ಅನ್ನದಾತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತದಿಂದ ರೈತರೊಂದಿಗೆ ಸಮಾಲೋಚನೆ

KannadaprabhaNewsNetwork |  
Published : May 12, 2026, 01:15 AM IST
11ಕೆಆರ್ ಎಂಎನ್ 8.ಜೆಪಿಜಿಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ರೈತ ಮುಖಂಡರಿಂದ ಮನವಿ ಸ್ವೀಕರಿಸಿದರು. | Kannada Prabha

ಸಾರಾಂಶ

ಅಲ್ಲದೆ, ನಾನು ರೈತರ ಪರವಾಗಿದ್ದೇನೆ. ಬಿಡದಿ - ಹಾರೋಹಳ್ಳಿ ಮಾರ್ಗದ ರಸ್ತೆಯಲ್ಲಿ ಧರಣಿ ಕೈಬಿಟ್ಟು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ರೈತ ಮುಖಂಡರಲ್ಲಿ ಕೇಳಿ ಕೊಂಡರು. ಇದಕ್ಕೆ ಸ್ಪಂದಿಸಿದ ರೈತ ಮುಖಂಡರು, ರಸ್ತೆ ಮಧ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಕೈಬಿಡುತ್ತೇವೆ. ರಸ್ತೆ ಬದಿಯಲ್ಲಿ ನಡೆಯುತ್ತಿರುವ ಸರದಿ ಧರಣಿ ಮುಂದುವರಿಯಲಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಅನ್ನದಾತರ ಹೋರಾಟಕ್ಕೆ ಕೊನೆಗೂ ಮಣಿದ ಜಿಲ್ಲಾಡಳಿತ, ರೈತ ಮುಖಂಡರೊಂದಿಗೆ ಸೋಮವಾರ ಸಮಾಲೋಚನೆ ನಡೆಸಿತು.

ಬೈರಮಂಗಲ ವೃತ್ತದ ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ಜಾನುವಾರುಗಳು, ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳೊಂದಿಗೆ ರೈತರು ನಡೆಸಿದ ಅನಿರ್ದಿಷ್ಟಾವಧಿ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರಿಂದ ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅಲ್ಲದೆ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಚಳವಳಿ ತೀವ್ರ ಸ್ವರೂಪ ಪಡೆಯುತ್ತಿರುವುದನ್ನು ಅರಿತ ಜಿಲ್ಲಾಧಿಕಾರಿಗಳು ಪೊಲೀಸ್ ಅಧಿಕಾರಿಗಳ ಮೂಲಕ ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದರು.

ಅದರಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ರೈತ ಮುಖಂಡರು, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರನ್ನು ಭೇಟಿಯಾಗಿ ಸಚಿವ ಸಂಪುಟದ ಅನುಮೋದನೆ ಹಿಂಪಡೆಯಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಕೂಡಲೇ ಸಭೆ ನಿಗದಿ ಪಡಿಸಿ ರೈತರ ಅಹವಾಲು ಆಲಿಸಬೇಕು. ಅಲ್ಲಿವರೆಗೆ ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದರು.

ರೈತ ಮುಖಂಡರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರೈತರ ಹಕ್ಕೋತ್ತಾಯಗಳನ್ನು ಸಲ್ಲಿಸುವುದಾಗಿ ಭರವಸೆ ನೀಡಿದರು.

ಅಲ್ಲದೆ, ನಾನು ರೈತರ ಪರವಾಗಿದ್ದೇನೆ. ಬಿಡದಿ - ಹಾರೋಹಳ್ಳಿ ಮಾರ್ಗದ ರಸ್ತೆಯಲ್ಲಿ ಧರಣಿ ಕೈಬಿಟ್ಟು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ರೈತ ಮುಖಂಡರಲ್ಲಿ ಕೇಳಿ ಕೊಂಡರು. ಇದಕ್ಕೆ ಸ್ಪಂದಿಸಿದ ರೈತ ಮುಖಂಡರು, ರಸ್ತೆ ಮಧ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಕೈಬಿಡುತ್ತೇವೆ. ರಸ್ತೆ ಬದಿಯಲ್ಲಿ ನಡೆಯುತ್ತಿರುವ ಸರದಿ ಧರಣಿ ಮುಂದುವರಿಯಲಿದೆ ಎಂದು ಹೇಳಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ , ಸಚಿವ ಸಂಪುಟ ಸಭೆ ಬಳಿಕ ಹಿರಿಯ ಸಚಿವ ಎಚ್.ಕೆ.ಪಾಟೀಲ್ ರವರು ಬಿಡದಿ ಟೌನ್ ಶಿಪ್ ಯೋಜನೆಯ ಭೂ ಸ್ವಾಧೀನಕ್ಕೆ ರೈತರು ಒಪ್ಪಿಗೆ ಸೂಚಿಸಿದ್ದಾರೆಂದು ಹಸಿ ಸುಳ್ಳು ಹೇಳಿದ್ದರು. ಇದಕ್ಕೆ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸುವ ಮೂಲಕ ಉತ್ತರ ನೀಡಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಚಳವಳಿ ತೀವ್ರಗೊಳಿಸುತ್ತೇವೆ. ಸದ್ಯಕ್ಕೆ ಬೈರಮಂಗಲ ವೃತ್ತದ ಮಧ್ಯದಲ್ಲಿ ನಡೆಸುತ್ತಿರುವ ಧರಣಿಯನ್ನು ತೆರವು ಮಾಡುತ್ತೇವೆ. ನಿಗದಿತ ಸ್ಥಳದಲ್ಲಿ ಸರದಿ ಧರಣಿ ಮುಂದುವರಿಸುತ್ತೇವೆ. ಭೂ ಸ್ವಾಧೀನ ಪ್ರಕ್ರಿಯೆ ಮುಂದುವರಿಸಿದರೆ ತೀವ್ರ ಸ್ವರೂಪದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಯ್ಯ, ಪ್ರಕಾಶ್, ರವೀಂದ್ರನಾಥ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ನಾಗರಾಜು, ಬೈರೇಗೌಡ, ಆನಂದ್ , ಸುಮಾ, ಚೈತ್ರಾ, ಶ್ವೇತಾ, ಪ್ರಕಾಶ್ ಮತ್ತಿತರರು ಹಾಜರಿದ್ದರು.

----

ಅನ್ನದಾತರಿಂದ ರಸ್ತೆ ತಡೆ ತೆರವು

ಬೈರಮಂಗಲ ವೃತ್ತದಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್ ಹಾಗೂ ಜಾನುವಾರುಗಳೊಂದಿಗೆ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ರೈತರು ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಹಿಂಪಡೆದರು.

ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ - ಬಿಡದಿ ಟೌನ್ ಶಿಪ್ ) ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ವಾಪಸ್ ಪಡೆಯಬೇಕು ಹಾಗೂ ಭೂ ಸ್ವಾಧೀನ ರದ್ದು ಮಾಡುವಂತೆ ಒತ್ತಾಯಿಸಿ ರೈತರು ಜಾನುವಾರುಗಳ ಸಮೇತ ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ದರು.

ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 26 ಗ್ರಾಮಗಳಿಂದ ನೂರಾರು ರೈತರು ಜಾನುವಾರುಗಳು, ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಗಳ ಸಮೇತ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ಚಳವಳಿಯಲ್ಲಿ ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸುಮಾರು 24 ಗಂಟೆಗಳಿಗೂ ಅಧಿಕ ಕಾಲ ರೈತರು ರಸ್ತೆಯಲ್ಲೇ ಕುಳಿತಿದ್ದರು. ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ರೈತರು ರಸ್ತೆ ತಡೆ ಚಳವಳಿ ಹಿಂಪಡೆದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಮಾನಸದ ನಾಯಕನಿಗೆ ಕಣ್ಣೀರಿನ ಅಶ್ರುತರ್ಪಣ
ಸೂರನಹಳ್ಳಿಯಲ್ಲಿ ಸುಧಾಕರ್ ನೆನೆದು ಕಣ್ಣೀರು