ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಎಂದು ಬೆಳಗಾವಿಯ ಗಾಂಧಿ ಭವನದಿಂದ ಸುವರ್ಣ ವಿಧಾನಸೌಧದವರೆಗೆ ಬಲಗೈಯಲ್ಲಿ ಚನ್ನಮ್ಮನ ಧ್ವಜ, ಎಡಗೈಗೆ ಹಾಗೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಮೌನ ಪಥ ಸಂಚಲನ ನಡೆಸಲಿದ್ದೇವೆ. ಈ ಮೂಲಕ ಲಿಂಗಾಯತ ಪಂಚಮಸಾಲಿ ಸಮಾಜದ ಮೇಲೆ ಆಗಿರುವ ದೌರ್ಜನ್ಯವನ್ನು ಖಂಡಿಸುತ್ತೇವೆ. ಯಾರು ಎಷ್ಟೇ ಹತ್ತಿಕ್ಕುವ ಪ್ರಯತ್ನ ಮಾಡಿದರೂ ನಾವು ಸಂವಿಧಾನದ ಪ್ರಕಾರ ಹಕ್ಕು ಪಡೆದುಕೊಳ್ಳುತ್ತೇವೆ. ಹಾಗಾಗೀ ಈ ಹೋರಾಟದಲ್ಲಿ ರಾಜ್ಯದ ಪಂಚಮಸಾಲಿ, ಮಲೆಗೌಡ, ಗೌಡಲಿಂಗಾಯತ, ದೀಕ್ಷಾಲಿಂಗಾಯತ ಸೇರಿದಂತೆ ಸಮಾಜದ ಎಲ್ಲ ಜನತೆ ಭಾಗವಹಿಸಬೇಕು ಎಂದು ಕರೆ ನೀಡಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ 2021 ಜನವರಿ 14ರಂದು ಕೂಡಲಸಂಗಮದಿಂದ ಆರಂಭವಾದ ಚಳವಳಿ ಐದು ವರ್ಷಗಳಿಂದ ನಡೆದಿದೆ. ನಾವು ಈ ಹಿಂದೆ ಹಲವು ಬಾರಿ ಹೋರಾಟ ಮಾಡಿದಾಗ ಯಾರೂ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಮುಂದೆ ನಿವೇದನೆ ಮಾಡಿದಾಗ ಸ್ಪಂದನೆ ಮಾಡಲಿಲ್ಲ. ಹಾಗಾಗೀ ಕಳೆದ ವರ್ಷ ಚಳಿಗಾಲದ ಅಧಿವೇಶನದಲ್ಲಿ ಹೋರಾಟಕ್ಕೆ ಮುಂದಾಗ ಸಿಎಂ ಅವರು ಬಂದು ಮನವಿ ಸ್ವೀಕರಿಸಲಿಲ್ಲ. ನಾವು ಶಾಂತವಾಗಿ ಹೋರಾಟ ಮಾಡುತ್ತಿರುವಾಗ ಏಕಾಏಕಿ ಲಾಠಿಚಾರ್ಜ್ ಮಾಡಿದರು. ಮೀಸಲಾತಿ ಕೊಡಲು ಇಷ್ಟವಿಲ್ಲದಿದ್ದರೆ ನೇರವಾಗಿ ನಾವು ಕೊಡೋದಿಲ್ಲ, ಹೋರಾಟ ಮಾಡಬೇಡಿ ಎಂದು ಹೇಳಬೇಕಿತ್ತು. ಆದರೆ ಪೊಲೀಸರ ಮೂಲಕ ಲಾಠಿಚಾರ್ಜ್ ಮಾಡಿಸಿದ್ದು, ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಅನೇಕ ಮುಖ್ಯಮಂತ್ರಿಗಳು ಬದಲಾದರೂ ನಮಗೆ ಮೀಸಲಾತಿ ಸಿಕ್ಕಿಲ್ಲ. ಸಿದ್ದರಾಮಯ್ಯಮವರು ಸಿಎಂ ಆಗಿದ್ದು, ನ್ಯಾಯ ಕೊಡಿಸುವ ಬದಲು ಲಾಠಿಚಾರ್ಜ್ ಮಾಡಿಸಿ ಹೋರಾಟವನ್ನೇ ಹತ್ತಿಕ್ಕುವ ಕೆಲಸ ಮಾಡಿದರು. ನಾವು ಸಂವಿಧಾನಾತ್ಮಕ ಹೋರಾಟ ಮಾಡಿದಾಗ ಲಾಠಿ ಪ್ರಹಾರ ಮಾಡಿ ಅನ್ಯಾಯ ಮಾಡಿದರು. ಹಾಗಾಗಿ ಡಿ.10ರಂದು ಬೆಳಗಾವಿಯಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಕರಾಳದಿನವನ್ನು ಮೌನವಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯಿಂದ ಸಮಾಜದ ರೈತರು, ಕೃಷಿಕರು, ಕಾರ್ಮಿಕರು, ಯುವಕರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಸಿದ್ದರಾಮಯ್ಯನವರ ಸರ್ಕಾರ ರಚನೆಯಾಗಲು ಪಂಚಮಸಾಲಿ ಸಮಾಜದ ಕೊಡುಗೆ ಇದ್ದು, ಅದನ್ನು ಪರಿಗಣಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶ್ರೀಶೈಲ ಬುಕ್ಕಣ್ಣಿ, ಸುರೇಶ ಶೇಡಶ್ಯಾಳ, ಈರಣ್ಣ ಹೊಸಟ್ಟಿ, ಉಮೇಶ ಕೌಲಗಿ, ಎಂ.ಟಿ.ಪಾಟೀಲ, ದಾನೇಶ ಅವಟಿ, ನಿಂಗನಗೌಡ ಸೊಲಾಪುರ ಉಪಸ್ಥಿತರಿದ್ದರು.