ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಮಳೆ ತೀವ್ರ ಕ್ಷೀಣಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆ ಕರೆದು, ಚರ್ಚಿಸಿದರು.
ಬಳ್ಳಾರಿ: ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಮಳೆ ತೀವ್ರ ಕ್ಷೀಣಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆ ಕರೆದು, ಚರ್ಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳು ಸೂಪರ್ ಎಲ್ ನಿನೋ ಪ್ರಭಾವದಿಂದಾಗಿ ನೈರುತ್ಯ ಮುಂಗಾರು ಮಳೆಯ ಅಭಾವ ಉಂಟಾಗಿದೆ. ಇಡೀ ರಾಜ್ಯದಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದೆ. ಮಳೆ ಅಭಾವದ ನೇರ ಪರಿಣಾಮ ಜಲಾಶಯಗಳ ಮೇಲಾಗಿದ್ದು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಇದೇ ವೇಳೆಗೆ 72 ಟಿಎಂಸಿ ನೀರಿತ್ತು. ಪ್ರಸ್ತುತ ಜಲಾಶಯದಲ್ಲಿ ಕೇವಲ 26 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತವು ರೈತರೊಂದಿಗೆ ಸದಾ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನೀರಿನ ಅಭಾವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ರೈತರಿಗೆ ವಿಶೇಷ ಮಾರ್ಗದರ್ಶಿ ಬಿಡುಗಡೆ ಮಾಡಿದೆ. ಆಗಸ್ಟ್ ತಿಂಗಳ ವರೆಗೆ ಕಡಿಮೆ ತೇವಾಂಶದಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಾಂಪ್ರದಾಯಿಕ ಬೆಳೆಗಳನ್ನೇ ನೆಚ್ಚಿಕೊಳ್ಳದೆ. ಪ್ರಸ್ತುತ ಹವಾಮಾನಕ್ಕೆ ಸೂಕ್ತವಾದ ಬೆಳೆಗಳನ್ನು ಬೆಳೆಯಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ರೈತರ ಜಮೀನಿಗೆ ನೇರ ಭೇಟಿ
ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಭೆ ನಡೆಸಿ ನೀಡಿರುವ ನಿರ್ದೇಶನದಂತೆ ಜಿಲ್ಲಾಡಳಿತ ಮುಂದಿನ ಒಂದು ವಾರದಲ್ಲಿ ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಲಿದೆ. ರೈತರ ನೈಜ ಕಷ್ಟ-ನಷ್ಟಗಳನ್ನು ಪರಿಶೀಲಿಸಿ, ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ರೈತರ ಅಹವಾಲು ಮತ್ತು ಸಲಹೆಗಳನ್ನು ಆಲಿಸಿ ತಕ್ಷಣದ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಹಾಗೂ ಜಿಲ್ಲಾಡಳಿತವು ಈ ಬರವನ್ನ ಎದುರಿಸಲು ಸಂಪೂರ್ಣ ಸಿದ್ಧವಾಗಿದ್ದು, ರೈತರೊಂದಿಗೆ ಸದಾ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಮತ್ತು ಕುಡಿಯುವ ನೀರಿನ ಅಭಾವವನ್ನು ಎದುರಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಗ್ರಾಮೀಣ ಭಾಗದ ಬಡವರು ಹಾಗೂ ಉದ್ಯೋಗವಿಲ್ಲದವರು ಗುಳೆ ಹೋಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.ಆರ್‌ಡಿಪಿಆರ್ ವತಿಯಿಂದ ತುರ್ತು ಕುಡಿಯುವ ನೀರಿನ ಕಾಮಗಾರಿ, ಪೈಪ್‌ಲೈನ್ ರಿಪೇರಿ, ಫ್ಲಷಿಂಗ್ ಹಾಗೂ ರೀ-ಡ್ರಿಲ್ಲಿಂಗ್‌ಗಾಗಿ ಅಗತ್ಯ ಹಣ ಬಿಡುಗಡೆಯಾಗಿದೆ. ಅನುದಾನದ ಕೊರತೆ ಇಲ್ಲ. ಗ್ರಾಮೀಣ ಭಾಗದಲ್ಲಿ ಎದುರಾಗುವ ನೀರಿನ ಸಮಸ್ಯೆಗಳ ಕುರಿತು ಆರ್‌ಡಬ್ಯ್ಲೂಸ್ ಮತ್ತು ಪಿಡಿಒಗಳು ತಕ್ಷಣ ಸ್ಪಂದಿಸಬೇಕು. ಸಾರ್ವಜನಿಕರು ಕರೆ ಮಾಡಿದರೆ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾದರೆ ಸಾರ್ವಜನಿಕರು ಹಾಗೂ ರೈತ ಮುಖಂಡರು ನೇರವಾಗಿ ಆರ್‌ಡಬ್ಲ್ಯೂಎಸ್ ಅಥವಾ ಜಿಲ್ಲಾ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸಮಸ್ಯೆ ಇರುವಲ್ಲಿ ತಕ್ಷಣವೇ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಹರಿಸಲಿದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಮಾತನಾಡಿ, ಮಳೆ ಅಭಾವ ಹಾಗೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಹಿನ್ನೆಲೆಯಲ್ಲಿ, ಹೆಚ್ಚಿನ ನೀರು ಬೇಡುವ ಭತ್ತ ಮತ್ತು ಕಬ್ಬಿನ ಬದಲು ಸಜ್ಜೆ, ನವಣೆ, ಅರ್ಕ ಹಾಗೂ ಶೇಂಗಾದಂತಹ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ರೈತರು ಕಡ್ಡಾಯವಾಗಿ ''''''''ಬೆಳೆ ವಿಮೆ'''''''' ಮಾಡಿಸಿಕೊಳ್ಳಬೇಕು. ವಿಮೆ ನೋಂದಣಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಒಣ ಹುಲ್ಲಿನ ಅಭಾವ ಉಂಟಾಗುವ ಸಾಧ್ಯತೆಯಿದೆ. ಜಾನುವಾರುಗಳ ಹಿತದೃಷ್ಟಿಯಿಂದ ರೈತರು ತಮ್ಮ ಜಮೀನಿನಲ್ಲಿ ಹಸಿರು ಮೇವು ಬೆಳೆದುಕೊಳ್ಳುವುದು ಅಗತ್ಯ. ಪಶುಸಂಗೋಪನೆ ಮತ್ತು ಪಶುಆಸ್ಪತ್ರೆ ಇಲಾಖೆಯಿಂದ ಅಗತ್ಯವಿರುವ ಬೀಜದ ಕಿಟ್‌ಗಳನ್ನು ಪೂರೈಸಲಾಗುವುದು. ರೈತರು ಪಶುಸಖಿಯರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಡಿಸಿ ನಾಗೇಂದ್ರ ಪ್ರಸಾದ್.ಕೆ ಹೇಳಿದರು.
ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಮಾತನಾಡಿದರು. ಇದೇ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿದರು ಹಾಗೂ ಮನವಿ ಸಲ್ಲಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.