ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯುಗಾದಿ ಸಂಭ್ರಮದ ಜೊತೆ ಜಾನಪದ ಸಂಭ್ರಮ ಏರ್ಪಡಿಸಲಾಗಿದ್ದು, ಕಜಾಪ ಮೂಲಕ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಜನಪದ ಕಲಾವಿದರನ್ನು ಒಂದು ವೇದಿಕೆಗೆ ತಂದು ನಮ್ಮ ಜಿಲ್ಲೆಯ ಕಲೆ, ಕಲಾವಿದರ ಅನಾವರಣದ ಪ್ರಯತ್ನ ಮಾಡುತ್ತ ಬಂದಿದ್ದೇವೆ ಎಂದರು.
ಕಜಾಪ ಸಂಸ್ಥಾಪಕರು, ಹಿರಿಯ ಸಾಹಿತಿಗಳಾದ ನಾಡೋಜ ಡಾ.ಎಚ್.ಎಲ್. ನಾಗೇಗೌಡರ ಆಶಯದಂತೆ ಜಿಲ್ಲೆಯಲ್ಲಿ ಜನಪದ ಕಲೆಯನ್ನು ಉಳಿಸಿ ಬೆಳಸು ಪ್ರಯತ್ನ ನಡೆದಿದೆ. ಎಲ್ಲಾ ತಾಲೂಕು ಸಮಿತಿಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದರು.7ನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಆಯ್ದ 22 ತಂಡಗಳು ಭಾಗವಹಿಸಲಿದ್ದು, ಸೋಮಿನಕೊಪ್ಪ ಊರಬಾಗಿಲಿನಿಂದ ಸಮ್ಮೇಳನ ಸರ್ವಾಧ್ಯಕ್ಷರಾದ ಕೆ. ಯುವರಾಜ್ ಅವರನ್ನು ಎತ್ತಿನ ಬಂಡಿಯ ಮೂಲಕ ಜನಪದ ಕಲಾ ತಂಡಗಳ ಜೊತೆಯಲ್ಲಿ ಅತಿಥಿಗಳು, ಗ್ರಾಮದ ಮುಖಂಡರು, ಸಂಘ ಸಂಸ್ಥೆಗಳು, ಗ್ರಾಮಸ್ಥರ ಜೊತೆಯಲ್ಲಿ ಕನ್ನಡ ಮನಸ್ಸುಗಳ ಒಡಗೂಡಿ ಜಾನಪದ ನಡಿಗೆ ನಡೆಯಲಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ ಜಾನಪದ ನಡಿಗೆಗೆ ಚಾಲನೆ ನೀಡಲಿದ್ದಾರೆ. ಶ್ರೀ ರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷರಾದ ಕಾಂತರಾಜ್ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಲೆನಾಡಿನ ದೀವರ ಸಂಸ್ಕೃತಿಯ ಅನಾವರಣದ ಹಸೆ ಚಿತ್ತಾರ ಪುಸ್ತಕವನ್ನು ಬೆಂಗಳೂರಿನ ಗೀತಾ ಭಟ್ ಪ್ರಕಟಿಸಲಿದ್ದಾರೆ. ಖ್ಯಾತ ಜಾನಪದ ತಜ್ಞ ಡಾ. ಅಪ್ಪಗೆರೆ ತಿಮ್ಮರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನ ಸರ್ವಾಧ್ಯಕ್ಷರಾಗಿದ ಕಣ್ಣೂರು ಟಾಕಪ್ಪ, ಕಾಂತರಾಜ್ ಸೋಮಿನಕೊಪ್ಪ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ, ಯು.ಮಧುಸೂದನ್ ಐತಾಳ್, ಡಾ. ಕೆ. ಜಿ. ವೆಂಕಟೇಶ್, ಕೆ. ಎಚ್. ರಂಗಪ್ಪ, ಕೆ. ಜಿ. ಪ್ರಮೋದ್, ನಾಗರಾಜ್ ಕೆ. ಎಚ್. ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ತಡರಾತ್ರಿವರೆಗೆ ನಡೆಯುವ ಸಮ್ಮೇಳನದಲ್ಲಿ ಕೆ. ಯುವರಾಜ್, ಡಾ. ಅಪ್ಪಗೆರೆ ತಿಮ್ಮರಾಜ್, ರೇವಣಪ್ಪ ಮತ್ತು ತಂಡಿದಂದ ಜನಪದ ಗೀತೆಗಳ ಗಾಯನ, ನಾಗರಕೊಡಿಗೆ ತ್ರಿಣಿವೆ ಕಲಾನಾಥೇಶ್ವರ ಯುವತಿ ಮಂಡಳಿಯಿಂದ ಸೋಬಾನೆ, ಕುಟ್ಟುವ, ಬೀಸುವ ಪದ ಹಾಡಲಿದ್ದಾರೆ. ತೀರ್ಥಹಳ್ಳಿ ಯಲ್ಲಪ್ಪ ಭಾಗವತರ ದೇವಿ ಕುಣಿತ, ಈಸೂರಿನ ಬೇಗೂರು ಶಿವಪ್ಪ ಅವರಿಂದ ಲಾವಣಿ, ಬಟ್ಟೆಮಲ್ಲಪ್ಪದ ಆಂಜನೇಯ ಜೋಗಿ ತಂಡದಿಂದ ತತ್ವಪದ, ಚೆನ್ನಾಮ್ಮಾಜಿ ಹೊಸೂರಿನ ತಿಮ್ಮಪ್ಪ ಮತ್ತು ತಂಡ ಸುಗ್ಗಿ ಕುಣಿತ, ಜಾನಪದ ಲೋಕದ ಜಾನಪದ ಶ್ರೀ ಪ್ರಶಸ್ತಿ ಪುರಸ್ಕ್ರತ ಹೊಸೂರು ಗುಡ್ಡಪ್ಪಜೋಗಿ ತಂಡದ ಜೋಗಿಪದ, ರಾಮನಗರ ಜಾನಪದ ಲೋಕದ ಲೋಕೋತ್ಸವ ಪ್ರಶಸ್ತಿ ಪುರಸ್ಕೃತ ಭದ್ರಾವತಿ ಲಕ್ಷ್ಮಣರಾವ್ ಮತ್ತು ತಂಡ ಚೌಡಿಕೆ ಪದ ಹಾಡಿ ರಂಜಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾಂತರಾಜ್ ಸೋಮಿನಕೊಪ್ಪ, ಕೃಷ್ಣಮೂರ್ತಿ ಹಿಳ್ಳೋಡಿ, ಡಿ. ಗಣೇಶ್, ಸೋಮಿನಕಟ್ಟಿ, ಪರಶುರಾಮ ಮಟ್ಟೇರ, ಬಾಲರಾಜ್ ಚುರ್ಚುಗುಂಡಿ, ಡಾ. ಭಾಗ್ಯಲಕ್ಷ್ಮಿ, ರವಿಚೌವ್ಹಾಣ್, ಕೃಷ್ಣಮೂರ್ತಿ ಆಚಾರ್ ಉಪಸ್ಥಿತರಿದ್ದರು.