444 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

KannadaprabhaNewsNetwork |  
Published : Sep 01, 2026, 02:30 AM IST
ಅಮ್ಮಿನಭಾವಿ ನವಗ್ರಾಮದ 444 ಕುಟುಂಬಗಳಿಗೆ ಸೋಮವಾರ ಶಾಸಕ ವಿನಯ ಕುಲಕರ್ಣಿ ಹಕ್ಕು ಪತ್ರ ವಿತರಿಸಿದರು. | Kannada Prabha

ಸಾರಾಂಶ

ಕಳೆದ 40-50 ವರ್ಷಗಳಿಂದ ಗಾಯರಾಣ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಅಮ್ಮಿನಭಾವಿ ನವಗ್ರಾಮದ ನಿವಾಸಿಗಳು ದಾಖಲೆಗಳ ಕೊರತೆಯಿಂದ ಹಲವು ಸರ್ಕಾರಿ ಸೌಲಭ್ಯ ಹಾಗೂ ಆಸ್ತಿಗೆ ಸಂಬಂಧಿಸಿದ ಕಾನೂನುಬದ್ಧ ಹಕ್ಕುಗಳಿಂದ ವಂಚಿತರಾಗಿದ್ದರು.

ಧಾರವಾಡ:

ದಶಕಗಳಿಂದ ಸ್ವಂತ ಸೂರು ಇದ್ದರೂ ಆ ಮನೆಯ ಮೇಲೆ ಕಾನೂನುಬದ್ಧ ಹಕ್ಕಿಲ್ಲದೆ ಆತಂಕದಲ್ಲಿ ಬದುಕುತ್ತಿದ್ದ ಅಮ್ಮಿನಭಾವಿ ನವಗ್ರಾಮದ 444 ಕುಟುಂಬಗಳಿಗೆ ಸೋಮವಾರ ಶಾಸಕ ವಿನಯ ಕುಲಕರ್ಣಿ ಹಕ್ಕುಪತ್ರ ವಿತರಿಸಿದರು. ಈ ಮೂಲಕ ದಶಕಗಳ ಕನಸಿಗೆ ಕಾನೂನು ಬದ್ಧ ಮುದ್ರೆ ಒತ್ತಿದರು.

ಕಳೆದ 40-50 ವರ್ಷಗಳಿಂದ ಗಾಯರಾಣ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಅಮ್ಮಿನಭಾವಿ ನವಗ್ರಾಮದ ನಿವಾಸಿಗಳು ದಾಖಲೆಗಳ ಕೊರತೆಯಿಂದ ಹಲವು ಸರ್ಕಾರಿ ಸೌಲಭ್ಯ ಹಾಗೂ ಆಸ್ತಿಗೆ ಸಂಬಂಧಿಸಿದ ಕಾನೂನುಬದ್ಧ ಹಕ್ಕುಗಳಿಂದ ವಂಚಿತರಾಗಿದ್ದರು. ಈ ದೀರ್ಘ ಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ವಿನಯ ಕುಲಕರ್ಣಿ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದರು. ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರವನ್ನು ಕಂದಾಯ ಸಚಿವರ ಗಮನಕ್ಕೆ ನೇರವಾಗಿ ತಂದು, 94-ಡಿ ನಿಯಮದಡಿ ಉಪಕಂದಾಯ ಗ್ರಾಮವನ್ನಾಗಿ ರಚಿಸುವ ಪ್ರಕ್ರಿಯೆಗೆ ವೇಗ ನೀಡುವಂತೆ ಒತ್ತಾಯಿಸಿದ್ದರು.

ಇದರ ಫಲವಾಗಿ ಗ್ರಾಮದ ರಿ.ಸ.ನಂ. 1147/ಅ ಮತ್ತು 1148ರ ಒಟ್ಟು 45 ಎಕರೆ 9 ಗುಂಟೆ ಪ್ರದೇಶದಲ್ಲಿದ್ದ ದಾಖಲೆ ರಹಿತ ಜನವಸತಿ ಪ್ರದೇಶಕ್ಕೆ ‘ಅಮ್ಮಿನಭಾವಿ ನವಗ್ರಾಮ’ ಎಂದು ಅಧಿಕೃತ ಮಾನ್ಯತೆ ದೊರೆತಿದೆ. ಅಂತಿಮ ಅಧಿಸೂಚನೆ ಹೊರಬಂದಿದ್ದು, ಇದೀಗ ನಿವಾಸಿಗಳ ಹಲವು ದಶಕಗಳ ನಿರೀಕ್ಷೆ ಸಾಕಾರಗೊಂಡಿದೆ.

ಹಕ್ಕುಪತ್ರ ವಿತರಣೆ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆಯ ತಂತ್ರಾಂಶದಲ್ಲಿ ಫಲಾನುಭವಿಗಳ ಮಾಹಿತಿಯನ್ನು ದಾಖಲಿಸಿ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಸೃಜಿಸಿ ಹಕ್ಕುಪತ್ರ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಪ್ರಕ್ರಿಯೆ ರಾಜ್ಯದಲ್ಲೇ ಗಮನಾರ್ಹ ಮಾದರಿಯಾಗಿದ್ದು, ಹಕ್ಕುಪತ್ರ ಪಡೆದ ಕುಟುಂಬಗಳಿಗೆ ತಮ್ಮ ವಾಸಸ್ಥಳದ ಮೇಲೆ ಕಾನೂನುಬದ್ಧ ಭದ್ರತೆ ದೊರೆತಂತಾಗಿದೆ ಎಂದು ಶಾಸಕ ಕುಲಕರ್ಣಿ ಹೇಳಿದರು.

ಇದೇ ಮಾದರಿಯಲ್ಲಿ ತಾಲೂಕಿನ 13 ಉಪಕಂದಾಯ ಗ್ರಾಮಗಳ ಒಟ್ಟು 1,623 ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 40–50 ವರ್ಷಗಳಿಂದ ಸ್ವಂತ ಮನೆಯಲ್ಲೇ ವಾಸಿಸುತ್ತಿದ್ದರೂ, ಆ ಮನೆಯ ಮೇಲೆ ಕಾನೂನು ಬದ್ಧ ಹಕ್ಕಿಲ್ಲದೆ ಬದುಕುತ್ತಿದ್ದ ಕುಟುಂಬಗಳ ನೋವನ್ನು ಹತ್ತಿರದಿಂದ ಅರಿತಿದ್ದೇನೆ. ಅಮ್ಮಿನಭಾವಿ ನವಗ್ರಾಮದ ಜನರ ದಶಕಗಳ ಸಮಸ್ಯೆಗೆ ಪರಿಹಾರ ದೊರೆತಿರುವುದು ಅತ್ಯಂತ ಸಂತಸದ ಸಂಗತಿ. ಹಕ್ಕುಪತ್ರವೆಂದರೆ ಕೇವಲ ಒಂದು ದಾಖಲೆ ಅಲ್ಲ, ಅದು ಬಡ ಕುಟುಂಬಗಳ ಸ್ವಾಭಿಮಾನ, ಭದ್ರತೆ ಮತ್ತು ಭವಿಷ್ಯಕ್ಕೆ ದೊರೆತಿರುವ ಕಾನೂನುಬದ್ಧ ಭರವಸೆ ಎಂದು ಹೇಳಿದರು.

ಈ ವೇಳೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ವೈಶಾಲಿ ಕುಲಕರ್ಣಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ, ತಹಸೀಲ್ದಾರ್‌ ಸಚ್ಚಿದಾನಂದ, ತಾಪಂ ಆಡಳಿತಾಧಿಕಾರಿ ಗಂಗಾಧರ ಕಂದಕೂರ, ಕೃಷಿ ಅಧಿಕಾರಿ ರಾಜಶೇಖರ ಅಣಗೌಡರ, ಮುಖಂಡರಾದ ಈಶ್ವರ ಶಿವಳ್ಳಿ, ಪಾರಿಸ್ ಪತ್ರಾವಳಿ, ಸದಾನಂದ ಮುಂದಿನಮನಿ, ರಾಜೇಶ ಚಹ್ವಾಣ ಸೇರಿದಂತೆ ಗ್ರಾಮಸ್ಥರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವರ ಭರವಸೆ, ಧರಣಿ ಅಂತ್ಯಗೊಳಿಸಿದ ಗುತ್ತಿಗೆದಾರರು
ಇಸ್ಲಾಂ ಶ್ರೇಷ್ಠ ಧರ್ಮ ಹೇಳಿಕೆ ದುರದೃಷ್ಟಕರ; ಮಾಜಿ ಶಾಸಕ ರೆಡ್ಡಿ ಬೇಸರ