ಸಮುದಾಯದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌-ಬಿಜೆಪಿ ಗೂಂಡಾಗಿರಿ

KannadaprabhaNewsNetwork |  
Published : Sep 01, 2026, 02:30 AM IST
ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೆ. ನೀಲಾ ಮಾತನಾಡಿದರು.  | Kannada Prabha

ಸಾರಾಂಶ

ಪ್ರಕಾಶ ರಾಜ್‌ ಅವರ ಕುರಿತಾಗಿ ವಿರೋಧಗಳಿದ್ದರೆ ಅದನ್ನು ಪ್ರತಿಭಟಿಸಲಿ. ಆದರೆ, ಸಮುದಾಯ ಪ್ರಜಾಪ್ರಭುತ್ವ ನೆಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ನುಗ್ಗಿ, ಶಾಂತಿ ಕಾಪಾಡಲು ಎಷ್ಟೆಲ್ಲ ಮನವಿ ಮಾಡಿದರೂ ಹಾಳು ಮಾಡಿದ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಗೆ ಕಡಿವಾಣ ಹಾಕಬೇಕಿದೆ ಎಂದು ಚಿಂತಕಿ ಕೆ. ಲೀಲಾ ಹೇಳಿದರು.

ಧಾರವಾಡ:

ಸಮುದಾಯ-50ರ ಸಂಭ್ರಮೋತ್ಸವದಲ್ಲಿ ಚಿತ್ರನಟ, ವಿಚಾರವಾದಿ ಪ್ರಕಾಶ ರಾಜ್ ಅವರನ್ನು ಅಪಮಾನಿಸಿ ಅವರ ಚಿತ್ರವಿದ್ದ ಬ್ಯಾನರ್‌ಗಳ ಮೇಲೆ ಮಸಿ ಎಸೆದು, ಸಭಾಭವನದೊಳಗೆ ಗದ್ದಲ ಎಬ್ಬಿಸಿದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಗೂಂಡಾಗಿರಿ ಕ್ರಮವನ್ನು ನಾಗರಿಕ ಸಮಾಜ ಸಹಿಸುವುದಿಲ್ಲ ಎಂದು ಚಿಂತಕಿ ಕೆ. ನೀಲಾ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ ರಾಜ್‌ ಅವರ ಕುರಿತಾಗಿ ವಿರೋಧಗಳಿದ್ದರೆ ಅದನ್ನು ಪ್ರತಿಭಟಿಸಲಿ. ಆದರೆ, ಸಮುದಾಯ ಪ್ರಜಾಪ್ರಭುತ್ವ ನೆಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ನುಗ್ಗಿ, ಶಾಂತಿ ಕಾಪಾಡಲು ಎಷ್ಟೆಲ್ಲ ಮನವಿ ಮಾಡಿದರೂ ಹಾಳು ಮಾಡಿದ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಗೆ ಕಡಿವಾಣ ಹಾಕದಿದ್ದರೆ ಕರ್ನಾಟಕದಲ್ಲಿ ಸಾಮಾನ್ಯರು ಕಷ್ಟಕ್ಕೆ ಸಿಲುಕುತ್ತಾರೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಯುವ ಜನಾಂಗಕ್ಕೆ ಉತ್ತಮ ಮಾರ್ಗ ತೋರುವ ಬದಲು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರ್ಗಿ ಹುತಾತ್ಮ ದಿನವೇ?:

ಡಾ. ಎಂ.ಎಂ. ಕಲಬುರ್ಗಿ ಅವರು ಇದೇ ಕೋಮುವಾದಿಗಳ ಗುಂಡಿಗೆ ಬಲಿಯಾಗಿ ಹನ್ನೊಂದು ವರ್ಷ ಗತಿಸಿದ ದಿನದಂದೇ ದಾಂಧಲೆ ಎಬ್ಬಿಸಿದ್ದು ಕಾಕತಾಳೀಯವೇನಲ್ಲ. ಶಾಂತಿಯುತ ಕಾರ್ಯಕ್ರಮವನ್ನು ದಾಳಿ ಮಾಡುವ ಮೂಲಕ ಹಾಳು ಮಾಡುವುದು ಖಂಡನೀಯ. ಜತೆಗೆ ಬಿಜೆಪಿ ಶಾಸಕ ಈ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸುವುದು ಬಿಟ್ಟು ಯುವಕರ ಗುಂಪಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಪೊಲೀಸ್‌ ಠಾಣೆಗೆ ಹೋಗಿ ದಾಂಧಲೆ ಎಬ್ಬಿಸಿದವರನ್ನು ಸಮರ್ಥಿಸಿಕೊಂಡಿದ್ದಾರೆ. ಕಾರ್ಯಕ್ರಮ ಆಯೋಜಕರ ಮೇಲೆಯೇ ಪ್ರಕರಣ ಹಾಕುವಂತೆ ಪೊಲೀಸರ್ ಮೇಲೆ ಒತ್ತಾಯ ಹೇರಿರುವುದು ಅಸಂವಿಧಾನಿಕ ನಡೆ. ಸಾಂಸ್ಕೃತಿಕ ಚಟುವಟಿಕೆಗೆ ರಾಜಕೀಯ ಬಣ್ಣ ಹಚ್ಚುವ ಕೆಲಸವನ್ನು ಬೆಲ್ಲದ ಮಾಡಿದ್ದಾರೆ ಎಂದು ಕಿಡಿಕಾರಿದರು.

ಬೆಲ್ಲದ ರಾಜಿನಾಮೆ ನೀಡಲಿ:

ಆರೂಢ ಪರಂಪರೆಯ, ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಇಂತಹ ಘಟನೆಗೆ ನೇರವಾಗಿ ಶಾಸಕ ಅರವಿಂದ ಬೆಲ್ಲದ ಕಾರಣರು. ಈ ನಗರದಲ್ಲಿ ಕೋಮುವಾದಿಗಳ ಅಟ್ಟಹಾಸ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಬೆಲ್ಲದ ಅವರು ಶಾಸಕರಾಗಿ ಉಳಿಯಲು ಯೋಗ್ಯರಲ್ಲ. ಕೂಡಲೇ ರಾಜಿನಾಮೆ ನೀಡಬೇಕು. ಜತೆಗೆ ಈ ಬಗೆಯ ಕುಕೃತ್ಯ ನಿಲ್ಲಿಸುವ ದಿಕ್ಕಿನಲ್ಲಿ ಪೊಲೀಸ್‌ ಇಲಾಖೆಯು ಕ್ರಮ ವಹಿಸಬೇಕು. ದಾಂಧಲೆ ಎಬ್ಬಿಸಿದವರ ಮೇಲೆ ಕ್ರಮಕೈಕೊಳ್ಳಬೇಕು. ದಾಂಧಲೆಗೆ ಕುಮ್ಮಕ್ಕು ಕೊಟ್ಟವರನ್ನು ಬಂಧಿಸಬೇಕೆಂದು ಆಗ್ರಹಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ, ಮಹೇಶ ಪತ್ತಾರ, ಮೀನಾಕ್ಷಿ ಬಾಳಿ, ಬಿ.ಎನ್. ಪೂಜಾರಿ, ಎ,ಎಂ. ಖಾನ್, ಡಾ.ಶಿವಾನಂದ ಶೆಟ್ಟರ್‌ ಇದ್ದರು.ಆರ್‌ಎಸ್‌ಎಸ್‌ ರಾಷ್ಟ್ರವೇ?

ಸಮುದಾಯದ ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಿದ್ದೇವೆ ಎಂದು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದು, ಆರ್‌ಎಸ್‌ಎಸ್‌ಗೆ ಧಿಕ್ಕಾರ ಎಂದಿದ್ದು ರಾಷ್ಟ್ರವಿರೋಧಿನಾ? ಜೈ ಭೀಮ, ಜೈ ಸಂವಿಧಾನ ಎಂದಿದ್ದು ರಾಷ್ಟ್ರವಿರೋಧಿನಾ? ಪ್ರಜಾಪ್ರಭುತ್ವ ಉಳಿಸಿ ಎಂದಿದ್ದು ರಾಷ್ಟ್ರವಿರೋಧಿನಾ? ಎಂದು ಪ್ರಶ್ನಿಸಿದ ಕೆ. ನೀಲಾ, ಆರ್‌ಎಸ್‌ಎಸ್‌ ರಾಷ್ಟ್ರವೇ. ಲೆಕ್ಕಕೊಡದಿರುವ, ದೇಶದ ವಿಭಜನೆಗೆ ಹುಟ್ಟಿಕೊಂಡಿರುವ ಸಂಘವಿದು. ಅದಕ್ಕಾಗಿ ಧಿಕ್ಕಾರ ಕೂಗಲಾಗಿದೆ. ಇನ್ನು, ಕೇಂದ್ರ ಸರ್ಕಾರದ ಶಿಕ್ಷಣ ಸಚಿವರ ಜಿಲ್ಲೆ ಇದಾಗಿದ್ದು, ಅವರು ಸಹ ಈ ಘಟನೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವರ ಭರವಸೆ, ಧರಣಿ ಅಂತ್ಯಗೊಳಿಸಿದ ಗುತ್ತಿಗೆದಾರರು
ಇಸ್ಲಾಂ ಶ್ರೇಷ್ಠ ಧರ್ಮ ಹೇಳಿಕೆ ದುರದೃಷ್ಟಕರ; ಮಾಜಿ ಶಾಸಕ ರೆಡ್ಡಿ ಬೇಸರ