ಕನ್ನಡಪ್ರಭ ವಾರ್ತೆ ವಿಜಯಪುರ
ಪೂಜ್ಯರನ್ನು ಸರ್ವಾಧ್ಯಕ್ಷ ಸ್ಥಾನ ಅಲಂಕರಿಸುವಂತೆ, ಸಂಘಟಕರನ್ನು, ಸಾಹಿತಿಗಳನ್ನು, ಸಾಹಿತ್ಯಾರಾಧಕರನ್ನು ಒಂದೇ ಸೂರಿನಡಿ ತಂದು ಹೀಗೂ ಸಮ್ಮೇಳನ ಮಾಡಬಹುದು ಎಂಬುದಕ್ಕೆ ೨೦ ನೇ ಕನ್ನಡ ಸಾಹಿತ್ಯ ಸಮ್ಮೇಳನವೇ ಒಂದು ಉದಾಹರಣೆ ಎಂದು ಸಹಕಾರಿ ಧುರೀಣ ರಮೇಶ ಬಿದನೂರ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕಸಾಪ ಜಿಲ್ಲಾ ಘಟಕದಿಂದ ನಡೆದ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಸಾಹಿತ್ಯ ಎಂದರೆ ಅದಕ್ಕೆ ವಿಶಾಲಾರ್ಥವಿದೆ. ಈ ವಿಶಾಲಾರ್ಥದಂತೆ ಎಲ್ಲರನ್ನೂ ಒಂದೇ ಸೂರಿನಡಿ ಕರೆ ತಂದು ಸಮ್ಮೇಳನ ಆಯೋಜಿಸಿರುವುದು ಸಂತೋಷ ತಂದಿದೆ. ಜಿಲ್ಲೆಯಾದ್ಯಂತ ಕನ್ನಡಪರವಾದ ವಾತಾವರಣ, ಸಾಹಿತ್ಯಿಕ ವಾತಾವರಣ ಸೃಷ್ಟಿಸಿ ಮುನ್ನಡೆದಿದೆ ಎಂದರು. ಅತಿಥಿಯಾಗಿದ್ದ ಮಹಿಳಾ ವಿವಿ ಕುಲಸಚಿವ ಡಾ.ವಿ.ವಿ.ಮಳಗಿ ಮಾತನಾಡಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ಅಲ್ಲ, ಹಸನ್ಮುಖಿಪೀರ ಇದ್ದಂತೆ, ನಗುತ್ತಲೇ ಎಲ್ಲವನ್ನೂ ಸಂಘಟಿಸುವ ಜಾಣ್ಮೆ ಅವರಲ್ಲಿದೆ. ನನ್ನ ವಿದ್ಯಾರ್ಥಿಯಾಗಿದ್ದರೂ ಸಹ ಆತನ ಸಾಧನೆಗೆ ನಾನು ಹೆಮ್ಮೆ ಪಡುತ್ತಿರುವೆ. ಕೆಲವೊಂದು ಜ್ಞಾನ ಎಂಬ ದಿವ್ಯ ಸಮುದ್ರದಲ್ಲಿ ಕೆಲವೊಂದು ಪ್ರಮಾದಗಳು ನಡೆದಿರಬಹುದು. ಆದರೆ ಒಳ್ಳೆಯ ಚಿಂತನೆಗಳು ಇಲ್ಲಿ ನಡೆದಿವೆ. ಗೋಷ್ಠಿಗಳು ಸಂಶೋಧನಾತ್ಮಕ ಚಿಂತನೆಗಳಿಂದ ಕೂಡಿದ್ದು ಉಪನ್ಯಾಸಕರು ತುಂಬ ಅಥ೯ಪೂಣ೯ವಾಗಿ ವಿಷಯ ಮಂಡನೆಯಾಗಿದೆ. ಶರಣ ಸಾಹಿತ್ಯ, ದಾಸ ಸಾಹಿತ್ಯ, ಮಹಿಳಾ ಸಾಹಿತ್ಯದ ಕುರಿತು ಅರ್ಥಪೂರ್ಣ ಚಿಂತನ-ಮಂಥನ ನಡೆದಿದೆ ಎಂದು ಅಭಿಪ್ರಾಯಪಟ್ಟರು.ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷರಾಗಿದ್ದ ಚನ್ನಬಸವ ಮಹಾಸ್ವಾಮೀಜಿಗಳು ಜಾನಪದ ಸಾಲುಗಳನ್ನು ಉಲ್ಲೇಖಿಸಿ ಸಮ್ಮೇಳನ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ತಮ್ಮ ಮಾತುಗಳಿಂದ ಪ್ರೋತ್ಸಾಹಿಸಿದರು. ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ ಎಂಬ ಕಿವಿಮಾತು ಹೇಳಿದ್ದು ವಿಶೇಷವಾಗಿತ್ತು. ಕಳೆದ ಎರಡು ದಿನಗಳಿಂದ ಶರಣ ಸಾಹಿತ್ಯ, ದಾಸ ಸಾಹಿತ್ಯ, ಮಹಿಳಾ ಶ್ರೇಯೋಭಿವೃದ್ದಿ ಮೊದಲಾದ ವಿಷಯಗಳ ಕುರಿತು ಚಿಂತಕರು ಬೆಳಕು ತುಂಬಿದರು.