲ್ಲೆಯ ಎಲ್ಲಾ ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಪಡಿತರ ಗ್ರಾಹಕರು ಕುಂದು-ಕೊರತೆಗಳನ್ನು ಸಕಾಲದಲ್ಲಿ ಬಗೆಹರಿಸಬೇಕು. ಪಡಿತರ ಚೀಟಿದಾರರು ಕುಂದು-ಕೊರತೆಗಳ ನಿವಾರಣೆಗಾಗಿ ಜಿಲ್ಲಾ ಕೇಂದ್ರ ತುಮಕೂರಿಗೆ ಬರುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಅನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಪಡಿತರ ವಿತರಣೆಯಲ್ಲಿ ತೂಕ ವ್ಯತ್ಯಾಸ, ಬಯೋಮೆಟ್ರಿಕ್ ಹೊಂದಾಣಿಕೆಯಾಗದಿರುವುದು, ಪಡಿತರ ಚೀಟಿ ರದ್ದಾಗಿರುವುದು. ಅನರ್ಹರನ್ನು ಪಡಿತರ ಚೀಟಿಯಿಂದ ಕೈಬಿಡುವುದು, ಪಡಿತರ ಚೀಟಿಗೆ ಹೊಸದಾಗಿ ಕುಟುಂಬ ಸದಸ್ಯರನ್ನು ಸೇರ್ಪಡೆ ಮಾಡುವುದು ಸೇರಿದಂತೆ ಹಲವಾರು ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದ ಅವರು, ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿ ಪಡಿತರ ಧಾನ್ಯ ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಏಕ ಸದಸ್ಯರಾಗಿದ್ದು, 75 ವರ್ಷ ತುಂಬಿರುವ ವಯೋವೃದ್ಧರಿಗೆ ಅವರ ಮನೆ ಬಾಗಿಲಿಗೆ ಪಡಿತರ ಧಾನ್ಯವನ್ನು ವಿತರಣೆ ಮಾಡಲು ಸರ್ಕಾರವು ಹೊಸದಾಗಿ ‘ಅನ್ನ ಸುವಿಧ’ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 75 ವರ್ಷ ಮೀರಿದ 12 ಸಾವಿರ ಪಡಿತರ ಚೀಟಿದಾರರಿದ್ದು, ಈಗಾಗಲೇ ‘ಅನ್ನ ಸುವಿಧ’ ಯೋಜನೆಯಲ್ಲಿ 2 ಸಾವಿರ ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ಧಾನ್ಯವನ್ನು ವಿತರಣೆ ಮಾಡಲಾಗುತ್ತಿದೆ. ಪ್ರಸ್ತುತ ಎದುರಾಗಿರುವ ಸರ್ವ ಸಮಸ್ಯೆಯು ಮುಂದಿನ ತಿಂಗಳೊಳಗಾಗಿ ಸರಿಪಡಿಸಲಾಗುವುದು ಎಂದ ಅವರು, ಸ್ಥಳದಲ್ಲಿಯೇ ನೀಲಮ್ಮ ಎಂಬ 75 ವರ್ಷ ತುಂಬಿದ ವಯೋವೃದ್ಧ ಮಹಿಳೆಗೆ ಬಯೋಮೆಟ್ರಿಕ್ ವಿನಾಯತಿ ನೀಡಿ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಲು ಆಹಾರ ನಿರೀಕ್ಷಕರಾದ ವೀಣಾ ಅವರಿಗೆ ಸೂಚನೆ ನೀಡಿದರು.

ಅನರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆ ಮಾಡುತ್ತಿರುವುದು ಕಂಡು ಬಂದರೆ ಸಂಬಂಧಿಸಿದ ಆಹಾರ ನಿರೀಕ್ಷಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರಿಗನುಗುಣವಾಗಿ ಕಡ್ಡಾಯ ಪಡಿತರ ಧಾನ್ಯ ವಿತರಣೆಯಾಗಬೇಕು ಎಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ತುರ್ತು ಆರೋಗ್ಯ ಸಮಸ್ಯೆ ಹಾಗೂ ಕಡು ಬಡತನದ ಹಿನ್ನೆಲೆಯಲ್ಲಿ 60 ವರ್ಷದ ಲಕ್ಷ್ಮಮ್ಮ, 34ವರ್ಷದ ಶಬಾನ, 26 ವರ್ಷದ ಸುಮನ್ ಅವರಿಗೆ ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡಲಾಯಿತು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರಚೀಟಿದಾರರ ಬಯೋಮೆಟ್ರಿಕ್ ಹೊಂದಾಣಿಕೆಯಾಗದಿದ್ದಲ್ಲಿ ಐರಿಸ್ ಡಿವೈಸ್ ಅನ್ನು ಅಳವಡಿಸಿ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆಗೆ ಅನುಕೂಲ ಮಾಡಿಕೊಡಬೇಕು. ಜಿ. ಹೊಸಹಳ್ಳಿಯ ನಿವಾಸಿ 75 ವರ್ಷ ಮೀರಿದ ಎಚ್.ಎಂ. ಚಂದ್ರಶೇಖರ್ ಅವರ ಮನೆಗೆ ತೆರಳಿ ಜಿಲ್ಲಾಧಿಕಾರಿ ಪಡಿತರ ಧಾನ್ಯವಿತರಿಸಿದರು.

ನಂತರ ಸರ್ಕಾರಿ ನ್ಯಾಯಬೆಲೆ ಅಂಗಡಿ ಹಾಗೂ ಸರ್ಕಾರಿ ಶಾಲೆಯ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್, ತಹಸೀಲ್ದಾರ್ ಆರತಿ, ಉಪ ತಹಶೀಲ್ದಾರ್ ಯಶೋಧಮ್ಮ, ಆಹಾರ ನಿರೀಕ್ಷಕ ಸಿದ್ದೇಗೌಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕವಿತ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಶ್ರಯ ಯೋಜನೆಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತ ಕಟ್ಟಡ
ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ